ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಡ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಬೇಕು ಅನ್ನೋದು ಆತನ ಕನಸಾಗಿತ್ತು. ಆದರೆ, ಎಲ್ಲಿಯೂ ಹಣಕಾಸಿನ ನೆರವೇ ಸಿಗುತ್ತಿರಲಿಲ್ಲ. ಸತತ ಮೂರು ವರ್ಷಗಳ ಕಾಲ ದಾನಿಗಳ ಹುಡುಕಾಟಕ್ಕೆ ಹರಸಾಹಸಪಟ್ಟ.
ಇತ್ತ ಶಾಲೆಯಲ್ಲಿ ಇದ್ದ 300 ಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿತ್ತು. 1,500 ಮಕ್ಕಳು ಶಾಲೆಯ ಪ್ರವೇಶ ಪಡೆಯಲು ತುದಿಗಾಲಲ್ಲಿ ನಿಂತಿದ್ದರು. ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಆ ಮಕ್ಕಳು ಶಿಕ್ಷಣದಿಂದ ಹೊರಗೆ ಉಳಿಯುವ ಭೀತಿ ಎದುರಾಗಿತ್ತು. ಆಗ ಆತನಿಗೆ ಒಂದು ಮಾರ್ಗ ಕಾಣಿಸಿತು.. ಅದೇ ಕ್ರೌಡ್ ಫಂಡಿಂಗ್..
ಬಡ ಮಕ್ಕಳಿಗಾಗಿ ಶಾಲೆ ಕಟ್ಟಬೇಕು, ದೇಣಿಗೆ ಕೊಡಿ ಅಂತಾ 25 ವರ್ಷ ವಯಸ್ಸಿನ ವಲಿ ರೆಹಮಾನಿ ಸಾಮಾಜಿಕ ಜಾಲತಾಣಗಳಲ್ಲಿ ಕರೆ ಕೊಟ್ಟರು. ಇದಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯ್ತು. ಕ್ರೌಡ್ ಫಂಡಿಂಗ್ ಮೂಲಕ 10 ಕೋಟಿ ರೂ. ದೇಣಿಗೆ ಸಂಗ್ರಹಿಸಬೇಕು ಅನ್ನೋದು ವಲಿ ರೆಹಮಾನಿ ಆಸೆಯಾಗಿತ್ತು. ಈ ಪೈಕಿ ಕೇವಲ 6 ದಿನಗಳಲ್ಲೇ 6 ಕೋಟಿ ರೂ. ಹಣ ಸಂಗ್ರಹ ಆಗಿದೆ.
ಹಣ ಸಿಕ್ಕಿದ ಕೂಡಲೇ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಕೂಡಾ ಭರದಿಂದ ಆರಂಭವಾಗಿದೆ. ಉಮೀದ್ ಅಕಾಡೆಮಿ ಅನ್ನೋ ಈ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ಇದೀಗ ಪ್ರಗತಿಯಲ್ಲಿದೆ. ಶಾಲಾ ಕಟ್ಟಡ ನಿರ್ಮಾಣ ಪೂರ್ಣಗೊಂಡ ಕೂಡಲೇ ಅಲ್ಲಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ನಿರ್ಧಾರವನ್ನು ವಲಿ ರೆಹಮಾನಿ ಕೈಗೊಂಡಿದ್ದಾರೆ.
ಕ್ರೌಡ್ ಫಂಡಿಂಗ್ ಮಾಡುವ ಮುನ್ನ ವಲಿ ರೆಹಮಾನಿ ಅವರು ದಿನಗಟ್ಟಲೆ ದಾನಿಗಳ ಹುಡುಕಾಟ ನಡೆಸುತ್ತಿದ್ದಂತೆ. ದಾನಿಗಳು ವಲಿ ರೆಹಮಾನಿ ಅವರನ್ನು ಗಂಟೆಗಟ್ಟಲೆ ಕಾಯಿಸುತ್ತಿದ್ದರಂತೆ. ನಂತರ ಆತನ ಕೈಗೆ 1 ಸಾವಿರ ಕೈಗಿಟ್ಟು ವಾಪಸ್ ಕಳಿಸುತ್ತಿದ್ದರಂತೆ. ಒಬ್ಬರಂತೂ 5 ಕೋಟಿ ರೂ. ಹಣ ಕೊಡ್ತೇವೆ ಅಂತಾ ಹೇಳಿದವರು, ಒಂದೇ ಒಂದು ರೂಪಾಯಿ ಕೂಡಾ ಕೊಡಲಿಲ್ಲವಂತೆ. ಹೀಗಾಗಿ, ಕ್ರೌಡ್ ಫಂಡಿಂಗ್ಗೆ ಮುಂದಾದ ವಲಿ ರೆಹಮಾನಿ, 10 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಇದೀಗ ಸಿಕ್ಕಿರುವ 6 ಕೋಟಿ ರೂ. ಹಣದಲ್ಲಿ ಶಾಲೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮದೊಂದು ವಿಡಿಯೋ ಹರಿಬಿಟ್ಟ ವಲಿ ರೆಹಮಾನಿ, ಬಡ ಮಕ್ಕಳಿಗಾಗಿ ನಾನೊಂದು ಶಾಲೆ ನಿರ್ಮಿಸಲು ಹೊರಟಿದ್ದೇನೆ. ನಿಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ವಲಿ ರೆಹಮಾನಿ ಅವರ ವಿಡಿಯೋ ವೈರಲ್ ಆಗಿತ್ತು. ದೇಶದಲ್ಲಿ 20 ಕೋಟಿ ಮುಸ್ಲಿಮರಿದ್ದಾರೆ. ಈ ಪೈಕಿ ನಾನು ಕೇವಲ 20 ಲಕ್ಷ ಮುಸ್ಲಿಮರಲ್ಲಿ ಹಣ ಕೇಳಿದ್ದೇನೆ. ಎಲ್ಲಾ 20 ಲಕ್ಷ ಮುಸ್ಲಿಮರೂ ತಲಾ 100 ರೂ. ಕೊಟ್ಟರೂ ನಾನು 10 ಕೋಟಿ ರೂ. ಸಂಗ್ರಹಿಸಬಲ್ಲೆ ಎನ್ನುತ್ತಾರೆ ವಲಿ ರೆಹಮಾನಿ.
ಇನ್ನು ವಲಿ ರೆಹಮಾನಿ ಕರೆ ಕೊಟ್ಟ ಕೂಡಲೇ ಅವರ ಬ್ಯಾಂಕ್ ಖಾತೆಗೆ ಭಾರೀ ಪ್ರಮಾಣದ ಹಣ ಹರಿದುಬರಲು ಆರಂಭಿಸಿತು. ಐದೇ ದಿನಗಳಲ್ಲಿ 5 ಲಕ್ಷ ವಹಿವಾಟು ನಡೆದಿತ್ತು. ಹೀಗಾಗಿ, ಬ್ಯಾಂಕ್ ಸಿಬ್ಬಂದಿ ಹಗರಣ ಆಗಬಹುದು ಅಂತಾ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ವಲಿ ರೆಹಮಾನಿ ಮತ್ತೊಂದು ಬ್ಯಾಂಕ್ ಖಾತೆಯ ಮಾಹಿತಿ ರವಾನಿಸಿದರು. ಇತ್ತ ಬ್ಯಾಂಕ್ ಸಿಬ್ಬಂದಿ ಶಾಲಾ ಕಟ್ಟಡದ ಬಳಿ ಭೇಟಿ ನೀಡಿ ವಲಿ ರೆಹಮಾನಿ ನೀಡುತ್ತಿರುವ ಮಾಹಿತಿ ಸೂಕ್ತವಾಗಿದೆಯೇ ಎಂದು ದೃಢಪಡಿಸಿಕೊಂಡಿದ್ದರು.