ಇಲ್ಲಿದೆ ರಾಜ್ಯದ ಪ್ರಮುಖ ಸುದ್ದಿಗಳ ರೌಂಡ್ ಅಪ್!
ಡೀಸೆಲ್ ಬಸ್ಗಳಿಗೆ ಇ.ವಿ. ರೂಪ ಕೊಡಲು ತೈವಾನ್ ಒಲವು
ಬಿಎಂಟಿಸಿ ಡೀಸೆಲ್ ಬಸ್ಸುಗಳನ್ನು ವಿದ್ಯುತ್ ಚಾಲಿತ ವಾಹನಗಳನ್ನಾಗಿ ಪರಿವರ್ತಿಸಿ, ಮರುಬಳಕೆಗೆ ಅಣಿಗೊಳಿಸಲು ತೈವಾನ್ನ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ. ಇದರಿಂದ ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದ್ದು, ಈ ಸಂಬಂಧ ಸಾರಿಗೆ ಇಲಾಖೆಯ ಜತೆ ಮಾತನಾಡಿ ಸಂಪರ್ಕಸೇತುವಾಗಿ ಕೆಲಸ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ರಾಜ್ಯದಲ್ಲಿ ಹೂಡಿಕೆ ಮಾಡುವ ಸಂಬಂಧ ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡಿರುವ ತೈವಾನ್ ಇಂಡಿಯಾ ಬಿಝಿನೆಸ್ ಅಸೋಸಿಯೇಷನ್ನ (ಟಿಐಬಿಎ) 50ಕ್ಕೂ ಹೆಚ್ಚು ಹೂಡಿಕೆದಾರರ ಜತೆ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು.
“ಸದ್ಯಕ್ಕೆ ನಮ್ಮಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ಇ.ವಿ. ಬಸ್ ಗಳನ್ನು ಓಡಿಸುತ್ತಿದ್ದೇವೆ. ಆದರೆ ಡೀಸೆಲ್ ಬಸ್ ಗಳನ್ನು ವಿದ್ಯುತ್ ಚಾಲಿತ ವಾಹನಗಳನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕಾಗಿದೆ. ಇದು ಇವತ್ತಿನ ಅಗತ್ಯ ಕೂಡ. ನೀವು ಮುಂದೆ ಬರುವುದಾದರೆ ಸಾರಿಗೆ ಸಂಸ್ಥೆಗಳ ಜತೆ ಸಂಪರ್ಕ ಕಲ್ಪಿಸಲಾಗುವುದು” ಎಂದರು.
ಇದೇ ರೀತಿಯಲ್ಲಿ ತುಮಕೂರು ಮಶೀನ್ ಟೂಲ್ಸ್ ಪಾರ್ಕ್ (ಟಿಎಂಟಿಪಿ) ಅನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮೈಸೂರಿನ ಕೋಚನಹಳ್ಳಿ ಮತ್ತು ಧಾರವಾಡದ ಕೋಟೂರು-ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಇಎಂಸಿ 2.0 ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ತೈವಾನ್ ಕಂಪನಿಗಳ ಸಹಭಾಗಿತ್ವ ಹೊಂದುವ ಆಸಕ್ತಿ ಇದೆ ಎಂದು ಅವರು ತಿಳಿಸಿದರು.
4ರಂದು ಸದನದ ಒಳಗೆ, ಹೊರಗೆ ಹೋರಾಟ-ಬಿಎಸ್ವೈ
ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ವಿಧಾನಸೌಧದ ಮುಂದೆ ಗಾಂಧಿ ಪ್ರತಿಮೆ ಬಳಿಯಲ್ಲಿ ಜುಲೈ 4ರಂದು ನಮ್ಮ ನೂರಾರು ಕಾರ್ಯಕರ್ತರು ಬೆಳಿಗ್ಗೆಯಿಂದ ಸಂಜೆವರೆಗೆ ಒಂದು ದಿನ ಧರಣಿ ಸತ್ಯಾಗ್ರಹ ಮಾಡಲಿದ್ದಾರೆ. ಬಿಜೆಪಿ ಚುನಾಯಿತ ಪ್ರತಿನಿಧಿಗಳು ಸದನದ ಒಳಗೂ ಹೋರಾಟ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಮನೆಮನೆಗೆ ಹೋಗಿ ಸಿದ್ದರಾಮಯ್ಯ, ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟ ಗ್ಯಾರಂಟಿ ಕಾರ್ಡಿನ ಅಂಶಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಲು ಅವರು ಆಗ್ರಹಿಸಿದರು. ಈ ಕುರಿತು ಪಕ್ಷದ ಮುಖಂಡರ ಸಭೆಯಲ್ಲಿ ಚರ್ಚಿಸಿದ್ದಾಗಿ ವಿವರಿಸಿದರು.
ಅವರು ಭರವಸೆ ಕೊಟ್ಟಂತೆ 10 ಕೆಜಿ ಅಕ್ಕಿ ಕೊಡಬೇಕು; ಎಲ್ಲ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ, ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ 1500 ರೂ. ಕೊಡಬೇಕು, 200 ಯೂನಿಟ್ ಕರೆಂಟ್ ಕೊಡಲೇಬೇಕು, 80 ಯೂನಿಟ್ ಎಂಬ ಕಂಡಿಷನ್ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಅವರೇ ಭರವಸೆ ನೀಡಿದಂತೆ ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ಕೊಡಬೇಕು. ಕರೆಂಟ್ ಬಿಲ್ ತೀವ್ರವಾಗಿ ಹೆಚ್ಚಾಗಿದ್ದು, ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು. 4ರಂದು ಸದನದ ಒಳಗೆ ಮತ್ತು ಹೊರಗಡೆ ನಾನು ಮತ್ತು ಪಕ್ಷದ ಪ್ರಮುಖರು ಧರಣಿ ನಡೆಸಲಿದ್ದೇವೆ ಎಂದು ವಿವರಿಸಿದರು.
ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್: ಟ್ವಿಟರ್ ಸಂಸ್ಥೆಗೆ 50 ಲಕ್ಷ ರೂ ದಂಡ
ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಹಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಟ್ವಿಟರ್ ಸಂಸ್ಥೆಗೆ 50 ಲಕ್ಷ ದಂಡ ವಿಧಿಸಿದ್ದು, ಮುಂದಿನ 45 ದಿನಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ಪ್ರತಿ ದಿನಕ್ಕೆ 5 ಸಾವಿರ ದಂತೆ ಹೆಚ್ಚುವರಿ ಪಾವತಿ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ತನ್ನ ಗ್ರಾಹಕರ ಖಾತೆಗಳ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಟ್ವಿಟರ್ ಐಎನ್ಸಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಕಾಯ್ದಿರಿಸಿದ್ದ ಆದೇಶವನ್ನು ಇಂದು (ಶುಕ್ರವಾರ) ಪ್ರಕಟ ಮಾಡಿದೆ. ಇದೇ ಸಂದರ್ಭದಲ್ಲಿ ಆದೇಶಕ್ಕೆ ತಡೆ ನೀಡುವಂತೆ ಟ್ವಿಟರ್ ಪರ ವಕೀಲರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಅಲ್ಲದೆ, ಟ್ವಿಟರ್ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎಂಟು ಪ್ರಶ್ನೆಗಳನ್ನು ರೂಪಿಸಿದ್ದು, ಅದರಲ್ಲಿ ವಿದೇಶಿ ಕಂಪೆನಿ ಭಾರತದಲ್ಲಿ ಅರ್ಜಿ ಸಲ್ಲಿಸಬಹುದೇ ಎಂಬ ಒಂದು ಪ್ರಶ್ನೆ ಮಾತ್ರ ಅರ್ಜಿದಾರರ ಪರವಾಗಿದೆ. ಇನ್ನುಳಿದಂತೆ ಎಲ್ಲ ಪ್ರಶ್ನೆಗಳು ಟ್ವಿಟರ್ಗೆ ವಿರುದ್ಧವಾಗಿದೆ. ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ಹತ್ತು ನಿರ್ಬಂಧ ಆದೇಶ ಮತ್ತು 2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್ಎಲ್ಗಳನ್ನು ತೆಗೆದು ಹಾಕುವಂತೆ ಟ್ವಿಟರ್ಗೆ ನಿರ್ದೇಶಿಸಿತ್ತು. ಒಟ್ಟು 1,474 ಖಾತೆಗಳು ಮತ್ತು 175 ಟ್ವಿಟರ್ ಯುಆರ್ಎಲ್ಗಳ ಪೈಕಿ 39 ಯುಆರ್ಎಲ್ಗಳನ್ನು ಮಾತ್ರ ನಿರ್ಬಂಧಿಸಿರುವ ಆದೇಶವನ್ನು ಮಾತ್ರ ಟ್ವಿಟರ್ ಅರ್ಜಿಯಲ್ಲಿ ಪ್ರಶ್ನಿಸಿತ್ತು. ಕೇಂದ್ರದ ಆದೇಶ ಪಾಲಿಸದೇ ಇದ್ದಕ್ಕಿದ್ದಂತೇ ಟ್ವಿಟರ್ ನ್ಯಾಯಾಲಯದ ಕದ ತಟ್ಟಿದೆ. ಟ್ವಿಟರ್ ಬಿಲಿಯನ್ ಡಾಲರ್ ಕಂಪೆನಿಯಾಗಿದ್ದು, ರೈತರು, ಕಾರ್ಮಿಕರಂತಲ್ಲ. ಹೀಗಾಗಿ ದಂಡ ವಿಧಿಸಿರುವುದಾಗಿ ಪೀಠ ತಿಳಿಸಿದೆ.
ಅಲ್ಲದೆ, ಭಾರತ ಆಕ್ರಮಿತ ಕಾಶ್ಮೀರದ ಕುರಿತು ಯಾರೋ ಒಬ್ಬರು ಊಹಾತ್ಮಕವಾದ ಪಾಕಿಸ್ತಾನ ಸರ್ಕಾರದ ಹೆಸರಿನಲ್ಲಿ ಟ್ವೀಟ್ ಮಾಡುತ್ತಾರೆ. ಮತ್ತಾರೋ ಪ್ರಭಾಕರನ್ ಹೀರೊ (ಹತರಾದ ಎಲ್ಟಿಟಿಇ ಮುಖಂಡ), ಅವರು ಮರಳಿ ಬರುತ್ತಿದ್ದಾರೆ ಎನ್ನುತ್ತಾರೆ. ಇದೆಲ್ಲವೂ ಅಪಾಯಕಾರಿಯಾಗಿದ್ದು, ಗಲಭೆ ಸೃಷ್ಟಿಸಬಹುದು. ಇದರ ಮೇಲೆ ನಿಗಾ ಇಡುವುದು ಸರ್ಕಾರಕ್ಕೆ ಕಷ್ಟವಾಗಿರಲಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು
ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ ಮುಸ್ಲಿಂ ಚಿಂತಕರ ಚಾವಡಿ
ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳನ್ನು ಪುನರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ ಚಿಂತಕರ ಚಾವಡಿಯ ಕೇಂದ್ರ ಮಂಡಳಿಯ ನಿಯೋಗವು ಇಂದು ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಸಂಧರ್ಭದಲ್ಲಿ ಮಾತನಾಡುತ್ತಿದ್ದರು.
ಸರ್ಕಾರ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು ಈಗಲೇ ಅನುಷ್ಠಾನಕ್ಕೆ ತರುತ್ತಿದ್ದು, ಮುಂದಿನ ವರ್ಷದಿಂದ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನಿಗದಿಪಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಚಾವಡಿಯು ಒಂದು ದಶಕದಿಂದ ಕರ್ನಾಟಕದ ಜನಪರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದೆ. ಸಾಹಿತ್ಯ ಕ್ಷೇತ್ರ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ , ವಿದ್ಯಾರ್ಥಿ, ಹಾಗೂ ದಲಿತ ಚಳವಳಿಗಳು ಹಾಗೂ ಜನಪರವಾದ ಇತರೆ ಹೋರಾಟಗಳೊಂದಿಗೆ ಗುರುತಿಸಿಕೊಂಡಿದೆ. ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಚಾವಡಿ ಒತ್ತು ನೀಡಿದೆ. ತನ್ನ ಧರ್ಮದ ಕೋಮುವಾದವನ್ನು ವಿರೋಧಿಸುತ್ತಲೇ ಇನ್ನೊಂದರ ಕೋಮುವಾದವನ್ನು ವಿರೋಧಿಸುವ ಕೆಲಸ ಮಾಡುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.
ಕಳೆದ ಐದು ವರ್ಷಗಳಿಂದ ಸರ್ಕಾರದ ಯೋಜನೆಗಳಿಂದ ಸಮುದಾಯ ವಂಚಿತವಾಗಿದ್ದು, ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಇಲಾಖೆ ಹಾಗೂ ನಿಗಮಗಳಲ್ಲಿ ಅನುದಾನ ಹೆಚ್ಚಳ, ವಸತಿಶಾಲೆ, ಜಿಲ್ಲೆಗೊಂದು ಅಲ್ಪಸಂಖ್ಯಾತರ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸುವ ಕುರಿತು ಬೇಡಿಕೆಗಳನ್ನು ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಚಾವಡಿಯ ಅಧ್ಯಕ್ಷ ಮುಜಾಫರ್ ಅಸಾದಿ, ಮಸ್ತಾನ್ ಬಿರಾದರ್, ಬಾನು ಮುಷ್ತಾಖ್, ರಹಮತ್ ತರೀಕೆರೆ ಮೊದಲಾದವರು ಉಪಸ್ಥಿತರಿದ್ದರು.