ರಾಮನಗರ : ಸ್ಥಳೀಯ ಜನ ಸಮುದಾಯಗಳ ಆರೋಗ್ಯ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಇಂದು ರಾಮನಗರ ಜಿಲ್ಲೆಯ ಬೆಣ್ಣೆಹಳ್ಳಿ, ಡಿಯಾಲಕರೇನಹಳ್ಳಿ ಮತ್ತು ಚನ್ನೆಮರೇಗೌಡನದೊಡ್ಡಿಯಲ್ಲಿ ಮೂರು ಹೊಸ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ಈ ನೀರು ಶುದ್ಧೀಕರಣ ಘಟಕಗಳು 15 ಹಳ್ಳಿಗಳ ಸುಮಾರು 21,000 ಗ್ರಾಮಸ್ಥರಿಗೆ ಪ್ರಯೋಜನ ಒದಗಿಸುತ್ತವೆ.
ಪ್ರತೀ ನೀರಿನ ಶುದ್ಧೀಕರಣ ಘಟಕವು ಗಂಟೆಗೆ 1,000 ಲೀಟರ್ ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ಬನ್ ಫಿಲ್ಟರ್ ಗಳು, ಮಲ್ಟಿಮೀಡಿಯಾ ಫಿಲ್ಟರೇಷನ್, 5 ಮೈಕ್ರಾನ್ಸ್, ರಿವರ್ಸ್ ಓಸ್ಮಾಸಿಸ್ (ಆರ್ ಓ) ಮತ್ತು ಯುವಿ ಫಿಲ್ಟರೇಷನ್ ಎಂಬ ಆರು ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ನೀರನ್ನು ಶುದ್ಧೀಕರಿಸಲಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ನೀರನ್ನು ಒದಗಿಸಲಾಗುತ್ತದೆ. ಅತ್ಯಾಧುನಿಕ ಫಿಲ್ಟರೇಷನ್ ಪ್ರಕ್ರಿಯೆ ಮೂಲಕ ಕಾರ್ಯನಿರ್ವಹಿಸುವ ಈ ಘಟಕಗಳು ನವೀಕರಿಸಲಾಗುವ ಇಂಧನ (ಸೌರ ಶಕ್ತಿ)ದ ಮೂಲಕ ಕಾರ್ಯ ನಿರ್ವಹಿಸುತ್ತವೆ. ಈ ಮೂಲಕ ಸುಸ್ಥಿರತೆಗೆ ಕೊಡುಗೆ ನೀಡುತ್ತವೆ. ಈ ಘಟಕಗಳು 15 ವರ್ಷಗಳ ಕಾಲ ಗ್ರಾಮ ಪಂಚಾಯತ್ ಗಳು ಮತ್ತು ನಿರ್ವಹಣಾ ಏಜೆನ್ಸಿಯ ಮೂಲಕ ನಿರ್ವಹಿಸಲ್ಪಡುತ್ತವೆ.
ಶುದ್ಧೀಕರಣ ಘಟಕಗಳ ಸ್ಥಾಪನೆಯ ಯೋಜನೆ ಆರಂಭಿಸಿದಾಗಿನಿಂದ ಇದುವರೆಗೆ ಟಿಕೆಎಂ ಸಂಸ್ಥೆಯು ಭಾರತದಾದ್ಯಂತ ಒಟ್ಟು 51 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ಇದರಿಂದ 312 ಹಳ್ಳಿಗಳ 350000ಕ್ಕೂ ಹೆಚ್ಚು ಜನ ಶುದ್ಧ ಮತ್ತು ಸುರಕ್ಷಿತ ನೀರಿನ ಪ್ರಯೋಜನವನ್ನು ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಎಸ್ವಿಪಿ ಮತ್ತು ಮುಖ್ಯ ಸಂವಹನ ಅಧಿಕಾರಿ ಸುದೀಪ್ ದಳವಿ ಅವರು, “ಜನ ಸಮುದಾಯಕ್ಕೆ ವಾಹನಗಳನ್ನು ಉತ್ಪಾದನೆ ಮಾಡುವುದರ ಹೊರತಾಗಿ ಹೆಚ್ಚಿನ ನೆರವು ಒದಗಿಸಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲಿನ ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ಇದೆ. ಅದಕ್ಕೆ ಪೂರಕವಾಗಿ ರಾಮನಗರ ಜಿಲ್ಲೆಯಲ್ಲಿ ಮೂರು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದ್ದು, ಈ ಕ್ರಮವು ಸ್ಥಳೀಯ ಜನರ ಆರೋಗ್ಯ ಮತ್ತು ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಮ್ಮ ಬದ್ಧತೆಗೆ ಪುರಾವೆಯಾಗಿದೆ. ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಹಕ್ಕು. ಈ ಯೋಜನೆಯ ಮೂಲಕ ಈ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಿದ್ದೇವೆ. ಜನರಿಗೆ ಅವಶ್ಯ ಸೌಲಭ್ಯ ಒದಗಿಸುವುದರ ಜೊತೆಗೆ ನಾವು ಸುಸ್ಥಿರತೆಯ ಕಡೆಗೆ ಕೂಡ ಗಮನ ಹರಿಸಿದ್ದೇವೆ. ಈ ಮೂಲಕ ಉಜ್ವಲ ಭವಿಷ್ಯವನ್ನು ಸಾಧಿಸಬಹುದು ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.
ಸಿಎಸ್ಆರ್ 2001ನೇ ಇಸವಿಯಿಂದಲೂ ಟಿಕೆಎಂ ಸಂಸ್ಥೆಯ ಆದ್ಯ ಕರ್ತವ್ಯಗಳ ಭಾಗವಾಗಿದೆ. ಉತ್ಪಾದನೆ ಹೆಚ್ಚಳು, ಸುಸ್ಥಿರತೆ ಕಡೆಗೆ ಗಮನ ಹರಿಸುವುದರ ಜೊತೆಗೆ ಟಿಕೆಎಂ ಮತ್ತು ಅದರ ಉದ್ಯೋಗಿಗಳು ಸ್ವಯಂ ಪ್ರೇರಣೆಯಿಂದ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ, ರಸ್ತೆ ಸುರಕ್ಷತೆ ಹಾಗೂ ಕೌಶಲ್ಯ ಅಭಿವೃದ್ಧಿ ಎಂಬ ಐದು ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ಚಟುವಟಿಕೆಗಳನ್ನು ನಡೆಸಲಾಗಿದೆ. ಇವುಗಳ ಜೊತೆಗೆ ಸ್ಥಳೀಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಸಮುದಾಯ ಆರೋಗ್ಯ ಕೇಂದ್ರವಾದ ಕರ್ನಾಟಕದ ಬಿಡದಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಮ್ಲಜನಕ-ಉತ್ಪಾದನಾ ಘಟಕವನ್ನು ಕೊಡುಗೆ ನೀಡಿದೆ.
ವಿಶೇಷವಾಗಿ ಶಾಲಾಧರಿತ ಆರೋಗ್ಯ ಮತ್ತು ನೈರ್ಮಲ್ಯ ಯೋಜನೆಗಳಾದ ಎಬಿಸಿಡಿ (ಎ ಬಿಹೇವಿಯರಲ್ ಚೇಂಜ್ ಡೆಮಾನ್ಸ್ಟ್ರೇಷನ್), ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆ ಮತ್ತು ಟೊಯೋಟಾ ಶಾಲಾ ಆರೋಗ್ಯ ಕಾರ್ಯಕ್ರಮಗಳು ಆರೋಗ್ಯ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸವನ್ನು ಮಾಡಿವೆ. 2022-23ರ ಆರ್ಥಿಕ ವರ್ಷದಲ್ಲಿ ಈ ಯೋಜನೆಗಳು ಸುಮಾರು 64,000ಕ್ಕೂ ಹೆಚ್ಚಿನ ಜನರ ಬದುಕಲ್ಲಿ ಪ್ರಯೋಜನ ಉಂಟು ಮಾಡಿವೆ. ಟಿಕೆಎಂ ತನ್ನ ಹಲವಾರು ಸಿಎಸ್ಆರ್ ಯೋಜನೆಗಳ ಮೂಲಕ ಇಲ್ಲಿಯವರೆಗೆ ಸುಮಾರು 23 ಲಕ್ಷಕ್ಕೂ ಹೆಚ್ಚು ಜನರ ಬದುಕಲ್ಲಿ ಸಕಾರಾತ್ಮಕ ಪರಿಣಾಮ ಬೀರಿವೆ. ಜನರ ಅಗತ್ಯಕ್ಕೆ ತಕ್ಕಂತೆ, ದೇಶದ ಆದ್ಯತೆಗಳಿಗೆ ಪೂರಕವಾಗಿ ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ನಿಟ್ಟಿನಲ್ಲಿ ಟಿಕೆಎಂನ ಯೋಜನೆಗಳನ್ನು ರೂಪಿಸಲಾಗುತ್ತದೆ.