ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿರುವ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾಮಾನ್ಯವಾಗಿ ಉಚಿತ ಪ್ರಯಾಣವನ್ನು ಘೋಷಿಸಿರುತ್ತದೆ. ಇದು ದಿನಾಂಕ 11 ಜೂನ್ 2023 ರಿಂದ ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಚಾಲನೆ ದೊರಕಲಿದೆ. ಇದೊಂದು ಎಲ್ಲಾ ಮಹಿಳೆಯರಿಗೆ ಶಕ್ತಿ ತುಂಬುವಂತಹ ಯೋಜನೆಯಾಗಿದ್ದರೂ ಸಹ, ಇದರಿಂದ ಇತರ ಸಾರಿಗೆ ಉದ್ಯಮಗಳಿಗೆ ಹಾಗೂ ನಷ್ಟದ ಬಗ್ಗೆ ಸರ್ಕಾರ ಕಡೆಗಣಿಸಿದಂತೆ ಕಾಣಿಸುತ್ತದೆ.
ಉದಾಹರಣೆಗೆ ಕರ್ನಾಟಕದಲ್ಲಿರುವ ಎರಡು ಲಕ್ಷಕ್ಕೂ ಹೆಚ್ಚು ಆಟೋಗಳಲ್ಲಿ ಮಹಿಳೆಯರೇ 60% ನಷ್ಟು ಪ್ರಯಾಣಿಸುತ್ತಿದ್ದು, ಶಕ್ತಿ ಯೋಜನೆಯಿಂದ ಆಟೋ ಚಾಲಕರ ಜೇಬಿಗೆ ಕತ್ತರಿ ಬೀಳಲಿದೆ.
ಇನ್ನೂ ನಮ್ಮ ಮೆಟ್ರೋ ಮತ್ತು ಓಲಾ ಉಬರ್ ನಂತಹ ಆನ್ಲೈನ್ ಸರ್ವಿಸ್ ನೀಡುತ್ತಿದ್ದ ಸಂಸ್ಥೆಗಳು ಅವರ ಆದಾಯ ಕಾಪಾಡಿಕೊಳ್ಳಲು ಪರದಾಡುವಂತೆ ಆಗಿದೆ.
ಇನ್ನುಳಿದಂತೆ ಖಾಸಗಿ ಬಸ್ ಗಳ ಮಾಲೀಕರ ಅಳಲು ಕೇಳಲು ಸಾರಿಗೆ ಮಂತ್ರಿ ಶ್ರೀ ರಾಮಲಿಂಗ ರೆಡ್ಡಿ ಅವರಾಗಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಾಗಲಿ ಮುಂದೆ ಬರುತ್ತಿಲ್ಲ. ತೆರಿಗೆ ವಿನಾಯಿತಿ ಅಥವಾ ಇಂಧನದಲ್ಲಿ ವಿನಾಯಿತಿ ನೀಡಿ ಎಂದು ಖಾಸಗಿ ಬಸ್ಸಗಳ ಮಾಲೀಕರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿರುತ್ತಾರೆ.
ಇವೆಲ್ಲದರ ನಡುವೆ ಸರ್ಕಾರದಿಂದ ಶಕ್ತಿ ಯೋಜನೆ ಅನುಷ್ಠಾನಗೊಳಿಸಲ್ಪಟ್ಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೂಡ ನಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ.
ನಾಲ್ಕು ನಿಗಮಗಳ ಸಾಮಾನ್ಯ ಸಾರಿಗೆಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವುದರಿಂದ ಅಂದಾಜು ಸರಿಸುಮಾರು 4000 ಕೋಟಿ ಪ್ರತಿವರ್ಷಕ್ಕೆ ಹೊರೆಯಾಗಲಿದ್ದು, ಇದನ್ನು ಸರ್ಕಾರ ಯಾವ ರೀತಿಯಾಗಿ ನಷ್ಟ ಭರಿಸಲಿದೆ ಎಂಬುದು ಸವಾಲಿನ ಪ್ರಶ್ನೆಯಾಗಿದೆ. ಹೆಚ್ಚಿನ ಅನುದಾನವನ್ನು ನೀಡಿ ಸಾರಿಗೆ ನಿಗಮವನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಿದರೆ ಮಾತ್ರ ಈಗಿನ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ, ಸಂಪೂರ್ಣ ಯಶಸ್ವಿಯಾಗಿ ಸಾಗಲಿದೆ ಇಲ್ಲವಾದಲ್ಲಿ ಈ ಯೋಜನೆಯು ಸಾರಿಗೆ ನಿಗಮವನ್ನೇ ಮುಳುಗಿಸಲು ಕಾರಣವಾಗಬಹುದು.