ಬೆಂಗಳೂರು: ಈಗಾಗಲೇ ದಿನೇ ದಿನೇ ಹೆಚ್ಚುತ್ತಿರುವ ವಾಹನ ಅಪಘಾತಗಳ ಕಾರಣದಿಂದ ಸುದ್ದಿಯಲ್ಲಿರುವ ದಶಪಥಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯಲ್ಲಿ ಇನ್ನು ಮುಂದೆ ಅತಿ ವೇಗಪ್ರಿಯರ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಪೋಲೀಸ್ ಇಲಾಖೆ ಮುಂದಾಗಿದೆ.
ಈ ನೂತನ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯೂ ದಿನೇ ದಿನೇ ಹೆಚ್ಚಾಗುತ್ತಿದ್ದು ಕಳೆದ ಒಂದು ವರ್ಷದಲ್ಲಿ 5೦೦ ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದುಕ್ಕೂ ಹೆಚ್ಚು ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಸವಾರರ ಅತೀ ವೇಗವೇ ಅಪಘಾತಗಳಿಗೆ ಕಾರಣವೆಂದು ತಿಳಿದು ಬಂದಿದ್ದು ಅತಿ ವೇಗಕ್ಕೆ ಕಡಿವಾಣ ಹಾಕಲು ಪೋಲೀಸ್ ಇಲಾಖೆ ಸ್ಪೀಡ್ ರೇಡಾರ್ ಗನ್ (speed radar guns) ಮತ್ತು ವಾಹನಗಳ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾ ಗಳನ್ನು ಹೆದ್ದಾರಿಯಲ್ಲಿ ಅಳವಡಿಸಲು ಮುಂದಾಗಿದೆ.
ಸಾಮಾನ್ಯವಾಗಿ ಹೆದ್ದಾರಿಗಳ ಅಗಲಕ್ಕೆ ಅನುಗುಣವಾಗಿ ಪ್ರತೀ ಹೆದ್ದಾರಿಗೂ ವೇಗದ ಮಿತಿ ನಿಗದಿಪಡಿಸಲಾಗುತ್ತದೆ. ಅದರಂತೆ ಬೆಮೈ ಹೆದ್ದಾರಿಗೆ 100 ಕಿಲೋಮೀಟರ್ ಗರಿಷ್ಟ ವೇಗ ನಿಗದಿಪಡಿಸಲಾಗಿದೆ. ಇದನ್ನು ಮೀರಿದರೆ ದಂಡ ವಿಧಿಸಲಾಗುತ್ತದೆ ಎಂದು ರಸ್ತೆ ಸುರಕ್ಷಿತ ಮತ್ತು ಸಂಚಾರ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
Speed limit on Bengaluru- Mysore Expressway is 100 Kms / hr pic.twitter.com/7T0vqan3dW
— alok kumar (@alokkumar6994) July 4, 2023
ಈಗಾಗಲೇ ರಾಮನಗರ ಪೊಲೀಸರು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ನಿಗದಿತ ವೇಗದಲ್ಲಿ ಚಲಿಸದ ವಾಹನಗಳ ಪತ್ತೆಗಾಗಿ ಸ್ಪೀಡ್ ರಡಾರ್ ಗನ್ನ್ನು ಬಳಸಲು ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಮೈಸೂರು ಪೊಲೀಸರು ಬಳಸಲು ಶುರು ಮಾಡಲಿದ್ದಾರೆ. ಅದರಂತೆ ಜುಲೈ 4 ರಂದು ರಾಮನಗರ ಪೊಲೀಸರು 44 ವೇಗ ಮೀತಿ ಮೀರಿದ ವಾಹನಗಳ ಮೇಲೆ ಕೇಸ್ ಬುಕ್ ಮಾಡಿದ್ದಾರೆ ಎಂದಿದ್ದಾರೆ.
ಎಕ್ಸಪ್ರೆಸ್ ವೇ ನಲ್ಲಿ ನಡೆದಿರುವ ಬಹುತೇಕ ಅಪಘಾತಗಳು ಮಿತಿ ಮೀರಿದ ವೇಗದಿಂದ ಸಂಭವಿಸಿದ್ದಾಗಿದ್ದು ಬಹುತೇಕ ವಾಹನಗಳು 120-140 ಕಿಮಿ ವೇಗದಲ್ಲಿ ಚಾಲಿಸಿ ಅಪಘಾತಕ್ಕೀಡಾಗಿವೆ ಎಂದು ಅವರು ಹೇಳಿದ್ದಾರೆ. ಇನ್ನು ವೇಗದ ಚಾಲನೆಗೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಅತಿ ವೇಗದಲ್ಲಿ ಚಲಾಯಿಸುವವರನ್ನು ಯಾರು ತಡೆಯುವುದಿಲ್ಲ, ಆದರೆ ಸ್ವಯಂಚಾಲಿತ ಕ್ಯಾಮೆರಾಗಳು ವೇಗವನ್ನು ದಾಖಲಿಸಿಕೊಳ್ಳುತ್ತವೆ. ನಂತರ ಫೋಟೋದೊಂದಿಗೆ ಮನೆಗೆ ದಂಡದ ನೋಟೀಸ್ ಕಳಿಸಲಾಗುತ್ತದೆ. ಅಲ್ಲದೆ ದ್ವಿ ಮತ್ತು ತ್ರಿ ಚಕ್ರ ವಾಹನಗಳ ಓಡಾಟವು ಎಕ್ಸ್ಪ್ರೆಸ್ ವೇ ಯ ಇತರ ವಾಹನಗಳ ಓಡಾಟಕ್ಕೆ ಅಡಚಣೆ ಆಗುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ವಾಹನಗಳ ಸಂಚಾರವನ್ನು ಜುಲೈ 15 ರಿಂದ ನಿಷೇಧಿಸಲಿದೆ ಎಂದೂ ತಿಳಿದು ಬಂದಿದೆ.
ಎಕ್ಸ್ಪ್ರೆಸ್ವೇನಲ್ಲಿ ಅಪಘಾತ ಹೆಚ್ಚಳ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿ ‘ವಾಹನಗಳು ಗಂಟೆಗೆ 120 ಕಿಮೀ ಗರಿಷ್ಠ ವೇಗದ ಮಿತಿಯೊಂದಿಗೆ ಚಾಲಿಸಲು ಈ ಹೆದ್ದಾರಿಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ,ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರಿಗೆ ನೂರು ಕಿಲೋಮೀಟರ್ ಗಳ ಗರಿಷ್ಟ ಮಿತಿ ನಿಗದಿಪಡಿಸಲಾಗಿದೆ. 80 ಕಿಮೀ ನಿಂದ 100 ಕಿಮೀ ವೇಗದಲ್ಲಿ ಪ್ರಯಾಣಿಸುವಾಗ ಅಪಘಾತಗಳು ಸಂಭವಿಸುವುದಿಲ್ಲ. ಈ ವೇಗದಲ್ಲಿ ಪ್ರಯಾಣಿಸಿದಾಗಲೂ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಸೇರಬಹುದು. 10-15 ನಿಮಿಷ ಉಳಿಸುವುದಕ್ಕಾಗಿ ಜನರು ವೇಗದ ಮಿತಿಯನ್ನು ದಾಟಬಾರದು. ಐಷಾರಾಮಿ ಕಾರಿನಲ್ಲಿ, ಕೆಲವರು 140-150 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಿರುತ್ತಾರೆ ಅದನ್ನು ನೋಡಿ ದೇಶೀ ಸಣ್ಣ ಕಾರುಗಳ ಸವಾರರೂ ವೇಗದ ಮಿತಿ ಹೆಚ್ಚಿಸುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು.
ಇನ್ನಾದರೂ ಹೆಚ್ಚುತ್ತಿರುವ ವಾಹನ ಅಪಘಾತಗಳು ಕಡಿಮೆ ಆಗಲಿ ಎಂಬುದೇ ಎಲ್ಲರ ಆಶಯ.