ಮದುವೆಯ ದಿನ ಹತ್ತಿರ ಆದ ಕೂಡಲೇ ಪ್ರತೀ ವಧುವಿಗೆ ತಾನು ಆ ದಿನ ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಕನಸಿರುತ್ತದೆ. ಆದರೆ ಮದುವೆಯಂದು ಸುಂದರವಾಗಿ ಕಾಣಲು ಮಾಡುವ ಮೇಕ್ಅಪ್ ಮಾತ್ರ ಮುಖ್ಯ ಆಗಿರದೆ ಬದಲಾಗಿ ತಿಂಗಳುಗಳ ಮುಂಚೆಯಿಂದಲೇ ನೀವು ಜೀವನಶೈಲಿಯಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಂಡರೆ ನೈಸರ್ಗಿಕವಾಗಿ ಸೌಂದರ್ಯವನ್ನು ಪಡೆಯಬಹುದು.
ವಧು ಆದವಳು ನೈಸರ್ಗಿಕ ಹೊಳಪನ್ನು ಪಡೆಯಲು , ಮುಂಚಿನಿಂದಲು ಆರೋಗ್ಯಕರವಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ಮದುವೆ ಕನಿಷ್ಟ ಆರು ವಾರಗಳ ಮೊದಲು ನಿಮ್ಮ ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಸಲಹೆಗಳನ್ನು ಪಾಲಿಸಿದರೆ ವಧು ಆರೋಗ್ಯವಾಗಿದ್ದು ನೋಡಲು ಕೂಡ ಸುಂದರವಾಗಿ ಕಾಣುತ್ತಾಳೆ.
ವಧುವಿನ ಆಹಾರಕ್ರಮ ಹೇಗಿರಬೇಕು ಎಂದರೆ ಆಲ್ಕೋಹಾಲ್ ಕುಡಿಯದೆ, ನೀರು, ತಾಜಾ ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಬೇಕು. ಅವಳ ಆಹಾರದಲ್ಲಿ ಪ್ರತಿದಿನ ಕನಿಷ್ಠ ಐದು ಹಣ್ಣುಗಳನ್ನು ಸೇವಿಸಬೇಕು.
ಮದುವೆಯ ಸಂಭ್ರಮದ ಸಮಯದಲ್ಲಿ ಸಾಕಷ್ಟು ಒತ್ತಡದ ಜೀವನಶೈಲಿ ಇರುವುದರಿಂದ ನಿದ್ದೆಯು ಕಡಿಮೆಯಾಗುತ್ತದೆ. ಆದರೆ ನಿಮ್ಮ ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಸರಿಯಾಗಿ ನಿದ್ದೆ ಮತ್ತು ವಿಶ್ರಾಂತಿ ಅಗತ್ಯವಾಗಿರುತ್ತದೆ. ನಿದ್ದೆಗೆ ಸರಿಯಾದ ಸಮಯ ಮೀಸಲಿಡುವುದರಿಂದ ನೈಸರ್ಗಿಕವಾಗಿ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ.
ವಧುವಿನ ಚರ್ಮದ ಕಾಂತಿಯನ್ನು ಹೆಚ್ಚಿಸಲು 1 ಟೀಸ್ಪೂನ್ ಹಾಲು,1 ಟೀಸ್ಪೂನ್ ಜೇನುತುಪ್ಪ ಮತ್ತ ಬಾದಾಮಿಯನ್ನು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿ ಮುಖ, ಬೆನ್ನು ಹಾಗೂ ಕೈ ಕಾಲುಗಳಿಗೆ ಹಚ್ಚಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಭೃಂಗರಾಜ್ ಎಣ್ಣೆ ಕೂದಲಿಗೆ ದಿನಾಲೂ ಮಸಾಜ್ ಮಾಡುತ್ತಿರಬೇಕು. ಹಾಗೆ ಮಾಡುವುದರಿಂದ ವಧುವಿನ ಕೂದಲು ಉತ್ತಮವಾಗಿ ಶೈನಿಯಾಗಿ ಬೆಳೆದಿರುತ್ತದೆ.
ಇದಿಷ್ಟು ತಯಾರಿಗಳನ್ನು ಮದುವೆಯ ಮುಂಚೆ ಮಾಡುತ್ತಾ ಬರುತ್ತಿದ್ದರೆ ಮದುವೆಯ ದಿನ ಪಾರ್ಲರ್ ಅವರಿಂದ ಸ್ವಲ್ಪ ಟಚ್ ಅಪ್ ಮಾಡಿಸಿ ಮೇಕಪ್ ಮಾಡಿಕೊಂಡರೆ ಮದುಮಗಳ ಗೆಟಪ್ ತುಂಬಾ ಚೆನ್ನಾಗಿ ಬರುವುದರಲ್ಲಿ ಸಂದೇಹವಿಲ್ಲ.