ಇಂದಿನ ಯುವ ಜನತೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಲೋಕದಲ್ಲಿ ಮುಳಗಿದ್ದು, ಸಾಹಿತ್ಯದತ್ತ ಮುಖ ಮಾಡುತ್ತಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇಲ್ಲೊಂದು ಯುವ ಓದುಗ ಮತ್ತು ಲೇಖಕ ಬಳಗ ಸಾಹಿತ್ಯ ಲೋಕದಲ್ಲಿ ಹೊಸತೊಂದು ಅಲೆಯನ್ನೇ ಸೃಷ್ಟಿಸುತ್ತಿದೆ.
ಒಂದು ದಿನದ ಅಂತರದಲ್ಲಿ ಶುರುವಾದ “ಬಾ ಗುರು ಬುಕ್ ತಗೋ” ಮತ್ತು “ಅಪರಿಚಿತ ಓದುಗರು” ಈಗ ಹೊಸ ಸಾಹಿತ್ಯ ಲೋಕವನ್ನೇ ಸೃಷ್ಟಿಸಿವೆ. “ಬಾ ಗುರು ಬುಕ್ ತಗೋ” ಒಂದು ವಿನೂತನ ಪ್ರಯೋಗವಾಗಿದ್ದು, ಬೀದಿ ಬದಿಯಲಿ ಇಷ್ಟಪಟ್ಟು ಜೊತೆ ಸೇರುವ ಲೇಖಕರ ಸಮೇತ ತಮ್ಮ ಪುಸ್ತಕಗಳನ್ನು ತಾವೇ ಮಾರುವ ಪ್ರಯತ್ನವಾಗಿದೆ. ಲೇಖಕರಲ್ಲಿ ಮೂಡುವ ಅಹಂ ಭಾವವನ್ನು, ಬರವಣಿಗೆ ಎನ್ನುವುದು ಪ್ರಿವಿಲೈಜ್ಡ್ ಅನ್ನುವ ಭ್ರಮೆಯನ್ನ ಕಳಚಿ, ಓದುಗರನ್ನು ಲಘುವಾಗಿ ಪರಿಗಣಿಸದೇ, ಏನೂ ಗೊತ್ತಿಲ್ಲದ ಜನರ ಮುಂದೆ ಲೇಖಕರೇ ನಿಂತು ಹೊಸ ಅನುಭವಕ್ಕೆ ತೆರೆದುಕೊಳ್ಳುವ ಹೊಸತರದ ಪ್ರಯತ್ನ. ಇನ್ನು “ಅಪರಿಚಿತ ಓದುಗರು” ಕೂಡ ಒಂದು ವಿಶಿಷ್ಟ ಪ್ರಯೋಗವಾಗಿದ್ದು, ಅಪರಿಚಿತ ಪರಿಚಿತ ಓದುಗರನ್ನ ಕಬ್ಬನ್ ಪಾರ್ಕಿನಲ್ಲಿ ಸೇರಿಸಿ ಕೂರಿಸಿ ಓದು ನಡೆದು, ವಿಚಾರಗಳ ಚರ್ಚೆ, ಪುಸ್ತಕ ಬಿಡುಗಡೆ ಮತ್ತು ಪುಸ್ತಕ ಮಾರಾಟವೂ ಆಗುವ ಕಾರ್ಯಕ್ರಮ.
ಎರಡೂ ಕೂಡ ಕನ್ನಡ ಸಾಹಿತ್ಯದ, ಕನ್ನಡ ಓದುಗರ, ಲೇಖಕರ ದೃಷ್ಟಿಯಿಂದ ಹೊಸ ಪ್ರಯೋಗಗಳೇ. ಈ ಹಿಂದೆಯೂ ಇದೆಲ್ಲ ನಡೆದು ನಂತರ ನಿಂತಿತ್ತು ಆದರೆ ಈಗ ಮತ್ತೆ ಶುರುವಾಗಿದೆ. ಎರಡೂ ಪ್ರಯೋಗಗಳಿಗೂ ಎಲ್ಲ ಕಡೆಯಿಂದ ಬೆಂಬಲ ಸಿಗುತ್ತಿರುವುದು ಸಂತಸದ ವಿಚಾರವಾಗಿದೆ. ಎರಡೂ ಭಿನ್ನವಾದರೂ ಕೂಡಾ ಒಂದೇ ಸಲಕ್ಕೆ ಶುರುವಾಗಿ ಒಂದೇ ದಿನದ ಆಸು ಪಾಸು ನಡೆಯುವ ಕಾರಣ ಕೆಲವರಿಗೆ ಗೊಂದಲ ಉಂಟಾಗಿ ಆಯೋಜಕರ ಕಿವಿಗೆ ಬಿದ್ದು ಕಿರಿಕಿರಿ ಆಗಿರುವುದು ಇದೆ.
ಇವೆರಡು ಕಾರ್ಯಕ್ರಮಗಳು ಒಂದೇ ಉದ್ದೇಶ ಹೊತ್ತ ರೈಲಿನ ಎರಡು ಹಳಿಗಳು, ಆದರೆ ಬೇರೆ ಬೇರೆ ಅಲ್ಲ. ಮುಂದಿನ ದಿನಗಳಲ್ಲಿ ಸಾಹಿತ್ಯಾಸಕ್ತರೆಲ್ಲ ಎರಡು ಕಾರ್ಯಕ್ರಮಗಳಿಗೆ ಕೈ ಜೋಡಿಸುವ ಭರವಸೆಯನ್ನು ಬಾ ಗುರು ಬುಕ್ ತಗೋ ಮತ್ತು ಅಪರಿಚಿತ ಓದುಗರು ಬಳಗ ಹೊಂದಿವೆ. ಬಾ ಗುರು ಬುಕ್ ತಗೋ ಸದ್ಯಕ್ಕೆ ತಿಂಗಳಿಗೆ ಎರಡು ದಿನ ಮಾತ್ರ ನಡೆಯುವುದು.