ಕೆನಡಾದ ಪರೇಡ್ ನಲ್ಲಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ದಚಿತ್ರ ಪ್ರದರ್ಶನ
ಕೆನಡಾದ ಬ್ರ್ಯಾಂಪ್ಟನ್ ನಲ್ಲಿ ನಡೆದ ಪರೇಡ್ ನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸ್ತಬ್ದಚಿತ್ರವನ್ನು ಪ್ರದರ್ಶಿಸಲಾಗಿದೆ.
ಈ ಬಗ್ಗೆ ಭಾರತದಲ್ಲಿರುವ ಕೆನಡಾದ ಹೈ ಕಮಿಷನರ್ ಕೆಮರಾನ್ ಮ್ಯಾಕೆ ಮಾಹಿತಿ ನೀಡಿದ್ದು, ಭಾರತದ ಮಾಜಿ ಪ್ರಧಾನಿಯೊಬ್ಬರ ಹತ್ಯೆಯನ್ನು ಸಂಭ್ರಮಿಸಿರುವುದು ಸೂಕ್ತವಲ್ಲ. ಅಂತಹ ಘಟನೆಯನ್ನು ವೈಭವೀಕರಿಸುವುದನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಆ ಟ್ಯಾಬ್ಲೋದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವರು ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರನ್ನು ಟ್ಯಾಗ್ ಮಾಡುವ ಮೂಲಕ ಈ ಘಟನೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರು, ಕೆನಡಾ ಅಧಿಕಾರಿಗಳೊಂದಿಗೆ ಈ ಬಗ್ಗೆ ಗಂಭೀರ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಆಗಸ್ಟ್ ನಲ್ಲಿ ಅನುಷ್ಠಾನಕ್ಕೆ ಬರಲಿವೆ ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆಗಳು!
ರಾಜ್ಯ ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಯಾರಿ ನಡೆಯುತ್ತಿದೆ. ಈ ನಿಮಿತ್ತ ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಜ್ಜಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆದಿದೆ. ಎಲ್ಲಾ ಗ್ಯಾರೆಂಟಿಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳವಾಗಿರಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಆಗಸ್ಟ್ 1 ರಂದು ಕಲಬುರುಗಿಯಲ್ಲಿ ಚಾಲನೆ ನೀಡುವ ಬಗ್ಗೆ ಚರ್ಚಿಸಲಾಗಿದೆ. ಇನ್ನು ಗೃಹ ಲಕ್ಷ್ಮೀ ಯೋಜನೆಯನ್ನು ಆ. 17 ಅಥವಾ 18 ರಂದು ಬೆಳಗಾವಿಯಲ್ಲಿ ಚಾಲನೆ ನೀಡುವ ಬಗ್ಗೆ ಚರ್ಚಿಸಲಾಗಿದೆ.
ಗಮನಿಸಿ: ಈ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳ ದರ ಶೇ. 60 ರಷ್ಟು ಇಳಿಕೆ: ಸಚಿವ ಸಿಂಧಿಯಾ
ರಾಷ್ಟ್ರ ರಾಜಧಾನಿ ದೆಹಲಿಯಿಂದ ಹೊರಡುವ ಕೆಲವು ಮಾರ್ಗಗಳ ವಿಮಾನ ದರವನ್ನು ಶೇ.14ರಿಂದ 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ದೆಹಲಿಯಿಂದ ಶ್ರೀನಗರ, ಪುಣೆ, ಮುಂಬೈ ಹಾಗೂ ಲೇಹ್ ಗೆ ಸಂಪರ್ಕ ಕಲ್ಪಿಸುವ ವಿಮಾನಗಳ ದರವನ್ನು ಶೇ.14ರಿಂದ 61ರಷ್ಟು ಇಳಿಕೆ ಮಾಡಲಾಗಿದ್ದು, ಈ ದರವು ಜೂ.6ರಿಂದಲೇ ಜಾರಿಗೆ ಬಂದಿದೆ ಎಂದಿದ್ದಾರೆ.
ವಿಮಾನಯಾನ ಸಂಸ್ಥೆಗಳಿಗೆ ದರ ನಿಗದಿ ಪಡಿಸುವ ಅಧಿಕಾರವಿದೆ. ಅದನ್ನು ಸೀಸನ್ ಗಳಿಗೆ ಅಥವಾ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿವಿಧ ವಿಮಾನಯಾನ ಸಂಸ್ಥೆಗಳ ಸಲಹಾ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ದರ ಕಡಿತ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು.
500 ರೂ. ನೋಟು ಬದಲಾವಣೆ ಬಗ್ಗೆ ಚರ್ಚೆ ಇಲ್ಲ: ಗವರ್ನರ್ ಶಕ್ತಿಕಾಂತ ದಾಸ್
500 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂ. ನೋಟುಗಳನ್ನು ಮರು ಚಲಾವಣೆ ಬಗ್ಗೆ ಆರ್ ಬಿಐ ಯಾವುದೇ ಯೋಜನೆ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟ ಪಡಿಸಿದ್ದಾರೆ.
ಆರ್ ಬಿಐ 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಚರ್ಚೆ ನಡೆದಿಲ್ಲ. ಜನರು ಯಾವುದೇ ಊಹಾಪೋಹ ಸೃಷ್ಟಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಈಗಾಗಲೇ ಶೇ.50ರಷ್ಟು ನೋಟುಗಳು ವಾಪಾಸ್ ಬಂದಿವೆ. ವಾಪಾಸ್ ಬಂದಿರುವ ನೋಟುಗಳ ಮೌಲ್ಯ 1.82 ಲಕ್ಷ ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
2,000 ರೂ.ಗಳ ಒಟ್ಟು 3.62 ಲಕ್ಷ ಕೋಟಿ ರೂ. ನೋಟುಗಳು ಚಲಾವಣೆಯಲ್ಲಿವೆ ಎಂದರು.