ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಈಗಾಗಲೇ ಸಾಕಷ್ಟು ಅಧ್ಯಯನ ನಡೆಸುತ್ತಿದ್ದು, ಇದೀಗ ಚಂದ್ರನ ಮೇಲೆ ಕತ್ತಲ ಸಮಯ ಸಮೀಪಿಸುತ್ತಿದೆ. ಈ ಹಿನ್ನೆಲೆ ಚಂದ್ರನ ಮೇಲೆ ಕಳೆದ 10 ದಿನಗಳಿಂದ ಸಂಚರಿಸುತ್ತಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಶೀಘ್ರದಲ್ಲೇ ನಿದ್ರೆಗೆ ಜಾರಿವೆ ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರನಲ್ಲಿ ಒಂದು ಹಗಲು ಎಂದರೆ ಭೂಮಿಯಲ್ಲಿ ಸುಮಾರು 14 ದಿನಗಳು, ಹೀಗಾಗಿ ಈ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ನಿರಂತರವಾಗಿ ಕಾರ್ಯ ನಿರ್ವಹಿಸಿತ್ತು. ಇದೀಗ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದು, ಈ ವೇಳೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವುದಿಲ್ಲ. ಹೀಗಾಗಿ ಆ ಕತ್ತಲಲ್ಲಿ ಕೆಲಸ ಮಾಡುವುದು ಅಸಾಧ್ಯ. ಇದೇ ಕಾರಣಕ್ಕೆ ಇಸ್ರೋ ರೋವರ್ ಮತ್ತು ಲ್ಯಾಂಡರ್ ಗಳನ್ನು ನಿದ್ರೆಗೆ ಜಾರಿಸಲು ತೀರ್ಮಾನಿಸಿತ್ತು.
ರೋವರ್ ಮತ್ತು ಲ್ಯಾಂಡರ್ ಚಂದ್ರನ ಕುರಿತ ಸಾಕಷ್ಟು ಅಂಶಗಳನ್ನು ತಿಳಿಸಿದ್ದು, ಚಂದ್ರನ ಮೇಲ್ಮೈ ವಾತಾವರಣದ ತಾಪಮಾನ, ಸಲ್ಫರ್ ಇರುವಿಕೆ, ಚಂದ್ರನೊಳಗಿನ ಕಂಪನಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದೆ.
ಈಗ ಚಂದ್ರನಲ್ಲಿ ರಾತ್ರಿ ಆವರಿಸುತ್ತಿದ್ದು, ಹೀಗಾಗಿ ಇಸ್ರೋ ತನ್ನ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಸ್ಲೀಪಿಂಗ್ ಮೋಡ್ ನಲ್ಲಿರಿಸಿದೆ.
ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಸುಮಾರು 100 ಮೀಟರ್ ಗಳಷ್ಟು ದೂರ ಕ್ರಮಿಸಿದ್ದು, ರೋವರ್ ಮತ್ತು ಲ್ಯಾಂಡರ್ ಗಳು ನಿದ್ರೆಗೆ ಜಾರಲಿದೆ. ಆ ಬಳಿಕ ಮುಂದಿನ ಕಥೆ ಏನು ಎಂಬ ಪ್ರಶ್ನೆಗೆ ಇಸ್ರೋ ಅಧ್ಯಕ್ಷ ಸೋಮನಾಥ್ ಉತ್ತರಿಸಿದ್ದು, 14 ದಿನಗಳ ರಾತ್ರಿ ಕಳೆದ ಬಳಿಕ ಮತ್ತೆ ಚಂದ್ರನಲ್ಲಿ ಬೆಳಕಾಗುತ್ತದೆ. ಆ ಸಮಯದಲ್ಲಿ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗೆ ಸೂರ್ಯ ಬಿಸಿಲು ತಾಗಿ ಅವುಗಳಲ್ಲಿನ ಸೋಲಾರ್ ಫಲಕಗಳು ಚಾಲ್ತಿಗೊಳ್ಳಬಹುದು. ಇದರಿಂದ ಇಂಧನ ಭರ್ತಿಯಾದರೆ ಮತ್ತೆ ಎಂದಿನಂತೆ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲಿವೆ ಎಂದು ಹೇಳಿದ್ದಾರೆ.