ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ನಂತರ ಬಿಗಿಭದ್ರತೆಯ ಜೈಲಿನಲ್ಲಿ ತೆರೆದ ವಾಶ್ ರೂಂನೊಂದಿಗೆ ಸೊಳ್ಳೆ ನೊಣಗಳ ಕಾಟ ಇರುವ ಸಣ್ಣ ಸೆಲ್ನಲ್ಲಿ ಇರಿಸಲಾಗಿದೆ.
70 ವರ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರಿಗೆ ಪಂಜಾಬ್ ಪ್ರಾಂತ್ಯದ ಜೈಲಿನಲ್ಲಿ ಮೂರನೇ ದರ್ಜೆ (ಸಿ-ಕ್ಲಾಸ್ ) ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಖಾನ್ ಅವರ ವಕೀಲ ನಯೀಮ್ ಹೈದರ್ ಪಂಜೋಥಾ ಆರೋಪಿಸಿದ್ದಾರೆ. ದೇಶದ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಮಾಜಿ ನಾಯಕ ಈಗ ಇರುವ ಜೈಲು ಕೋಣೆ ನೊಣಗಳು ಮತ್ತು ಕೀಟಗಳಿಂದ ಮುತ್ತಿಕೊಂಡಿದೆ ಎಂದು ಅವರು ಹೇಳಿದರು. ಅವರು “ತೆರೆದ ವಾಶ್ ರೂಂ ಹೊಂದಿರುವ” ಸಣ್ಣ ಕೋಣೆಯಲ್ಲಿದ್ದಾರೆ ಎಂದು ಸೋಮವಾರ ಜೈಲಿನಲ್ಲಿ ಖಾನ್ ಅವರನ್ನು ಭೇಟಿಯಾದ ನಂತರ ಪಂಜೋಥಾ ಹೇಳಿದರು.
“ಪಿಟಿಐ ಅಧ್ಯಕ್ಷರು ತಮ್ಮ ಇಡೀ ಜೀವನವನ್ನು ಜೈಲಿನಲ್ಲಿ ಕಳೆಯಲು ಸಿದ್ಧರಾಗಿದ್ದಾರೆ,” ಎಂದು ವಕೀಲರನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.
ಪೊಲೀಸರು ತನಗೆ ಬಂಧನ ವಾರಂಟ್ ತೋರಿಸಲಿಲ್ಲ ಮತ್ತು ಅವರು ಲಾಹೋರ್ನಲ್ಲಿರುವ ಅವರ ಮನೆಯಲ್ಲಿದ್ದಾಗ ಅವರ ಪತ್ನಿಯ ಕೋಣೆಯ ಬಾಗಿಲು ಒಡೆಯಲು ಪ್ರಯತ್ನಿಸಿದರು ಎಂದು ಖಾನ್ ಹೇಳಿದ್ದರು ಎಂದು ಪಂಜೋಥಾ ಹೇಳಿದರು. ಮಾಜಿ ಪ್ರಧಾನ ಮಂತ್ರಿಯ ಅಪರಾಧದ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಲು ವಕಾಲತ್ತು ಅರ್ಜಿಗೆ ಅವರ ಸಹಿಯನ್ನು ಪಡೆಯಲು ಅವರು ಜೈಲು ಅಧಿಕಾರಿಯ ಸಮ್ಮುಖದಲ್ಲಿ ಖಾನ್ ಅವರನ್ನು ಒಂದು ಗಂಟೆ 45 ನಿಮಿಷಗಳ ಕಾಲ ವಕೀಲರು ಭೇಟಿಯಾದರು.
ಹಗಲಿನಲ್ಲಿ ನೊಣಗಳು ಮತ್ತು ರಾತ್ರಿ ಇರುವೆಗಳು ಹೆಚ್ಚಾಗಿ ಬರುವ ತೆರೆದ ಶೌಚಾಲಯದ ಕತ್ತಲೆಯ ಕೋಣೆಯಲ್ಲಿ ಅವರನ್ನು ಇರಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ ಎಂದು ವಕೀಲರು ಮಾಧ್ಯಮಗಳಿಗೆ ತಿಳಿಸಿದರು. “ನನ್ನನ್ನು ಯಾವುದೇ ದೂರದರ್ಶನ ಅಥವಾ ಪತ್ರಿಕೆ ಲಭ್ಯವಿಲ್ಲದ ಕತ್ತಲೆಯ ಕೋಣೆಯಲ್ಲಿ ಇರಿಸಲಾಗಿದೆ. ನಾನು ಭಯೋತ್ಪಾದಕನೆಂಬಂತೆ ನನ್ನನ್ನು ಭೇಟಿಯಾಗಲು ಯಾರಿಗೂ ಅವಕಾಶವಿಲ್ಲ” ಎಂದು ಖಾನ್ ಹೇಳಿರುವುದಾಗಿ ಪಂಜೋಥಾ ಉಲ್ಲೇಖಿಸಿದ್ದಾರೆ.
ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ತೋಶಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಅಪರಾಧಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಖಾನ್ ಅವರನ್ನು ಶನಿವಾರ ಲಾಹೋರ್ನಲ್ಲಿರುವ ಅವರ ಮನೆಯಿಂದ ಬಂಧಿಸಲಾಯಿತು. ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಕಳುಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ನ್ಯಾಯಾಲಯದ ಆದೇಶದ ಹೊರತಾಗಿಯೂ ಅವರನ್ನು ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಅಟಾಕ್ ಜೈಲಿಗೆ ಸ್ಥಳಾಂತರಿಸಲಾಯಿತು. ಶನಿವಾರದ ನ್ಯಾಯಾಲಯದ ತೀರ್ಪು ಖಾನ್ಗೆ ಅವರಿಗೆ ಹಿನ್ನಡೆ ಆಗಿದ್ದು ಅವರ ರಾಜಕೀಯ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ.
ಪ್ರಸ್ತುತ ರಾಷ್ಟ್ರೀಯ ಅಸೆಂಬ್ಲಿಯು ಆಗಸ್ಟ್ 12 ರಂದು ತನ್ನ ಅವಧಿಯನ್ನು ಪೂರ್ಣಗೊಳಿಸುವುದರೊಂದಿಗೆ ಪಾಕಿಸ್ತಾನವು ಈ ವರ್ಷದ ಕೊನೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹೊಸ್ತಿಲಲ್ಲಿ ಈ ತೀರ್ಪು ಬಂದಿದೆ.
ಕ್ರಿಕೆಟಿಗ-ರಾಜಕಾರಣಿಯು USD 497,500 ಮೌಲ್ಯದ ಲಾಭಕ್ಕಾಗಿ ತಮಗೆ ಬಂದಿದ್ದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಖಾನ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರು ಕಾನೂನುಬದ್ಧವಾಗಿ ಸರ್ಕಾರಿ ಸ್ವಾಮ್ಯದ ನಿಧಿ ಗೃಹವಾದ ತೋಷಖಾನಾದಿಂದ ಉಡುಗೊರೆಗಳನ್ನು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಖಾನ್ ಅವರನ್ನು ಬಂಧಿಸಿರುವುದು ಇದು ಎರಡನೇ ಬಾರಿ.
ಇದಕ್ಕೂ ಮೊದಲು, ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಮೇ 9 ರಂದು ಇಸ್ಲಾಮಾಬಾದ್ನಲ್ಲಿ ಹೈಕೋರ್ಟ್ ಆವರಣದಿಂದ ಬಂಧಿಸಲಾಯಿತು. ಇದು ಅವರ ಬೆಂಬಲಿಗರಿಂದ ಹಿಂಸಾತ್ಮಕ ಪ್ರತಿಭಟನೆಯನ್ನು ಹುಟ್ಟುಹಾಕಿತು. ಖಾನ್ ಅವರು ದೇಶಾದ್ಯಂತ 140 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದೆ, ಭ್ರಷ್ಟಾಚಾರ ಮತ್ತು ಕೊಲೆಯಂತಹ ಆರೋಪಗಳನ್ನು ಎದುರಿಸುತ್ತಿದ್ದಾರೆ.