ಮಣಿಪಾಲ್ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಇದರ ಪ್ರತಿಷ್ಠಿತ ಘಟಕವಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ [ಎಂಐಟಿ] ಸಂಸ್ಥೆಯು ಕೊಯಮತ್ತೂರು ಸೊಸೈಟಿ ಆಫ್ ರೇಸಿಂಗ್ ಮೈಂಡ್ಸ್ [ಸಿಎಸ್ಆರ್ಎಂ] ಯ ಸಹಭಾಗಿತ್ವದೊಂದಿಗೆ ಸೌರ ವಿದ್ಯುತ್ ವಾಹನ ಛಾಂಪಿಯನ್ಶಿಪ್- 2024 [ಸೋಲಾರ್ ವೆಹಿಕಲ್ ಇಲೆಕ್ಟ್ರಿಕ್ ಛಾಂಪಿಯನ್ಶಿಪ್-ಎಸ್ಇವಿಸಿ-2024) ನ್ನು ಆಯೋಜಿಸುತ್ತಿದ್ದು ಇದು ಮಾರ್ಚ್ 27ರಿಂದ 31 ರವರೆಗೆ ನಡೆಯಲಿದೆ. ಎಂಐಟಿಯ ವೈಮಾನಿಕ [ಏರೋನಾಟಿಕಲ್] ಮತ್ತು ಮೋಟಾರು [ಅಟೊಮೊಬೈಲ್] ತಂತ್ರಜ್ಞಾನ ಮತ್ತು ಯಂತ್ರ-ವಿದ್ಯುತ್ [ಮೆಕ್ಯಾಟ್ರಾನಿಕ್ಸ್] ವಿಭಾಗಗಳು ಈ ಛಾಂಪಿಯನ್ಶಿಪ್ ಅನ್ನು ಜಂಟಿಯಾಗಿ ಆಯೋಜಿಸುತ್ತಿವೆ. ಈ ಕಾರ್ಯಕ್ರಮವು ಸುಸ್ಥಿರ ಸಂಚಾರ ಕಾರ್ಯಯೋಜನೆ [ಸಸ್ಟೇನೇಬಲ್ ಮೊಬಿಲಿಟಿ ಸೊಲ್ಯುಶನ್ಸ್]ಗೆ ಸಂಬಂಧಿಸಿ ಇದು ಪ್ರಮುಖ ಹೆಜ್ಜೆಗುರುತಾಗಿದ್ದು ಮಾಹೆಯ ಎಂಐಟಿ ಘಟಕವು ಸುದೀರ್ಘ ಅವಧಿಯಿಂದ ನವೀನ ಸಂಶೋಧನೆ ಮತ್ತು ಪರಿಸರಪ್ರಜ್ಞೆಯಲ್ಲಿ ಬದ್ಧವಾಗಿರುವುದರ ದ್ಯೋತಕವಾಗಿದೆ.
ಎಸ್ಇವಿಸಿ-2024 ಕಾರ್ಯಕ್ರಮವು ದೇಶಾದ್ಯಂತದ ಉತ್ಸಾಹಿ ಇಂಜಿನಿಯರ್ಗಳಿಗೆ, ನಾವೀನ್ಯದ ಸಂಶೋಧಕರಿಗೆ, ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ವಾಹನ ವಿನ್ಯಾಸ ವಿಭಾಗದಲ್ಲಿ ಕೌಶಲ ಪ್ರದರ್ಶನಕ್ಕೆ ಮತ್ತು ಸೌರ-ಶಕ್ತಿ ಆಧಾರಿತ ವಿದ್ಯುತ್ ವಾಹನಗಳ ತಯಾರಿಗೆ ಅವಕಾಶ ನೀಡಲಿದೆ. ಮಣಿಪಾಲ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಂಶೋಧನ ನಿರತ ಇಂಜಿನಿಯರ್ಗಳ ಸೃಷ್ಟಿಶೀಲತೆ, ಪರಿಶ್ರಮಕ್ಕೆ ಈ ಮೂಲಕ ವೇದಿಕೆ ಲಭ್ಯವಾಗಲಿದೆ. ಭಾರತದ ವಿವಿಧ ಕಡೆಗಳ ಸುಮಾರು 31 ತಂಡಗಳು ಎಸ್ಇವಿಸಿ-2024 ರಲ್ಲಿ ಭಾಗವಹಿಸಲು ಹೆಸರನ್ನು ದಾಖಲಿಸಿವೆ. ಅವುಗಳಲ್ಲಿ 14 ತಂಡಗಳು ಅಂತಿಮ ಬಹುನಿರೀಕ್ಷಿತ ಸುತ್ತಿನಲ್ಲಿ ಭಾಗಿಯಾಗುತ್ತಿವೆ. ರಾಷ್ಟ್ರಾದ್ಯಂತದ 450 ಉತ್ಸಾಹಿಗಳು ಈ ಛಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ.
ಸ್ಇವಿಸಿ-2024 ಪರಿಸರ ಸಹ್ಯವಾದ ಮತ್ತು ಸಾಮಾಜಿಕ ಸ್ವಾಸ್ಥಕ್ಕೆ ಪೂರಕವಾದ ಸ್ಪರ್ಧೆ ಮಾತ್ರವಲ್ಲ, ಇದು ವಿದ್ಯಾರ್ಥಿಗಳು, ಕೈಗಾರಿಕ ತಜ್ಞರು, ಶಿಕ್ಷಣವೇತ್ತರ ನಡುವೆ ಅನುಭವಗಳ ಜ್ಞಾನ ವಿನಿಮಯವನ್ನು ಉತ್ತೇಜಿಸಲಿದೆ. ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಸಾರಿಗೆ ಕಾರ್ಯಯೋಜನೆಗಳನ್ನು ಉತ್ತೇಜಿಸಿರುವುದರ ಮೂಲಕ ಎಂಐಟಿಯು ಮುಂದಿನ ತಲೆಮಾರಿನ ತಂತ್ರಜ್ಞಾನಿಗಳು ಮತ್ತು ನವೀನ ಸಂಶೋಧಕರಲ್ಲಿ ಧನಾತ್ಮಕ ಪ್ರಭಾವವನ್ನು ಬೀರುವ ಆಶಯವನ್ನು ಹೊಂದಿರುವುದಕ್ಕೆ ಇದು ಸೂಚನೆಯಾಗಲಿದೆ.
ಎಂಐಟಿಯ ನಿರ್ದೇಶಕರಾಗಿರುವ ಕ್ಯಾಪ್ಟನ್ ಡಾ. ಅನಿಲ್ ರಾಣಾ ಅವರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೋಲಾರ್ ಎಲೆಕ್ಟ್ರಿಕ್ ವೆಹಿಕಲ್ ಚಾಂಪಿಯನ್ಶಿಪ್ 2024 ಅನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ, ‘ಈ ಕಾರ್ಯಕ್ರಮವು ನಾವೀನ್ಯ ಮತ್ತು ಸುಸ್ಥಿರತೆಯ ಕುರಿತ ಎಂಐಟಿಯ ನಿರಂತರ ಬದ್ಧತೆಯ ಪ್ರತೀಕವಾಗಿದೆ. ನಮ್ಮ ಭಾಗವಹಿಸುವವರ ಸೃಜನಶೀಲ ಪ್ರಯತ್ನಗಳ ಮೂಲಕ, ಹಸಿರು ಮತ್ತು ಹೆಚ್ಚು ಪರಿಸರ ಪ್ರಜ್ಞೆಯ ಭವಿಷ್ಯದತ್ತ ಪ್ರಗತಿಯನ್ನು ವೇಗವರ್ಧಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೆಫ್ಸ್ ಟಚ್, ಅಂಪೇರ್, ಪ್ರಗ್ನಾ ಮೈಕ್ರೋಡಿಸೈನ್ಸ್ ಸಂಸ್ಥೆಗಳ ಬೆಂಬಲದೊಂದಿಗೆ ಎಸ್ಇವಿಸಿ-2024ಯ ಆಯೋಜನೆ ಸಾಧ್ಯವಾಗಿದೆ. ಹಸಿರು, ಸ್ವಚ್ಛ ಭವಿಷ್ಯಕ್ಕಾಗಿ ಆಯೋಜಿಸುತ್ತಿರುವ ಸೌರ ವಿದ್ಯುತ್ ವಾಹನ ಛಾಂಪಿಯನ್ಶಿಪ್-2024ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹೆಯ ಪರಿಸರ ಕಾಳಜಿಯ ಸಂಶೋಧನ ಬದ್ಧತೆಯನ್ನು ಬೆಂಬಲಿಸುವಂತೆ ಎಸ್ಇವಿಸಿ-2024ನ ಆಯೋಜನ ಸಮಿತಿಯು ವಿನಂತಿಸಿದೆ. ಹೆಚ್ಚಿನ ವಿವರಗಳಿಗೆ : MIT Solar Electric Vehicle Championship ಸಂಪರ್ಕಿಸಬಹುದು.