ಬೆಂಗಳೂರು : ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಹೊಸ ಗ್ರೀನ್ ಫೀಲ್ಡ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ಅಭಿವೃದ್ಧಿ ಹೊಂದಿರದ ಪ್ರದೇಶದಲ್ಲಿ ಉತ್ಪಾದನಾ ಘಟಕ) ಅನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವ ಕುರಿತಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇಂದು ಮಹಾರಾಷ್ಟ್ರ ಸರ್ಕಾರದ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ.
ಕರ್ನಾಟಕದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಟಿಕೆಎಂ ಕರ್ನಾಟಕದ ಬಿಡದಿಯಲ್ಲಿ ಎರಡು ಅತ್ಯಾಧುನಿಕ ಘಟಕಗಳನ್ನು ಹೊಂದಿದ್ದು, ಜಾಗತಿಕ ಅಟೋಮೊಬೈಲ್ ಕ್ಷೇತ್ರದಲ್ಲಿ ಭಾರತವು ಮಹತ್ವದ ಸ್ಥಾನ ಹೊಂದಲು ಮಹತ್ವದ ಕೊಡುಗೆ ನೀಡುತ್ತಿದೆ.
ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಕೈಗಾರಿಕಾ ಇಲಾಖೆ) ಡಾ. ಹರ್ಷದೀಪ್ ಕಾಂಬ್ಳೆ (ಐಎಎಸ್) ಮತ್ತು ಟಿಕೆಎಂನ ನಿರ್ದೇಶಕರು ಮತ್ತು ಮುಖ್ಯ ಸಂವಹನ ಅಧಿಕಾರಿ ಆದ ಶ್ರೀ ಸುದೀಪ್ ಸಂತ್ರಮ್ ದಳವಿ ಅವರು ಮಹಾರಾಷ್ಟ್ರ ಸರ್ಕಾರದ ಜೊತೆಗಿನ ತಿಳುವಳಿಕೆ ಒಪ್ಪಂದ(ಎಂಓಯು)ವನ್ನು ಇಂದು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಗೌರವಾನ್ವಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಾನ್ಯ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಮಾನ್ಯ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಟಿಕೆಎಂ ಕಡೆಯಿಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಎಂಡಿ ಮತ್ತು ಸಿಇಓ ಹಾಗೂ ಟೊಯೊಟಾ ಮೋಟಾರ್ ಕಾರ್ಪೊರೇಷನ್ ನ (ಟಿಎಂಸಿ) ಪ್ರಾದೇಶಿಕ ಸಿಇಓ ಶ್ರೀ ಮಸಕಾಜು ಯೋಶಿಮುರಾ, ಟಿಕೆಎಂನ ವೈಸ್ ಚೇರ್ ಪರ್ಸನ್ ಶ್ರೀಮತಿ ಮಾನಸಿ ಟಾಟಾ, ಟಿಕೆಎಂನ ಉಪ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸ್ವಪ್ನೇಶ್ ಆರ್. ಮಾರು ಹಾಜರಿದ್ದರು.
ಟಿಕೆಎಂ 1999ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಂದಿನಿಂದಲೂ ಭಾರತದ ಪ್ರಾಮುಖ್ಯತೆ ಬೆಳೆಯುತ್ತಲೇ ಇದ್ದು, ಟೊಯೋಟಾಗೆ ಜಾಗತಿಕವಾಗಿ ಭಾರತವು ಮಹತ್ವದ ಮಾರುಕಟ್ಟೆಯಾಗಿದೆ. “ಭಾರತದ ಅಬಿವೃದ್ಧಿ – ಭಾರತದ ಜೊತೆಗೆ ಅಭಿವೃದ್ಧಿ” (ಗ್ರೋ ಇಂಡಿಯಾ, ಗ್ರೋ ವಿತ್ ಇಂಡಿಯಾ) ಎಂಬ ಸಿದ್ಧಾಂತವನ್ನಿಟ್ಟುಕೊಂಡು ಕಾರ್ಯಾಚರಣೆ ಮಾಡುತ್ತಿರುವ ಕಂಪನಿಯು ಕೌಶಲ್ಯಾಭಿವೃದ್ಧಿ, ಪ್ರಾದೇಶೀಕರಣ ಮತ್ತು ಸ್ಥಳೀಯ ಪ್ರದೇಶಗಳ ಅಭಿವೃದ್ಧಿ ಕುರಿತು ಹೆಚ್ಚು ಗಮನ ಹರಿಸುತ್ತಿರುವ ರಾಷ್ಟ್ರದ ಆದ್ಯತೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಕೆಲಸ ಮಾಡುತ್ತಿದೆ.
ಕಂಪನಿಯ ಕಾರ್ಯಾಚರಣೆ ಮತ್ತು ವಿಸ್ತರಣೆಯಲ್ಲಿ ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯದ ನೆರವು ಅಪಾರವಾಗಿದೆ. ಆ ನೆರವು ಕಂಪನಿಯ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಲು ಕಾರಣವಾಗಿದೆ ಮತ್ತು ಮುಂದಿನ ಹಂತದ ವಿಸ್ತರಣೆಗೆ ಮುಂದಾಗಲು ಉತ್ತೇಜನ ನೀಡಿದೆ. ಕಳೆದ 25 ವರ್ಷಗಳಲ್ಲಿ ಟೊಯೋಟಾ ಕಂಪನಿಯು ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ಮಾದರಿ ಕಂಪನಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದು, ಈ ಪ್ರದೇಶದಲ್ಲಿನ ದೊಡ್ಡ ಪ್ರಮಾಣದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಸಮೂಹ ಕಂಪನಿಗಳನ್ನು ಒಳಗೊಂಡು ರೂ. 16,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಜೊತೆಗೆ ಸರಿ ಸುಮಾರು 86,000 ಉದ್ಯೋಗಗಳನ್ನು (ಸಪ್ಲೈಯರ್ ಮತ್ತು ಡೀಲರ್ ಗಳು ಸೇರಿದಂತೆ) ನೀಡಿದೆ. ಆ ಮೂಲಕ ಮೇಕಿಂಗ್ ಇನ್ ಇಂಡಿಯಾ (ಭಾರತದಲ್ಲಿ ಉತ್ಪಾದನೆ) ಕುರಿತು ಭಾರತಕ್ಕೆ ಮಾತ್ರವೇ ಅಲ್ಲ, ಇಡೀ ಜಗತ್ತಿಗೆ ತಿಳಿಸಿದೆ. ವಿಶೇಷ ಎಂದರೆ ರಫ್ತು ವಿಭಾಗದಲ್ಲಿ ಮಹತ್ತರ ಸಾಧನೆ ಮಾಡಿರುವ ಕಂಪನಿಯು, ರೂ. 32,000 ಕೋಟಿಗಳಷ್ಟು ರಫ್ತು ವ್ಯವಹಾರವನ್ನು ಕೂಡ ಮಾಡಿದೆ. ಇವೆಲ್ಲದರ ಜೊತೆಗೆ ಕಂಪನಿಯು ತಳಮಟ್ಟದ ಕುಟುಂಬಗಳ ಜೀವನಕ್ಕೆ ಒಳಿತು ಮಾಡುವ ಉದ್ದೇಶದಿಂದ ನಡೆಸಿದ ಸಾಮಾಜಿಕ ಕೆಲಸಗಳಿಂದ 2.3 ಮಿಲಿಯನ್ ಗೂ ಹೆಚ್ಚು ಜನರ ಬದುಕಿನಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡಿದೆ.
ಮಹಾರಾಷ್ಟ್ರದಲ್ಲಿ ಹೊಸ ಗ್ರೀನ್ ಫೀಲ್ಡ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಸ್ಥಾಪನೆ ಕುರಿತು
ವಿಶ್ವ ದರ್ಜೆಯ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವುದರಿಂದ ಮತ್ತು ರಫ್ತು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಉತ್ಪನ್ನಗಳ ಪೋರ್ಟ್ ಫೋಲಿಯೋ ವಿಸ್ತರಿಸುವ ಕಾರಣಕ್ಕೆ ಹೊಸ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಭಾರತದ ಜೊತೆ ಬೆಳೆಯುವ ಕಂಪನಿಯ ಬದ್ಧತೆಗೆ ಇದು ಮತ್ತೊಂದು ಪುರಾವೆ ಆಗಿದೆ. ಹೊಸ ತಿಳುವಳಿಕೆ ಒಪ್ಪಂದದ (ಎಂಓಯು) ಅಡಿಯಲ್ಲಿ ಟಿಕೆಎಂ ಗುಣಮಟ್ಟದ ಗುಣಮಟ್ಟದ ಉತ್ಪನ್ನಗಳು ಮತ್ತು ಸರ್ವೀಸ್ ಗಳನ್ನು ಒದಗಿಸುವ ಜೊತೆಗೆ ಅತ್ಯಾಧುನಿಕ ಹಸಿರು ತಂತ್ರಜ್ಞಾನಗಳ ಕಡೆಗೆ ಗಮನ ಹರಿಸುವ ಸಲುವಾಗಿ ಗ್ರೀನ್ಫೀಲ್ಡ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ ಸ್ಥಾಪನೆಗೆ ಕಾರ್ಯ ನಿರ್ವಹಿಸಲಿದೆ. ಪ್ರಸ್ತಾವಿತ ಹೂಡಿಕೆ ಮಾತುಕತೆ ಅಂತಿಮಗೊಂಡರೆ ಬಹು ವರ್ಷಗಳ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಉತ್ಪಾದನಾ ಘಟಕ ಸ್ಥಾಪನೆ ಮಾಡುವ ನಿರೀಕ್ಷೆ ಇದೆ.
ಈಗ ಗುರುತಿಸಿರುವ ಸ್ಥಳವು ಬಿಸಿನೆಸ್ ಮತ್ತು ಸಾಗಾಣಿಕಾ ವಿಚಾರದಲ್ಲಿನ ಟಿಕೆಎಂನ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಹೆಚ್ಚು ಮಾಡಲಿದೆ. ಜೊತೆಗೆ ದೇಶದ ಒಳಗೆ ಮತ್ತು ವಿದೇಶಗಳ ವಿಸ್ತಾರವಾದ ಮಾರುಕಟ್ಟೆಗಳಿಗೆ ಕಂಪನಿಯು ಉತ್ಪನ್ನಗಳನ್ನು ಕಳುಹಿಸಲು ಅನುವು ಮಾಡಿಕೊಡಲಿದೆ. ಅದರಿಂದ ಉತ್ತಮ ಪ್ರಯೋಜನ ಉಂಟಾಗಲಿದ್ದು, ಸಾಕಷ್ಟು ಅಭಿವೃದ್ಧಿ ಅವಕಾಶಗಳು ದೊರೆಯಲಿವೆ.
ಈ ಸಂದರ್ಭದಲ್ಲಿ ಹಾಜರಿದ್ದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಎಂಡಿ ಮತ್ತು ಸಿಇಒ ಹಾಗೂ ಟೊಯೋಟಾ ಮೋಟಾರ್ ಕಾರ್ಪೊರೇಷನ್ ನ (ಟಿಎಂಸಿ) ಪ್ರಾದೇಶಿಕ ಸಿಇಓ ಶ್ರೀ ಮಸಕಾಜು ಯೋಶಿಮುರಾ ಅವರು ಮಾತನಾಡಿ, “ಶುದ್ಧ ಮತ್ತು ಹಸಿರು ಮೊಬಿಲಿಟಿ ಉತ್ಪನ್ನಗಳನ್ನು ಉತ್ಪಾದನೆ ಮಾಡಲು ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗುವ ಕುರಿತು ಟೊಯೋಟಾ ಮೋಟಾರ್ ಕಾರ್ಪೊರೇಷನ್ ಅಪಾರ ನಂಬಿಕೆ ಹೊಂದಿದೆ. ಇತ್ತೀಚೆಗೆ ನಡೆದ ಪ್ರಾದೇಶಿಕ ಪುನಾರಚನೆಯ ಬಳಿಗೆ ಈ ನಂಬಿಕೆ ಮತ್ತಷ್ಟು ಬಲಗೊಂಡಿದೆ. ಮಧ್ಯಪ್ರಾಚ್ಯ, ಪೂರ್ವ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಗಳು ಏಕೀಕರಣಗೊಳ್ಳುವ ಮೂಲಕ ಮತ್ತು ಹೊಸತಾಗಿ ರಚಿಸಲಾದ “ಭಾರತ, ಮಧ್ಯಪ್ರಾಚ್ಯ, ಪೂರ್ವ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶ”ಗಳ ಕೇಂದ್ರವಾಗಿ ಭಾರತವು ಕಾರ್ಯನಿರ್ವಹಿಸುವ ಮೂಲಕ ಒಟ್ಟಾರೆಯಾಗಿ ಭಾರತ ದೇಶವು ಕೇಂದ್ರ ಪಾತ್ರವನ್ನು ವಹಿಸಲಿದೆ. ಇವತ್ತಿನ ಈ ಎಂಓಯು ದೇಶದಲ್ಲಿ ಅಭಿವೃದ್ಧಿ ಪಥದಲ್ಲಿ ನಾವು ಮತ್ತೊಂದು ಹಂತಕ್ಕೆ ಹೋಗಿರುವುದನ್ನು ಸೂಚಿಸುತ್ತದೆ ಮತ್ತು ಈ ಒಪ್ಪಂದವು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಚಲನಶೀಲತೆ ಪರಿಹಾರಗಳನ್ನು ಒದಗಿಸುವ ಮೂಲಕ ಜನರ ಜೀವನವನ್ನು ಬದಲಿಸುವ ನಿಟ್ಟಿನಲ್ಲಿ ಕೊಡುಗೆ ನೀಡಲು ನಮಗೆ ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ವೇಸ್ ಚೇರ್ ಪರ್ಸನ್ ಶ್ರೀಮತಿ ಮಾನಸಿ ಟಾಟಾ ಅವರು, “ಬಿಡದಿಯಲ್ಲಿ ಕಳೆದ 25 ವರ್ಷಗಳ ಯಶಸ್ಸು ನಮಗೆ ಭದ್ರ ಬುನಾದಿಯನ್ನು ಮತ್ತು ಭಾರತದಲ್ಲಿ ಟೊಯೋಟಾದ ಅಭಿವೃದ್ದಿಗೆ ಮುಂದಿನ ಹಾದಿಯನ್ನು ಹಾಕಿಕೊಟ್ಟಿದೆ. “ಮೇಕ್ ಇನ್ ಇಂಡಿಯಾ” ಮತ್ತು “ಸ್ಕಿಲ್ ಇಂಡಿಯಾ” ಮೇಲೆ ನಾವು ಗಮನ ಹರಿಸಿದ್ದು, ಆ ಮೂಲಕ ಸುಸ್ಥಿರ, ದೀರ್ಘಕಾಲದ ಅಭಿವೃದ್ಧಿ ಪಥದಲ್ಲಿ ಸಾಗಲು ನಮಗೆ ಸಾಧ್ಯವಾಗಲಿದೆ. ಜೊತೆಗೆ ಇದರಿಂದಾಗಿ ಗ್ರಾಹಕರಿಗೆ ಶುದ್ಧ ಮತ್ತು ಹಸಿರು ಚಲನಶೀಲ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾಗಲಿದ್ದು, ಭಾರತ ಸರ್ಕಾರದ “ವಿಕಸಿತ ಭಾರತ 2027” ಮಾರ್ಗಸೂಚಿಗೆ ಅನುಗುಣವಾಗಿ ವೇಗವರ್ಧಕವಾಗಿ ಮುಂದೆ ಸಾಗಲು ಅನುಕೂಲವಾಗಲಿದೆ” ಎಂದು ಹೇಳಿದರು.
ಟಿಕೆಎಂನ ಉಪ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸ್ವಪ್ನೇಶ್ ಮಾರು ಮಾತನಾಡಿ, “ಕರ್ನಾಟಕ ರಾಜ್ಯವು ಶ್ರೇಷ್ಠ ಉತ್ಪಾದನಾ ಘಟಕವಾಗಿ ರೂಪುಗೊಳ್ಳಲು ನಮಗೆ ಅಪಾರ ಸಹಾಯ ಮಾಡಿದೆ. ಛತ್ರಪತಿ ಸಂಭಾಜಿ ನಗರದಲ್ಲಿ ಗ್ರೀನ್ ಫೀಲ್ಡ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ ಸ್ಥಾಪನೆಯ ಪ್ರಸ್ತಾವನೆಯು ಭಾರತದಲ್ಲಿ ಸುಸ್ಥಿರ ಚಲನಶೀಲತೆ ಕ್ಷೇತ್ರವನ್ನು ಬೆಳೆಸುವ ನಮ್ಮ ಬದ್ಧತೆಯ ಮುಂದುವರಿಕೆಯಾಗಿದೆ. ಇದು ಮರಾಠ ಪ್ರದೇಶದಲ್ಲಿ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಆರಂಭದ ಬಿಂದುವಾಗಿ ಕಾರ್ಯ ನಿರ್ವಹಿಸಲಿದ್ದು, ಆ ಪ್ರದೇಶದ ಉದ್ಯಮಶೀಲತೆ ಸಾಮರ್ಥ್ಯವನ್ನು ಕೂಡ ತೋರಿಸಲಿದೆ. ಯುವ ಜನತೆಗೆ ಹೊಸ ಕೌಶಲ್ಯಗಳನ್ನು ಒದಗಿಸುವ ಮೂಲಕ ಈ ಮರಾಠವಾಡ ಪ್ರದೇಶವು ಮಹಾರಾಷ್ಟ್ರದ ಬೆಳವಣಿಗೆಯಲ್ಲಿ ದೊಡ್ಡ ಕೊಡುಗೆ ನೀಡುವಂತೆ ರೂಪಿಸಲಾಗುತ್ತದೆ” ಎಂದು ಹೇಳಿದರು.
ಪ್ರಸ್ತುತ ಟಿಕೆಎಂ ಭಾರತದಲ್ಲಿ ಈಗಾಗಲೇ ಉತ್ಪಾದನಾ ಕ್ಷೇತ್ರದಲ್ಲಿ ವಿಶ್ವ ದರ್ಜೆಯ ವ್ಯವಸ್ಥೆಯನ್ನು ಹೊಂದಿದೆ. ಬಿಡದಿಯಲ್ಲಿ ಎರಡು ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ 3.42 ಲಕ್ಷ ವಾಹನಗಳನ್ನು ತಯಾರಿಸಲಾಗುತ್ತದೆ ಮತ್ತು 6000 ಮಂದಿಗೆ ಉದ್ಯೋಗ ಒದಗಿಸಲಾಗಿದೆ. ನಮ್ಮ ಎರಡೂ ಘಟಕಗಳಲ್ಲಿನ ಕಾರ್ಯಾಚರಣೆಗಳು ಹಸಿರು ಮತ್ತು ಉತ್ತಮ ಜಗತ್ತು ನಿರ್ಮಿಸುವ ಕಂಪನಿಯ ಬದ್ಧತೆಯ ಭಾಗವಾದ ಟೊಯೋಟಾ ಎನ್ವಿರಾನ್ಮೆಂಟಲ್ ಚಾಲೆಂಜ್ (ಟಿಇಸಿ) 2050 ಮಾರ್ಗಸೂಚಿಗೆ ಅನುಗುಣವಾಗಿ ನಡೆಯುತ್ತವೆ. ಟೊಯೋಟಾ ಟಿಇಸಿ 2050 ಮೂಲಕ ಇಂಗಾಲದ ತಟಸ್ಥತೆ (ಕಾರ್ಬನ್ ನ್ಯೂಟ್ರಾಲಿಟಿ) ಸಾಧಿಸುವ ಗುರಿಯನ್ನು ಹೊಂದಲಾಗಿದ್ದು, ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಈ ಘಟಕಗಳು ವಿಶ್ವ ದರ್ಜೆಯ ವಿವಿಧ ಭಾಗಗಳನ್ನು ಪೂರೈಸುವ 200ಕ್ಕೂ ಹೆಚ್ಚು ದೃಢವಾದ ಸಪ್ಲೈಯರ್ ಗಳ ಜಾಲವನ್ನು ಹೊಂದಿದ್ದು, “ಎಲ್ಲರಿಗೂ ಸಂತೋಷ” (ಹ್ಯಾಪ್ಪಿನೆಸ್ ಫಾರ್ ಆಲ್) ಎಂಬ ತತ್ವಕ್ಕೆ ಬದ್ಧವಾಗಿ ಕಂಪನಿಯು ನಡೆದುಕೊಳ್ಳುತ್ತಿದೆ.
2023ರಲ್ಲಿ ಟಿಕೆಎಂ ಹೊಸತಾಗಿ ರೂ.3300 ಕೋಟಿಗಳನ್ನು ಹೂಡಿಕೆ ಮಾಡುವ ಕುರಿತಾಗಿ ಘೋಷಣೆ ಮಾಡಿದ್ದು, ಬಿಡದಿಯಲ್ಲಿ ಮೂರನೇ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಈ ಹೊಸ ಘಟಕವು ಮೇಕ್ ಇನ್ ಇಂಡಿಯಾಗೆ ಕೊಡುಗೆ ನೀಡಲಿದ್ದು, ಟಿಕೆಎಂನ ಉತ್ಪಾದಾನಾ ಸಾಮರ್ಥ್ಯವನ್ನು 100,000 ಯೂನಿಟ್ಗಳಿಗೆ ಹೆಚ್ಚಿಸುತ್ತದೆ. ಈ ಮೂಲಕ ಪ್ರಾದೇಶಿಕ ಸಪ್ಲೈಯರ್ ಗಳ ಜಾಲ ವಿಸ್ತರಣೆಗೊಳ್ಳಲಿದ್ದು, ಕರ್ನಾಟಕ ರಾಜ್ಯದಲ್ಲಿ 2000ಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿ ಆಗಲಿದೆ. 2026ರಲ್ಲಿ ಈ ಮೂರನೇ ಘಟಕವು ಕಾರ್ಯ ನಿರ್ವಹಿಸುವ ನಿರೀಕ್ಷೆ ಇದ್ದು, ಬಿಡದಿಯಲ್ಲಿನ ಟಿಕೆಎಂ ಉತ್ಪಾದನಾ ಸಾಮರ್ಥ್ಯ ವಾರ್ಷಿಕವಾಗಿ 4.42 ಲಕ್ಷಕ್ಕೆ ಏರುವ ನಿರೀಕ್ಷೆ ಇದೆ.
ಇದಕ್ಕೂ ಮೊದಲು 2022ರಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ (ಟಿಕೆಎಪಿ) ಒಳಗೊಂಡ ಟೊಯೋಟಾ ಗ್ರೂಪ್ ಕಂಪನಿಗಳು ಇಂಗಾಲದ ಹೊರಸೂಸುವಿಕೆಯಲ್ಲಿ ಕಡಿಮೆ ಮಾಡುವ ಮತ್ತು ವಿದ್ಯುದ್ದೀಕರಣವನ್ನು ಹೆಚ್ಚಿಸುವ ಮತ್ತು ಹಸಿರು ತಂತ್ರಜ್ಞಾನಗಳ ಕಡೆಗೆ ವೇಗವಾಗಿ ಪರಿವರ್ತನೆ ಹೊಂದುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಜೊತೆಗೆ ರೂ. 4,100 ಕೋಟಿ ಹೂಡಿಕೆ ಮಾಡುವ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದ್ದುವು.