ಇಲ್ಲಿದೆ ಪ್ರಮುಖ ಸುದ್ದಿಗಳ ಗುಚ್ಛ: ಕ್ವಿಕ್ ರೌಂಡ್ ಅಪ್
ಪ್ರಧಾನಿ ಮೋದಿಗೆ ಈಜಿಪ್ಟ್ ನ ಅತ್ಯುನ್ನತ ʼಆರ್ಡರ್ ಆಫ್ ದಿ ನೈಲ್ʼ ಪ್ರಶಸ್ತಿ ಪ್ರದಾನ
ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ʼಆರ್ಡರ್ ಆಫ್ ದಿ ನೈಲ್ʼ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ ತಮ್ಮ ದ್ವಿಪಕ್ಷೀಯ ಸಭೆಯ ಮೊದಲು ಮೋದಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
1997 ರ ನಂತರ ಈಜಿಪ್ಟ್ ಗೆ ಭಾರತದ ಪ್ರಧಾನಿಯ ಮೊದಲ ಭೇಟಿ ಇದಾಗಿದ್ದು, ಈ ವೇಳೆ ಎರಡು ದೇಶದ ನಾಯಕರು ಸಭೆಯಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
11ನೇ ಶತಮಾನದ ಅಲ್ ಹಕೀಮ್ ಮಸೀದಿಗೆ ಮೋದಿ ಭೇಟಿ ನೀಡಿದ್ದಾರೆ. ಇದೇ ವೇಳೆ ಹೆಲಿಯೊಪೊಲೀಸ್ ಕಾಮನ್ ವೆಲ್ತ್ ಯುದ್ದದದಲ್ಲಿ ಹುತಾತ್ಮರಾದ ಯೋಧರ ಸ್ಮಾರಕಕ್ಕೆ ಭೇಟಿ ನೀಡಿದರು.
ತೀವ್ರ ಮಳೆ: ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.
ರುದ್ರಪ್ರಯಾಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಸೋನ್ಪ್ರಯಾಗದಲ್ಲಿ ಕೇದಾರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ.
ಉತ್ತರಾಖಂಡ, ಹಿಮಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಉತ್ತರಾಖಂಡದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಹರಿದ್ವಾರದಲ್ಲಿ ಕಳೆದ 24 ಗಂಟೆಗಳಲ್ಲಿ 78 ಮಿಮೀ ಮಳೆಯಾಗಿದೆ. ರಾಜಧಾನಿ ಡೆಹ್ರಾಡೂನ್ 33.2 ಮಿ.ಮೀ ಮಳೆಯಾಗಿದ್ದು, ಉತ್ತರಕಾಶಿ 27.7ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಗೋ ಫಸ್ಟ್ ಗೆ ಬಿಗ್ ರಿಲೀಫ್: 400 ಕೋಟಿ ರೂ. ನೀಡಲು ಬ್ಯಾಂಕ್ ಗಳ ಅನುಮೋದನೆ
ಗೋಫಸ್ಟ್ ಗೆ ಪರಿಹಾರವಾಗಿ ಏರ್ ಲೈನ್ಸ್ ನ ಸಾಲದಾತರು ಸುಮಾರು 400 ಕೋಟಿ ರೂ. ಮಧ್ಯಂತರ ನಿಧಿ ಅನುಮೋದಿಸಿದ್ದಾರೆ.
ಗೋಫಸ್ಟ್ ಕಳೆದ ತಿಂಗಳು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿ ಎದುರು ಸ್ವಯಂ ಪ್ರೇರಿತ ದಿವಾಳಿತಬ ಪರಿಹಾರ ಪ್ರಕ್ರಿಯೆ ಕುರಿತು ಅರ್ಜಿ ಸಲ್ಲಿಸಿತ್ತು. ಅದೇ ವೇಳೆ ತನ್ನ ರದ್ದಾದ ವಿಮಾನಗಳ ಕಾರ್ಯಾಚರಣೆ ಆರಂಭಿಸಲು ಹಣದ ಹುಡುಕಾಟ ನಡೆಸಿತ್ತು.
ಇದರ ಬಳಿಕ ಗೋಫಸ್ಟ್ ಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಡಾಯ್ಚೆ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಒಳಗೊಂಡ ಏರ್ ಲೈನ್ಸ್ ಸಾಲಗಾರರ ಸಮಿತಿಯು ಹೆಚ್ಚುವರಿ ನಿಧಿಯ ಕೋರಿಕೆಯನ್ನಯ ಅನುಮೋದಿಸಿದೆ.
ಈ ಮೂಲಕ 400 ಕೋಟಿ ರೂ. ಅನುಮೋದನೆ ನೀಡಿವೆ. ಇದು ಗೋ ಫಸ್ಟ್ ವಿಮಾನಗಳ ಮರು ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ಸೇತುವೆ ಕುಸಿತ: ನದಿಗೆ ಉರುಳಿದ ಗೂಡ್ಸ್ ರೈಲು
ಅಮೆರಿಕದ ಕೊಲಂಬಸ್ ನಲ್ಲಿ ನದಿಯ ಮೇಲಿನ ರೈಲು ಸೇತುವೆ ಕುಸಿದ ಪರಿಣಾಮ ಗೂಡ್ಸ್ ರೈಲು ನದಿಗೆ ಉರುಳಿದೆ.
ಈ ಬಗ್ಗೆ ಮೊಂಟಾನಾ ರೈಲು ಲಿಂಕ್ ವಕ್ತಾರ ಆಂಡಿ ಗಾರ್ಲ್ಯಾಂಡ್ ಮಾಹಿತಿ ನೀಡಿದ್ದು, ಬಿಸಿ ಡಾಂಬಾರು, ಕರಗಿದ ಗಂಧಕವನ್ನು ಹೊತ್ತ ರೈಲು ನದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ನದಿ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ. ಈ ಅನಾಹುತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಫೈಬರ್ ಆಪ್ಟಿಕ್ ಕೇಬಲ್ ನ ಇಂಟರ್ನೆಟ್ ಸೇವೆಯನ್ನು ತೆಗೆದು ಹಾಕಲಾಗಿದೆ.