ಇಲ್ಲಿದೆ ಪ್ರಮುಖ ಸುದ್ದಿಗಳ ಕ್ವಿಕ್ ರೌಂಡ್ ಅಪ್
ಕಾಗಿನೆಲೆ ಮಹಾಸಂಸ್ಥಾನ ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು: ಸಿಎಂ ಸಿದ್ದರಾಮಯ್ಯ
ಸಮಸ್ತ ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ-ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಶೋಷಿತ ಸಮುದಾಯಗಳಿಗೆ ಧ್ವನಿ ಆಗುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯವನ್ನು ಒಟ್ಟಾಗಿಸಿ ಕಾಗಿನೆಲೆ ಮಹಾಸಂಸ್ಥಾನಕ್ಕೆ ನಾಂದಿ ಹಾಡಲಾಯಿತು. ಮೊದಲ ಸ್ವಾಮೀಜಿ ತಾರಕಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬರುತ್ತಿರುವ ಪೀಠ ಈಗ ನಿರಂಜನಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾಜಮುಖಿಯಾಗಿ ನಡೆಯುತ್ತಿದೆ ಎಂದರು.
ನಾವು ಚುನಾವಣೆ ವೇಳೆ ನೀಡಿರುವ ಐದೂ ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡುತ್ತೇವೆ. ನಮ್ಮ ಐದೂ ಘೋಷಣೆಗಳು ಜಾತಿ-ಧರ್ಮ ಮೀರಿದವುಗಳು. ಸರ್ವ ಜನಾಂಗದ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ.
ರಾಜ್ಯದಲ್ಲಿ ವೈಎಸ್ ಟಿ (YST) ತೆರಿಗೆ ಜಾರಿಗೆ ಬಂದಿದೆ: ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹೊಸದಾಗಿ ವೈಎಸ್ ಟಿ (YST) ತೆರಿಗೆ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ವೈಎಸ್ ಟಿ ಎಂದರೆ ಏನು? ಸ್ವಲ್ಪ ಬಿಡಿಸಿ ಹೇಳಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ? ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ, ನೀವೂ ಪತ್ತೆ ಹಚ್ಚಿ ಎಂದರು.
ವಸೂಲಿ ಮಾಡಿ ವರ್ಗಾವಣೆ ಮಾಡುವ ದಂಧೆ ಮಾಡದೇ ವಸೂಲಿ ಶುರುವಾಗಿದೆ. ಅಧಿಕಾರಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ರಾತ್ರಿ ಒಂದು ಗಂಟೆಯವರೆಗೆ ಸಭೆ ಮಾಡ್ತಾ ಇದ್ದಾರಲ್ಲಾ.. ಅದು ಏತಕ್ಕೆ? ಸರಕಾರಿ ಕಚೇರಿ ಏಕೆ ಸಭೆಗಳನ್ನು ನಡೆಸಲ್ಲ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಬಿಎಸ್ ವೈ ಗೆ ಕೇಂದ್ರ ಬಿಜೆಪಿ ನಾಯಕರಿಂದ ಬುಲಾವ್!
ಕರ್ನಾಟಕ ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪಗೆ ಕೇಂದ್ರದಿಂದ ಬುಲಾವ್ ಬಂದಿದೆ.
ಭಾನುವಾರ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಪ್ರಯಾಣ ನಡೆಸಿದ್ದಾರೆ. ಬಿಎಸ್ವೈ ದೆಹಲಿ ಪ್ರಯಾಣದ ಬಗ್ಗೆ ಪಕ್ಷದ ಪ್ರಮುಖರು ಯಾವುದೇ ಮಾಹಿತಿ ನೀಡಿಲ್ಲವಾದರೂ, ಪಕ್ಷದ ಮೂಲಗಳ ಪ್ರಕಾರ ವಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥರ ಹುದ್ದೆಗಳ ಅಭ್ಯರ್ಥಿಗಳನ್ನು ನಿರ್ಧರಿಸಲು ಬಿಎಸ್ ವೈ ಅವರನ್ನು ದೆಹಲಿಗೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನನ್ನನ್ನು ನವದೆಹಲಿಗೆ ಕರೆಸಿಕೊಂಡಿದ್ದಾರೆ. ವಿಷಯ ಏನೆಂದು ನನಗೆ ಗೊತ್ತಿಲ್ಲ ಎಂದು ಯಡಿಯೂರಪ್ಪ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎರಡು ಉನ್ನತ ಹುದ್ದೆಗಳಿಗಾಗಿ ಪಕ್ಷದಲ್ಲಿ ಲಾಬಿ ನಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅಂತಹ ವಿಷಯಗಳ ಬಗ್ಗೆ ರಾಷ್ಟ್ರೀಯ ನಾಯಕರು ಮಾತ್ರ ಕರೆ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.
ಚುನಾವಣಾ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು. ನಾನು ಕೂಡ ಇದರಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ
ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದೆ. ಎನ್ ಸಿಪಿ ನಾಯಕ ಅಜಿತ್ ಪವಾರ್ ಬಂಡಾಯವೆದ್ದು ಹಲವಾರು ಶಾಸಕರೊಂದಿಗೆ ಶಿಂಧೆ ಸರ್ಕಾರ ಸೇರಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ರಾಜಭವನದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಎನ್ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಕೂಡ ಮಹಾರಾಷ್ಟ್ರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರದ ವೇಳೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ರಾಜಭವನದಲ್ಲಿ ಉಪಸ್ಥಿತರಿದ್ದರು.