ಜೀವ ವಿಮೆ- ವಿಮೆ ಹೊಂದಿರುವ ವ್ಯಕ್ತಿ ಅಥವಾ ಆತನ ಕುಟುಂಬದವರಿಗೆ ಮುಂದಿನ ದಿನಗಳಲ್ಲಿ ಎದುರಾಗುವ ಎಲ್ಲಾ ಅಪಾಯಗಳ ವಿರುದ್ದ ರಕ್ಷಣೆ ನೀಡಲಿದೆ. ಅದರ ಜೊತೆಗೆ ಹೂಡಿಕೆಯ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುತ್ತದೆ.
ಮೊದಲು ಭಾರತದಲ್ಲಿ ವಿಮಾ ಯೋಜನೆ ಹೇಗಿತ್ತು?
ಭಾರತದಲ್ಲಿ ಜೀವ ವಿಮೆ ಪ್ರಾರಂಭಿಸಿದ ಮೊದಲ ಸಂಸ್ಥೆ ಓರಿಯಂಟೆಲ್ ಇನ್ಶೂರೆನ್ಸ್ ನೊಂದಿಗೆ 1818ರಲ್ಲಿ ಪ್ರಾರಂಭವಾಯಿತು. 1912ರಲ್ಲಿ ಭಾರತೀಯ ಜೀವ ವಿಮೆಯ ಸಂಸ್ಥೆಗಳನ್ನು ನಿಯಂತ್ರಿಸಲು Indian Life Assurance Companies Act ಪ್ರಾರಂಭವಾಯಿತು.
1930ರ ಸಂದರ್ಭದಲ್ಲಿ ದೇಶದಲ್ಲಿ 250ಕ್ಕೂ ಹೆಚ್ಚು ವಿಮಾ, ಹಣಕಾಸಿನ ಸಂಸ್ಥೆಗಳಿದ್ದವು. ಇವುಗಳನ್ನು ನಿಯಂತ್ರಿಸಲು ಸರ್ಕಾರ 1938ರಲ್ಲಿ Insurance Act, 1938 ಮೂಲಕ ಹೊಸ ಕಾನೂನು ಸ್ಥಾಪಿಸಲಾಯಿತು. 1956ರಲ್ಲಿ ಇದ್ದ ಎಲ್ಲಾ ಸಂಸ್ಥೆಗಳನ್ನು ರಾಷ್ಟ್ರೀಕರಣದೊಂದಿಗೆ ಒಂದೇ ಸಂಸ್ಥೆಯಡಿಯಲ್ಲಿ ತರಲು ಪ್ರಾರಂಭವಾಗಿದ್ದು ದಿ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಜೀವ ವಿಮಾ ನಿಗಮ).
154 ಭಾರತೀಯ, 16 ಭಾರತೀಯೇತರ ಮತ್ತು 75 ಪ್ರಾವಿಡೆಂಡ್ ಸೊಸೈಟಿಗಳು 1990ರವರೆಗೆ ಜೀವ ವಿಮಾ ನಿಗಮದ ಸಂಪೂರ್ಣ ಏಕಸ್ವಾಮ್ಯ ನಡೆಸಿತು.
1990 ರ ನಂತರ ಏನಾಯ್ತು?
1990 ರ ನಂತರ ಭಾರತ ಸರ್ಕಾರ ವಿಮಾ ಕ್ಷೇತ್ರದಲ್ಲಿ ಆರ್ಥಿಕ ಸುಧಾರಣೆ ಮಾಡಲು ಯೋಜಿಸಿತು. 1993ರಲ್ಲಿ ಆರ್ ಬಿಐ ನ ರಾಜ್ಯಪಾಲರಾಗಿದ್ದ ಆರ್. ಎನ್. ಮಲ್ಹೋತ್ರ ಅವರ ನೇತೃತ್ವದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು.
ಇವರ ನೇತೃತ್ವದಲ್ಲೇ ದೇಶಕ್ಕೆ ಖಾಸಗಿ ಹಾಗೂ ವಿದೇಶಿ ವಿಮಾ ಸಂಸ್ಥೆಗಳು ಲಗ್ಗೆ ಇಟ್ಟವು. ಈ ಎಲ್ಲಾ ಸಂಸ್ಥೆಗಳ ಮೇಲ್ವಿಚಾರಣೆ, ನಿಯಂತ್ರಣಕ್ಕೆ 1999ರಲ್ಲಿ ಕೇಂದ್ರ ಸರ್ಕಾರ ಹೊಸ ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI)ವನ್ನು ಸ್ಥಾಪಿಸಿತು.
IRDAI ರಚನೆ ಹೇಗೆ?
ಇದು 10 ಸದಸ್ಯರ ಸಂಸ್ಥೆಯಾಗಿದ್ದು, ಒಬ್ಬ ಅಧ್ಯಕ್ಷರು, 5 ಪೂರ್ಣಾವಧಿ ಸದಸ್ಯರು, ನಾಲ್ಕು ಜನ ಅರೆಕಾಲಿಕ ಸದಸ್ಯರನ್ನು ಭಾರತ ಸರ್ಕಾರ ನೇಮಿಸಿದೆ. ಪ್ರಸ್ತುತ ದಿಬಾಶಿಶ್ ಪಾಂಡಾ ಅವರು ಮುಖ್ಯಸ್ಥರಾಗಿದ್ದಾರೆ.
IRDAI ಉದ್ದೇಶವೇನು? ನಮ್ಮ ಹಣಕ್ಕೂ ಇದಕ್ಕೂ ಏನು ಸಂಬಂಧ?
ಜೀವ ವಿಮೆಯನ್ನು ಪಡೆಯುವ ಪಾಲಿಸಿದಾರರ ಹಕ್ಕನ್ನು ಉತ್ತೇಜಿಸುವುದರ ಜೊತೆಗೆ ಇಡಿಯ ಸಂಸ್ಥೆಯ ನಿಯಂತ್ರಣ ಹಾಗು ಮೇಲ್ವಿಚಾರಣೆ ನಡೆಸಲಿದೆ.
ವಿಮಾ ಉತ್ಪನ್ನಗಳ ಬಗ್ಗೆ ತಪ್ಪು ಮಾಹಿತಿ ನೀಡುವುದರ ಬಗ್ಗೆ ಹಾಗೂ ತಪ್ಪು ಮಾಹಿತಿ ನೀಡಿ ಪಾಲಿಸಿ ಮಾರಾಟ ಮಾಡುವುದನ್ನು ತಡೆಯಲು ಸೂಕ್ತ ಹಣಕಾಸು ನೀತಿ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆಯ ಸಂಹಿತೆ ತಂದಿದೆ.
ಇನ್ನೇನು ಕರ್ತವ್ಯ?
IRDAI ಖಾಸಗಿ ವಿಮಾ ಕಂಪನಿಗಳಿಗೆ ನೋಂದಣಿ ಪ್ರಮಾಣ ಪತ್ರಗಳನ್ನು ನೀಡುವುದು ಮತ್ತು ಅವುಗಳನ್ನು ನಿಯಂತ್ರಿಸುವುದು. ಪಾಲಿಸಿದಾರರ ಹಣವನ್ನು ರಕ್ಷಿಸುವುದು. ಒಟ್ಟಾರೆ ಖಾಸಗಿ ಸಂಸ್ಥೆಗಳ ಮೇಲ್ವಿಚಾರಣೆ, ಪ್ರೀಮಿಯಂ ವಿಮಾ ಪಾಲಿಸಿಗಳ ದರ ಮತ್ತು ನಿಯಮಗಳನ್ನು ನಿಯಂತ್ರಿಸಲಿದೆ.
ಹೌದು, ಈಗ ನಮ್ಮ ಸುತ್ತಮುತ್ತಲಿನಲ್ಲಿರುವ 24 ಖಾಸಗಿ ವಿಮಾ ಸಂಸ್ಥೆಗಳು ಕೂಡ ಕೇಂದ್ರ ಸರ್ಕಾರದ ರಚಿಸಿರುವ IRDAI ಅಡಿಯಲ್ಲಿಯೇ ಬರುತ್ತದೆ.
ಯಾವುದೋ ಕೊ ಆಪರೇಟಿವ್ ಬ್ಯಾಂಕ್, ಕಿರಾಣಿ ಅಂಗಡಿ, ಚಿಟ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುವ ಬದಲು ನಮ್ಮದೇ ದೇಶದಲ್ಲಿ ಸರ್ಕಾರದ ನಿಯಂತ್ರಣದಲ್ಲೇ ನಡೆಯುತ್ತಿರುವ ಖಾಸಗಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು ಅಲ್ವಾ?