ಇಸ್ಕಾನ್ ಸಂಸ್ಥೆ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎನ್ನುವ ಸಂಸದೆ ಮೇನಕಾ ಗಾಂಧಿ ಅವರ ಆರೋಪವನ್ನು ಇಸ್ಕಾನ್ ನಿರಾಕರಿಸಿದ್ದು, ಮೇನಕಾ ಗಾಂಧಿ ಅವರ ಹೇಳಿಕೆ ವಿರುದ್ದ ಇಸ್ಕಾನ್ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ.
ಯಾವುದೇ ಆಧಾರವಿಲ್ಲದ ಇಸ್ಕಾನ್ ವಿರುದ್ದ ಆರೋಪ ಮಾಡಲಾಗಿದೆ ಎಂದು ಮೇನಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇವೆ ಎಂದು ಇಸ್ಕಾನ್ ನ ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ.
ಇತ್ತೀಚಿಗೆ ವೈರಲ್ ಆದ ವೀಡಿಯೊವೊಂದರಲ್ಲಿ, ಮೇನಕಾ ಗಾಂಧಿ ಆಂಧ್ರಪ್ರದೇಶದ ಇಸ್ಕಾನ್ನ ಅನಂತಪುರ ಗೌಶಾಲಾಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ್ದಾರೆ. ಅಲ್ಲಿ ವಯಸ್ಸಾದ ಹಸುಗಳು, ಹೋರಿಗಳು ಅಥವಾ ಕರುಗಳಾಗಲಿ ಇಲ್ಲ ಅವುಗಳನ್ನು ಇಸ್ಕಾನ್ ಕಟುಕರಿಗೆ ಮಾರಾಟ ಮಾಡಿದೆ ಎಂದು ಆರೋಪಿಸಿದ್ದರು.
ಈ ಬಗ್ಗೆ ಇಸ್ಕಾನ್ ಪ್ರತಿಕ್ರಿಯೆ ನೀಡಿದ್ದು, ಗೋವುಗಳು ಹಾಗೂ ಗೂಳಿಗಳ ಸಂರಕ್ಷಣೆಗಾಗಿ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಇಸ್ಕಾನ್ ಕೆಲಸ ಮಾಡುತ್ತಿದೆ. ಹಸುಗಳು ಮತ್ತು ಗೂಳಿಗಳು ಇಸ್ಕಾನ್ನ ಗೋಶಾಲೆಯಲ್ಲಿ ಬದುಕಿರುವವರೆಗೂ ಇರುತ್ತವೆ ಒಂದೇ ಒಂದು ಹಸು, ಎತ್ತು ಅಥವಾ ಕರುವನ್ನು ಕಟುಕರಿಗೆ ಮಾರುವುದಿಲ್ಲ ಎಂದು ರಾಧಾರಮಣ್ ದಾಸ್ ತಿಳಿಸಿದ್ದಾರೆ.