ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್ ಐ ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಕುಸ್ತಿಪಟುಗಳು, ಬ್ರಿಜ್ ಭೂಷಣ್ ಸಿಂಗ್ ರ ಬಂಧನಕ್ಕೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಜೂನ್ 15ರ ವರೆಗೆ ಪ್ರತಿಭಟನೆ ಹಿಂಪಡೆಯಲು ಕುಸ್ತಿಪಟುಗಳು ಒಪ್ಪಿಕೊಂಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಇಂದು ಪ್ರತಿಭಟನಾನಿರತ ಕುಸ್ತಿಪಟುಗಳೊಂದಿಗೆ ಸುಮಾರು 5 ಗಂಟೆಗಳ ಕಾಲ ಸಭೆ ನಡೆಸಿದರು.
ಬ್ರಿಜ್ ಭೂಷಣ್ ವಿರುದ್ಧ ಇರುವ ಆರೋಪದ ಕುರಿತು ಅಧಿಕಾರಿಗಳು ಜೂನ್ 15ರೊಳಗೆ ತನಿಖೆ ಪೂರ್ಣಗೊಳಿಸಲಿದ್ದಾರೆ. ಅಲ್ಲಿಯವರೆಗೆ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ.
–
ಒಡಿಶಾದಲ್ಲಿ ಒಂದರ ಹಿಂದೆ ಒಂದಂತೆ ರೈಲು ಅಪಘಾತಗಳು ನಡೆಯುತ್ತಿವೆ. ಇದೀಗ ಇಂದು ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ ಸಂಭವಿಸಿದೆ.
ಜಾಜ್ಪುರ ರಸ್ತೆ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ದಿಢೀರನೆ ಗುಡುಗು ಸಹಿತ ಮಳೆಯಾಗಿದ್ದು, ಅಲ್ಲೇ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಗೂಡ್ಸ್ ರೈಲಿನ ಅಡಿಯಲ್ಲಿ ಆಶ್ರಯ ಪಡೆದಿದ್ದಾಗ ರೈಲು ಚಲಿಸಲು ಪ್ರಾರಂಭಿಸಿದೆ. ಇದರಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ವಕ್ತಾರರು ಹೇಳಿದ್ದಾರೆ.
–
ಪ್ರಧಾನಿ ನರೇಂದ್ರ ಮೋದಿ ಜೂನ್ ತಿಂಗಳಿನಲ್ಲಿ ಈಜಿಪ್ಟ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ವೇಳೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಕಾರ್ಯತಂತ್ರ ಪಾಲುದಾರಿಕೆ ಮಟ್ಟಕ್ಕೆ ಏರಿಸಿದ ಬಳಿಕ ಪ್ರಧಾನಿ ಮೋದಿ ಈ ಭೇಟಿ ಕೈಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಆಫ್ರಿಕಾಕ್ಕೆ ಮೊದಲು ಭೇಟಿ ನೀಡುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಅವರ ಪ್ರವಾಸದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಜನವರಿಯಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಹ್ ಫತ್ತಾಹ್ ಎಲ್-ಸಿಸಿ ಭಾರತಕ್ಕೆ ಭೇಟಿ ನೀಡಿದ್ದರು.
–
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐದು ದೇಶಗಳಿಗೆ ತಾತ್ಕಾಲಿಕ ಸದಸ್ಯತ್ವ ನೀಡಲಾಗಿದೆ.
ವಿಶ್ವಸಂಸ್ಥೆಯ ಅಸೆಂಬ್ಲಿಯಲ್ಲಿ ಎರಡು ವರ್ಷಗಳ ಅವಧಿಗೆ ತಾತ್ಕಾಲಿಕ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಿದ್ದು, ಆಲ್ಜೀರಿಯಾ, ಗಯಾನಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ದಕ್ಷಿಣ ಕೊರಿಯಾದ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರಾಗಿ ಆಯ್ಕೆಯಾಗಿವೆ.
ಇನ್ನು ಉಕ್ರೇನ್ ಮೇಲಿನ ರಷ್ಯಾದ ಯುದ್ದದಲ್ಲಿ ತೊಡಗಿರುವ ಹಿನ್ನೆಲೆ ಬೆಲಾರಸ್ ಗೆ ಸದಸ್ಯ ರಾಷ್ಟ್ರಗಳು ಆ ದೇಶಕ್ಕೆ ಸದಸ್ಯತ್ವ ನೀಡಲು ನಿರಾಕರಿಸಿದವು. ಇಂದು ಹೊಸದಾಗಿ ಆಯ್ಕೆಯಾದ ರಾಷ್ಟ್ರಗಳು ಜನವರಿ 2024ರಲ್ಲಿ ಅಧಿಕಾರ ವಹಿಸಿಕೊಳ್ಳಲಿವೆ.
ಸದ್ಯ ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್ ನಲ್ಲಿ 15 ರಾಷ್ಟ್ರಗಳಿದ್ದು, ಅವುಗಳಲ್ಲಿ 5 ಶಾಶ್ವತ ಸದಸ್ಯ ರಾಷ್ಟ್ರಗಳು ಮತ್ತು 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿವೆ.