ಆತಿಥೇಯ ವೆಸ್ಟ್ ಇಂಡೀಸ್ ಎದುರು ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡುತ್ತಿದ್ದು, ಟೀಂ ಇಂಡಿಯಾ ಅತ್ಯಲ್ಪ ಓವರ್ಗಳಲ್ಲಿ ಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಕಡಿಮೆ ಎಸೆತಗಳಲ್ಲಿ 100 ದಾಖಲಿಸಿದ ತಂಡ ಎಂಬ ದಾಖಲೆ ಬರೆದ ಟೀಮ್ ಇಂಡಿಯಾ, 2001 ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ನಿರ್ಮಿಸಿದ್ದ ಶತಕ (13.2 ಓವರ್)ದ ದಾಖಲೆಯನ್ನು ಅಳಿಸಿಹಾಕಿದೆ.
ಪೋರ್ಟ್ ಆಫ್ ಸ್ಪೇನ್ ಟೆಸ್ಟ್ನ ನಾಲ್ಕನೇ ದಿನದಂದು ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ, ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕೇವಲ 34 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಇಬ್ಬರೂ 8.33 ರ ರನ್ರೇಟ್ನಲ್ಲಿ ರನ್ ಕಲೆಹಾಕಿದರು. ಇದು ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕದ ಪಾಲುದಾರಿಕೆಯ ದಾಖಲೆಯಾಗಿದೆ. ಅಲ್ಲದೆ ಇವರಿಬ್ಬರೂ 11.5 ಓವರ್ಗಳಲ್ಲಿ 98 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಮುಂದಿನ 3 ಎಸೆತಗಳಲ್ಲಿ ಟೀಂ ಇಂಡಿಯಾ 100 ರನ್ ಪೂರೈಸಿತು. ಅಂದರೆ 12.2 ಓವರ್ಗಳಲ್ಲಿ ತಂಡದ 100 ರನ್ಗಳು ಪೂರ್ಣಗೊಂಡವು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಇಷ್ಟು ವೇಗವಾಗಿ 100 ರನ್ ಪೂರೈಸಿಲ್ಲ. ಟೆಸ್ಟ್ ಇತಿಹಾಸದಲ್ಲಿ ಅತೀ ವೇಗದ ಶತಕದ ಜೊತೆಯಾಟ ಎಂಬ ದಾಖಲೆ ಬರೆಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಆಯೋಜನೆಯ ಎರಡು ಆವೃತ್ತಿಗಳ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಪಯಣದಲ್ಲಿ ಸತತ ರನ್ನರ್ ಆಪ್ ಪ್ರಶಸ್ತಿ ಪಡೆದಿರುವ ಟೀಮ್ ಇಂಡಿಯಾ 3ನೇ ಆವೃತ್ತಿಯನ್ನು ವೆಸ್ಟ್ ಇಂಡೀಸ್ ಪ್ರವಾಸದ ಮೂಲಕ ಆರಂಭಿಸಿದ್ದು, ಸರಣಿಯನ್ನು 2-0ಯಿಂದ ಶುಭರಾಂಭ ಮಾಡಲು ಎದುರು ನೋಡುತ್ತಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ 100 ರನ್ ಕಲೆಹಾಕಿದ ಟಾಪ್ 5 ತಂಡಗಳು
ಭಾರತ ವರ್ಸಸ್ ವೆಸ್ಟ್ ಇಂಡೀಸ್ – 2023-12.2 ಓವರ್
ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ – 2001- 13.2 ಓವರ್
ಇಂಗ್ಲೆಂಡ್ ವರ್ಸಸ್ ದಕ್ಷಿಣ ಆಫ್ರಿಕಾ – 1994- 13.3 ಓವರ್
ಬಾಂಗ್ಲಾದೇಶ ವರ್ಸಸ್ ವೆಸ್ಟ್ ಇಂಡೀಸ್ – 2012- 13.4 ಓವರ್
ಇಂಗ್ಲೆಂಡ್ ವರ್ಸಸ್ ಪಾಕಿಸ್ತಾನ – 2022- 13.4 ಓವರ್