ಬೆಂಗಳೂರು : “ಕೌಶಲ್ಯ ಭಾರತ ಅಭಿಯಾನ” ಮತ್ತು “ವಿಕಸಿತ ಭಾರತ 2047” ಎಂಬ ಎರಡು ಯೋಜನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಟಿಎಂ) ಸಂಸ್ಥೆಯು ಫ್ರಾನ್ಸ್ ನ ಲಿಯಾನ್ನಲ್ಲಿ ನಡೆದ ವರ್ಲ್ಡ್ ಸ್ಕಿಲ್ಕ್ 2024 ಸ್ಪರ್ಧೆಯಲ್ಲಿ ತನ್ನ ಉದ್ಯೋಗಿಗಳು ಭಾರತವನ್ನು ಪ್ರತಿನಿಧಿಸಿರುವುದಾಗಿ ಇಂದು ಹೆಮ್ಮೆಯಿಂದ ಘೋಷಿಸಿದೆ. “ಒಲಿಂಪಿಕ್ಸ್ ಆಫ್ ಸ್ಕಿಲ್ಸ್” ಎಂದು ಕರೆಯಲ್ಪಡುವ ಜಾಗತಿಕ ಸ್ಪರ್ಧಾ ಕಾರ್ಯಕ್ರಮವಾದ ವರ್ಲ್ಡ್ ಸ್ಕಿಲ್ಸ್ 2024ರಲ್ಲಿ ಪ್ರಪಂಚದಾದ್ಯಂತ ಇರುವ ಯುವ ವೃತ್ತಿಪರರು ಪಾಲ್ಗೊಂಡಿದ್ದರು ಮತ್ತು ಇಂಜಿನಿಯರಿಂಗ್ ನಿಂದ ಹಿಡಿದು ಸೃಜನಶೀಲ ಕಲೆಗಳವರೆಗೆ ಒಟ್ಟು 60ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಟಿಕೆಎಂನ ಉದ್ಯೋಗಿಗಳಾದ ಹರೀಶ್ ಗೌಡ, ಮೋಹಿತ್ ಉಮಾಶಂಕರ, ನೆಲ್ಸನ್ ವನಿಧರ, ಪ್ರೇಮ್ ಕುಮಾರ್, ಭಾನುಪ್ರಸಾದ್ ಎಸ್ ಎಂ, ಮತ್ತು ದರ್ಶನ್ ಗೌಡ ಸಿ ಎಸ್ ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಗಳಿಸಿದ್ದರು. ಅವರು ಈ ಹಿಂದೆ ಇಂಡಿಯಾ ಸ್ಕಿಲ್ಸ್ 2024ರಲ್ಲಿ ವಿಜಯ ಸಾಧಿಸಿದ್ದು, ಆ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದರು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ತಂಡವು ಸಾಧಿಸಿರುವ ಯಶಸ್ಸು ವಿಶ್ವ ದರ್ಜೆಯ ತಾಂತ್ರಿಕ ಕೌಶಲ ಹೊಂದಿರುವ ಪ್ರತಿಭಾವಂತ ಪಡೆಯನ್ನು ಸೃಷ್ಟಿಸುವ ಮತ್ತು ಜಾಗತಿಕ ವೃತ್ತಿಪರ ಕೌಶಲ್ಯ ಅಭಿವೃದ್ಧಿಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸುವಂತೆ ಮಾಡುವ ಟಿಕೆಎಂನ ಬದ್ಧತೆಗೆ ಪುರಾವೆಯಾಗಿದೆ.
ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ 2024 ಸ್ಪರ್ಧೆಯಲ್ಲಿ ಟೊಯೋಟಾದ ಉದ್ಯೋಗಿಗಳು ವಿಭಿನ್ನ ಕೌಶಲಗಳನ್ನು ಪ್ರದರ್ಶಿಸಿದರು. ಆ ಮೂಲಕ ತಂಡದ ಪ್ರದರ್ಶನದಲ್ಲಿ ಮಹತ್ವದ ಕಾಣಿಕೆ ನೀಡಿದರು. ಪ್ರೇಮ್ ವಸಂತ್ ಕುಮಾರ್ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ವಿಭಾಗದಲ್ಲಿ ಶ್ರೇಷ್ಠತೆಯ ಪದಕ (ಮೆಡಾಲಿಯನ್ ಆಫ್ ಎಕ್ಸಲೆನ್ಸ್) ಗಳಿಸಿದರೆ ಭಾನುಪ್ರಸಾದ್ ಎಸ್ ಎಂ ಮತ್ತು ದರ್ಶನ್ ಗೌಡ ಸಿಎಸ್ ಅವರು ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಪದಕ ಗಳಿಸಿದರು. ಸ್ಪರ್ಧೆಗಳಲ್ಲಿ 700 ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸುವ ಸ್ಪರ್ಧಿಗಳಿಗೆ ಪದಕ ನೀಡಲಾಗುತ್ತದೆ ಎಂಬುದು ಗಮನಾರ್ಹ. ಜೊತೆಗೆ ಮೆಕಾಟ್ರಾನಿಕ್ಸ್ ವಿಭಾಗದ ಸ್ಪರ್ಧಿಗಳು ಸಸ್ಟೇನೇಬಲ್ ಪ್ರಾಕ್ಟೀಸ್ ಅವಾರ್ಡ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು. ಈ ವಿಭಾಗದ ಪ್ರಶಸ್ತಿಯನ್ನು ಉನ್ನತ ಮಟ್ಟದ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಉದ್ಯಮ ಸುಸ್ಥಿರತೆ ಮಾನದಂಡದ ಆಧಾರದಲ್ಲಿ ನೀಡಲಾಗುತ್ತದೆ.
ಈ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಜಿ.ಶಂಕರ ಅವರು, “ವರ್ಲ್ಡ್ ಸ್ಕಿಲ್ಕ್ಸ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ನಮ್ಮ ಉದ್ಯೋಗಿಗಳ ಮೇಲೆ ನಮಗೆ ಅಪಾರ ಹೆಮ್ಮೆಯಿದೆ. ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆಯ ಪದಕವನ್ನು ಗಳಿಸಿರುವುದು ಅವರ ಅದ್ಭುತ ಪ್ರತಿಭೆ ಮತ್ತು ಶ್ರದ್ಧೆಗೆ ಹಿಡಿದ ಕನ್ನಡಿಯಾಗಿದೆ. ಜೊತೆಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅವರು ಇತರ ಉದ್ಯೋಗಿಗಳಿಗೂ ಸ್ಫೂರ್ತಿಯಾಗಿದ್ದಾರೆ. ಈ ಯಶಸ್ಸಿಗೆ ಮತ್ತು ನಮ್ಮ ಹೆಮ್ಮೆಗೆ ಕಾರಣಕರ್ತರಾದ ತರಬೇತುದಾರರು, ಅಧ್ಯಾಪಕರು, ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಮತ್ತು ಎಲ್ಲಾ ಪಾಲುದಾರರಿಗೆ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ. ಅತ್ಯುತ್ತಮ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರಕಿದರು ಏನು ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಮೂಲಕ ಗ್ರಾಮೀಣ ಗ್ರಾಮೀಣ ಭಾಗದ ಯುವಕರನ್ನು ವಿಶ್ವ ದರ್ಜೆಯ ತಂತ್ರಜ್ಞರನ್ನಾಗಿ ರೂಪಿಸುವ ನಮ್ಮ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ಈ ಯಶಸ್ಸು ‘ಸ್ಕಿಲ್ ಇಂಡಿಯಾ’ ಮತ್ತು ‘ವಿಕಸಿತ ಭಾರತ 2047’ ಇತ್ಯಾದಿ ರಾಷ್ಟ್ರೀಯ ಗುರಿಗಳಿಗೆ ಪೂರಕವಾಗಿ ನಡೆಯುವ ನಮ್ಮ ಬದ್ಧತೆಯನ್ನು ಸಾರುತ್ತದೆ. ಜೊತೆಗೆ ನಾವು ನುರಿತ ಉದ್ಯೋಗಿಗಳನ್ನು ಸೃಷ್ಟಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಲಿದ್ದೇವೆ. ಪ್ರಸ್ತುತ ನಾವು ಇರುವ ಮತ್ತು ನಾವು ಕೆಲಸ ಮಾಡುವ ಪ್ರದೇಶದಲ್ಲಿ ಮತ್ತು ಜನಸಮುದಾಯಕ್ಕೆ ಅವಕಾಶಗಳನ್ನು ಒದಗಿಸಿ ಸಕಾರಾತ್ಮಕ ಬದಲಾವಣೆ ಉಂಟು ಮಾಡುವ ಟೊಯೋಟಾದ ಬದ್ಧತೆಯು ಎಲ್ಲಾ ಕೆಲಸಗಳ ಆಧಾರವಾಗಿದೆ. ಜೊತೆಯಾಗಿ ನಡೆದು ಸಮೃದ್ಧಿ ಮತ್ತು ಅಭಿವೃದ್ಧಿ ಸಾಧಿಸುವ ಕಡೆಗಿನ ಪ್ರಯಾಣವನ್ನು ನಾವು ಮುಂದುವರಿಸುತ್ತೇವೆ” ಎಂದು ಹೇಳಿದರು.
ವರ್ಲ್ಡ್ ಸ್ಕಿಲ್ಸ್ 2024ರಲ್ಲಿ ಸ್ಪರ್ಧಿಸಿದ ಪ್ರತಿಭೆಗಳು ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ (ಟಿಟಿಟಿಐ) ತರಬೇತಿ ಪಡೆದಿದ್ದಾರೆ. 2007ರಲ್ಲಿ ಪ್ರಾರಂಭವಾದ ಟಿಟಿಟಿಐ ಆರಂಭವಾದಾಗಿನಿಂದಲೂ ಅತ್ಯಾಧುನಿಕ ತಾಂತ್ರಿಕ ಶಿಕ್ಷಣವನ್ನು ಒದಗಿಸುತ್ತಿದೆ ಮತ್ತು ಗ್ರಾಮೀಣ ಭಾಗದ ಯುವಜನತೆಯ ಬೆಳವಣಿಗೆ ಮಾಡಲು ಬದ್ಧವಾಗಿದೆ. ತರಬೇತಿ ಪಡೆಯಲು ಬರುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದ್ದು, ಆರ್ಥಿಕವಾಗಿ ಅನನುಕೂಲತೆ ಹೊಂದಿರುವ ಯುವಜನತೆಗೆ ಬಲ ತುಂಬಿ ವಿಶ್ವ ದರ್ಜೆಯ ತಂತ್ರಜ್ಞರನ್ನಾಗಿ ಸೃಷ್ಟಿಸುವ ಕೆಲಸವನ್ನು ಟಿಕೆಎಂ ಮಾಡುತ್ತಿದೆ. ಈ ಮೂಲಕ ಸಾಮಾಜಿಕ ಅಭಿವೃದ್ಧಿ ಉಂಟು ಮಾಡುವ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುವ ಕೆಲಸವನ್ನು ಸಂಸ್ಥೆಯು ಮಾಡುತ್ತಿದೆ.
ಈ ಸಂಸ್ಥೆಗೆ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಿಸುವ ಸಲುವಾಗಿ ಸಂಸ್ಥೆಯು ಇತ್ತೀಚೆಗೆ ‘ಟೊಯೋಟಾ ಕೌಶಲ್ಯ’ ಯೋಜನೆಯನ್ನು ಆರಂಭಿಸಿತ್ತು. ಹಲವಾರು ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನ ಗಳಿಸಿದ್ದಾರೆ. ಈ ಯೋಜನೆಯು ಉತ್ಪಾದನಾ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಕಲಿಯಲು ಯುವಜನತೆಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ತರಗತಿ ತರಬೇತಿಯ ಜೊತೆಗೆ ಆನ್-ದಿ-ಜಾಬ್ ಟ್ರೈನಿಂಗ್ (ಓಜೆಟಿ) ಅಂದ್ರೆ ಕೆಲಸದೊಂದಿಗೆ ಕಲಿಕೆ ಅವಕಾಶವನ್ನು ಸಂಯೋಜಿಸಿರುವುದರ ಕಾರಣದಿಂದ ಉದ್ಯೋಗ ಪಡೆಯುವ ಅವಕಾಶ ಜಾಸ್ತಿ ಇರುತ್ತದೆ. ವಿಶೇಷವಾಗಿ ನಮ್ಮ ಅನೇಕ ಉದ್ಯೋಗಿಗಳು ಟಿಟಿಟಿಐ ಮತ್ತು ಟಿಕಎಂನಲ್ಲಿ ತರಬೇತಿ ಪಡೆದ ಬಳಿಕ ಜಾಗತಿಕ ಮಟ್ಟದಲ್ಲಿ ಕೆಲಸದ ಅನುಭವವನ್ನು ಗಳಿಸಲು ಜಪಾನ್ನಲ್ಲಿ ತರಬೇತಿ ಪಡೆಯುವ ಅವಕಾಶವನ್ನು ಕೂಡ ಪಡೆದಿದ್ದಾರೆ. ಟೊಯೋಟಾದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಮಾದರಿಯನ್ನು ಆಧರಿಸಿ ಟಿಕೆಎಂ ಸಂಸ್ಥೆಯು ಕರ್ನಾಟಕದಾದ್ಯಂತ 65 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐಗಳು) ಮತ್ತು ಸರ್ಕಾರಿ ಟೂಲ್ ರೂಮ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.