ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಳೆ ಹಿನ್ನೆಲೆ ಸಾಕಷ್ಟು ದಿನಗಳು ರಜೆ ನೀಡಲಾಗಿದೆ. ಈ ರಜೆಗಳನ್ನು ಸರಿದೂಗಿಸಲು ಶನಿವಾರ ಮಳೆ ದಿನಗಳ ಸರಿದೂಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮುಂದಿನ 26 ಶನಿವಾರಗಳನ್ನು ಬಳಕೆ ಮಾಡಿಕೊಳ್ಳಲು ಸಿದ್ಧವಾಗಿದೆ ಈ ಬಗ್ಗೆ ಮಾಹಿತಿ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಈ ವರ್ಷ ಜಿಲ್ಲಾಡಳಿತ 13 ದಿನಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ.
ಈ ರಜೆಯ ಪ್ಯಾಚಪ್ಗಾಗಿ ಶಿಕ್ಷಣ ಇಲಾಖೆ ಸಜ್ಜಾಗಿದ್ದು, ಈ ಶೈಕ್ಷಣಿಕ ವರ್ಷದ 26 ಶನಿವಾರಗಳನ್ನು ಬಳಸಿಕೊಳ್ಳಲು ಚಿಂತನೆ. 13 ಮಳೆ ರಜೆಗೆ 26 ಶನಿವಾರ ಬಲಿಯಾಗಲಿವೆ; ಕ್ರಿಸ್ಮಸ್, ದಸರಾ ರಜೆಗೂ ಕತ್ತರಿ ಹಾಕಲು ಯೋಜನೆ.
ಕಳೆದ ಕೆಲವು ವರ್ಷಗಳಿಂದ ಮಳೆಗಾಗಿ ರಜೆ ನೀಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಳೆಯಿಂದಾಗಿ ಸಾಲು ಸಾಲು ರಜೆಗಳು ಪಾಠ ಪ್ರವಚನಕ್ಕೆ ಸಾಕಷ್ಟು ಹೊಡೆತ ನೀಡುತ್ತಾ ಸಾಗಿದೆ. ಆದರೆ ರಜೆಗೆ ಪೂರಕವಾಗುವಂತೆ ಹೆಚ್ಚುವರಿ ತರಗತಿ ನಡೆಸುವ ಚಿಂತನೆ ನಡೆದರೂ ಅದು ಪೂರ್ಣ ರೂಪದಲ್ಲಿ ಸಾಕಾರಗೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಪಿಯು ಕಾಲೇಜುಗಳಿಗೆ ಈ ಬಾರಿ ನೀಡಿರುವ ರಜೆಗಳನ್ನು ಸರಿದೂಗಿಸಲು ಶನಿವಾರ ಇಡೀ ದಿನ ಜತೆಗೆ ಭಾನುವಾರ ಕೂಡ ತರಗತಿ ನಡೆಸಲು ಚಿಂತನೆ ನಡೆಯುತ್ತಿದೆ. ಆದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾನುವಾರ ಹೆಚ್ಚಾಗಿ ಸಿಇಟಿ, ನೀಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳಿಗೆ ಹೋಗುವುದರಿಂದ ಭಾನುವಾರ ಪಿಯು ತರಗತಿ ನಡೆಸುವ ವಿಚಾರದಲ್ಲಿ ಒಮ್ಮತ ಮೂಡುತ್ತಿಲ್ಲ. ಕೆಲವು ಕಾಲೇಜುಗಳು ಈಗಾಗಲೇ ಶನಿವಾರ ಇಡೀ ದಿನ ತರ ಗತಿ ನಡೆಸಲಾರಂಭಿಸಿದರೆ, ಕೆಲವು ಕಾಲೇಜಿನವರು ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ.
ಶಿಕ್ಷಣದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರಮುಖ ಘಟ್ಟವಾಗಿರುವುದರಿಂದ ಈ ಬಾರಿಯ ಮಳೆಯ ರಜೆ ಈ 2 ತರಗತಿಗಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇರುವುದರಿಂದ ಎಸ್ಸೆಸ್ಸೆಲ್ಸಿಗೆ ಬೆಳಗ್ಗೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ ವಿಶೇಷ ತರಗತಿ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿದ್ದು, ಶಾಲೆಗಳಿಗೆ ಸೂಚನೆ ನೀಡಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ. ಪಿಯು ವಿದ್ಯಾರ್ಥಿಗಳಿಗೆ ಶನಿವಾರದ ತರಗತಿ ಸಾಕಾಗದೆ ಹೋದರೆ ಭಾನುವಾರ ಅರ್ಧ ದಿನವಾದರೂ ತರಗತಿ ನಡೆಸಿ ಪರೀಕ್ಷೆಯ ಮೊದಲು ಸಿಲೆಬಸ್ ಪೂರ್ಣ ಮಾಡಿ ಎಂಬ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶೈಕ್ಷಣಿಕ ವೈಶಿಷ್ಟ್ಯತೆಯೇ ಭಿನ್ನ. ಇಲ್ಲಿ ಸರಕಾರಿ ಅಧಿಕಾರಿಗಳು ಸೂಚನೆ ನೀಡುವ ಮೊದಲೇ ತರಗತಿ ಆರಂಭಿಸಿ ಪರೀಕ್ಷೆ ಮೊದಲೇ ಸಿಲೆಬಸ್ ಮುಗಿಸುತ್ತಾರೆ. ಖಾಸಗಿಯವರು ಆನ್ಲೈನ್ಗೆ ಇಳಿದರೂ ಅಷ್ಟೊಂದು ಪರಿಣಾಮಕಾರಿಯಾಗಿ ಮಾಡೋದಿಲ್ಲ. ಇದಕ್ಕಾಗಿ ಅವರು ಕೂಡ ಭೌತಿಕ ತರಗತಿಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ.
ಮಳೆ ನಿಂತು ಬಿಸಿಲು ಕಂಡಾಕ್ಷಣ ಶನಿವಾರ ಇಡೀ ದಿನ ತರಗತಿ ನಡೆಸಿ ಎನ್ನುವ ಸೂಚನೆ ನೀಡಲಿದ್ದೇವೆ. ಆದರೆ ಪೂರ್ಣರೂಪದಲ್ಲಿ ಮಳೆ ನಿಲ್ಲಬೇಕು. ಮಳೆ ನಿಂತ ಮರುವಾರವೇ ಶನಿವಾರ ಫುಲ್ ಕ್ಲಾಸ್ಗೆ ಸೂಚನೆ ನೀಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಸರಾ, ಕ್ರಿಸ್ಮಸ್ ರಜೆಗೂ ಕತ್ತರಿ?
ಜಿಲ್ಲೆಯಲ್ಲಿ ಮಳೆಗಾಗಿ ನೀಡಿದ ರಜೆಗಳು ಏಕರೂಪದಲ್ಲಿಲ್ಲ. ಕೆಲವೊಂದು ತಾಲೂಕುಗಳಿಗೆ ಹೆಚ್ಚುವರಿ ರಜೆ ನೀಡಲಾಗಿದೆ. ಕೆಲವು ತಾಲೂಕುಗಳಿಗೆ ಕಡಿಮೆ ರಜೆ ಸಿಕ್ಕಿದೆ. ಎರಡನ್ನೂ ಸರಿದೂಗಿಸಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ. ಸೆಪ್ಟೆಂಬರ್ನಿಂದ ಇದು ಆರಂಭವಾದರೂ ಫೆಬ್ರವರಿ ಕೊನೆ ತನಕ ಸಾಗಲಿದೆ. ಈ ಶನಿವಾರಗಳ ಲೆಕ್ಕಚಾರ ಮುಗಿಸುವುದು ಬಹಳ ಕಷ್ಟಕರ. ದಸರಾ, ಕ್ರಿಸ್ಮಸ್ ರಜೆ ಕಡಿತಗೊಳಿಸಲು ರಾಜ್ಯ ಸರಕಾರವೇ ಮುಂದಾಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.