ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ವಿಟಮಿನ್ ಗಳ ಕೊರತೆಗಳು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ವಿಟಮಿನ್ ಬಿ 12 ನ ಕೊರತೆ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ತಪ್ಪಾದ ಆಹಾರ ಶೈಲಿ,ಜೀವನ ಶೈಲಿ, ಸರಿಯಾಗಿ ಕಾರ್ಯ ನಿರ್ವಹಿಸದ ಜೀರ್ಣಾಂಗಗಳು ಮುಖ್ಯ ಕಾರಣಗಳೆಂದರೆ ತಪ್ಪಾಗಲಾರದು.
ಈ
ವಿಟಮಿನ್ ಬಿ 12 ಅನ್ನು ನಮ್ಮ ದೇಹ ತಯಾರು ಮಾಡದ ಕಾರಣ ಆಹಾರದಿಂದಲೇ ಪಡೆದುಕೊಳ್ಳಬೇಕಷ್ಟೆ. ಈ ಪೋಷಕಾಂಶ ಸಸ್ಯಾಹಾರದಲ್ಲಿ ಅತಿ ವಿರಳವಾಗಿದ್ದು ಮಾಂಸಹಾರದಲ್ಲಿ ಹೇರಳವಾಗಿ ಲಭ್ಯವಿರುತ್ತದೆ. ವಿಟಮಿನ್ ಬಿ ಗುಂಪಿನಲ್ಲಿ ಒಟ್ಟು ಎಂಟು ಪೋಷಕಾಂಶಗಳಿದ್ದು , ಇವುಗಳ ಪೈಕಿ ವಿಟಮಿನ್ ಬಿ 12 ಮುಖ್ಯವಾಗಿದ್ದು ರಾಸಾಯನಿಕವಾಗಿ ಇದನ್ನು ಕೋಬಾಲಮಿನ್ ಎಂದು ಕರೆಯುತ್ತಾರೆ. ಇದು ರಕ್ತದ ಹಿಮೋಗ್ಲೋಬಿನ್ ನಿರ್ಮಾಣಕ್ಕೆ, ನರಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಮೆದುಳಿನ ಕಾರ್ಯ ಚಟುವಟಿಕೆ ಸರಿಯಾಗಿರುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಕೊರತೆಯಿಂದಾಗಿ ಅತಿಯಾದ ಆಯಾಸ
ಕಿರಿಕಿರಿ
ಬಾಯಿಹುಣ್ಣು
ನಾಲಗೆ ಹುಣ್ಣು ಅಥವಾ ನಾಲಿಗೆ ಕೆಂಪಾಗುವುದು
ಮಲಬದ್ಧತೆ
ನಾಲಗೆ ಉರಿ
ದೃಷ್ಟಿ ಕಡಿಮೆಯಾಗುವುದು
ಮರೆವು
ಆತಂಕ
ಖಿನ್ನತೆ
ತಲೆನೋವು
ಹಸಿವು ಕಡಿಮೆಯಾಗುವುದು ಕೈಕಾಲುಗಳಲ್ಲಿ ಉರಿ ಹಾಗೂ ಸ್ಪರ್ಶ ಗೊತ್ತಾಗದೆ ಇರುವುದು
ಜೀರ್ಣ ಸಂಬಂಧಿತ ತೊಂದರೆಗಳು ವಾಕರಿಕೆ
ತೂಕ ಕಡಿಮೆಯಾಗುವುದು
ಅತಿಸಾರ ಇತ್ಯಾದಿ ಸಮಸ್ಯೆಗಳು ಉಂಟಾಗುತ್ತವೆ.
ಮೇಲೆ ಹೇಳಿದ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ರಕ್ತದಲ್ಲಿ ವಿಟಮಿನ್ ಬಿ12 ನ ಪ್ರಮಾಣ ದೇಹಕ್ಕೆ ಅಗತ್ಯವಿರುವಷ್ಟು ಇದೆಯೋ ಇಲ್ಲವೋ ಎಂಬುದನ್ನು ರಕ್ತಪರಿಕ್ಷೆಯ ಮೂಲಕ ತಿಳಿದುಕೊಳ್ಳುವುದು ಅತೀ ಅಗತ್ಯ. ಇದಲ್ಲದೆ ದೀರ್ಘಕಾಲೀನ ಜೀರ್ಣದ ಸಮಸ್ಯೆ ಇದ್ದಲ್ಲಿ , ಆಮಾಶಯವನ್ನು ತೆಗೆದಿದ್ದಲ್ಲಿ, ಕರುಳಿನ ಕೊನೆಯ ಭಾಗವನ್ನು ತೆಗೆದಿದ್ದಲ್ಲಿ, ಟೈಪ್ ಒನ್ ಮಧುಮೇಹ ಇದ್ದಲ್ಲಿ ,ಕ್ರೋನ್ಸ್ ಕಾಯಿಲೆ ಇದ್ದಲ್ಲಿ , ಸಸ್ಯಾಹಾರಿಯಾಗಿದ್ದಲ್ಲಿ, ವಯಸ್ಕರಲ್ಲಿ , ಬಿ12 ಕೊರತೆ ಸಾಮಾನ್ಯವಾದ್ದರಿಂದ ಇವರೆಲ್ಲರೂ ನಿಯಮಿತವಾಗಿ ಪರೀಕ್ಷೆಗೆ ಒಳಪಡುವುದು ಅಗತ್ಯ.
ಆದಷ್ಟು ನಮ್ಮ ಆಹಾರದಲ್ಲಿ
ವಿಟಮಿನ್ b12 ಹೇರಳವಾಗಿರುವ ಆಹಾರವನ್ನು ಸೇವಿಸುವುದರ ಮೂಲಕ ತಕ್ಕ ಮಟ್ಟಿಗಿನ ಕೊರತೆಯನ್ನು ನೀಗಿಸಬಹುದು. ಅವೆಂದರೆ ಮೀನು, ಮೊಟ್ಟೆ, ಮಾ೦ಸ,ಈಸ್ಟ್, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಬಾದಾಮಿ, ಶೇಂಗಾ, ಬಾಳೆಹಣ್ಣು ಆ್ಯಪಲ್, ಸಂಸ್ಕರಿತ ದಾನ್ಯಗಳು , ಕೆಂಪಕ್ಕಿ ಇತ್ಯಾದಿ.
ಆದರೆ ಜೀರ್ಣ ಸಂಬಂಧಿ ಸಮಸ್ಯೆಗಳಿರುವವರು (gastritis, ulcerative colitis, crohn’s disease etc) ವಯಸ್ಕರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಈ ಪೋಷಕಾಂಶದ ಅತಿಯಾದ ಕೊರತೆ ಇರುವವರು ವೈದ್ಯರ ಸಲಹೆ ಮೇರೆಗೆ ಪೂರಕಗಳನ್ನು ಪಡೆದುಕೊಳ್ಳುವುದು ಉತ್ತಮ.
ಕೊನೆಯದಾಗಿ ಆದಷ್ಟು ನಮ್ಮ ಜೀರ್ಣ ಕ್ರಿಯೆ ಸರಿ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸಿದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.