ಕೇಂದ್ರ ಸರ್ಕಾರವು ಹಲವು ಪೋಸ್ಟ್ ಆಫೀಸ್ ಯೋಜನೆಗಳ ಬಡ್ಡಿದರವನ್ನು (Interest Rate) ಹೆಚ್ಚು ಮಾಡುವ ನಿರ್ಧಾರ ಮಾಡಿದೆ. ಅದರಲ್ಲಿ ರೈತರಿಗಾಗಿಯೇ ಶುರು ಮಾಡಿರುವ ಕಿಸಾನ್ ವಿಕಾಸ್ ಪತ್ರ ಯೋಜನೆ ಕೂಡ ಒಂದು. ಕಿಸಾನ್ ವಿಕಾಸ್ ಪತ್ರ (Kisan Vikas Patra) ಮತ್ತು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಇನ್ನು ಕೆಲವು ಸಣ್ಣ ಉಳಿತಾಯ ಯೋಜನೆಗಳ (Small Savings Scheme) ಬಡ್ಡಿದರವನ್ನು ಸರ್ಕಾರ ಹೆಚ್ಚಿಸಿದೆ. ಈ ಯೋಜನೆಗಳಲ್ಲದೆ ಸುಕನ್ಯಾ ಸಮೃದ್ಧಿ ಯೊಜನೆಯು ಹೆಣ್ಣು ಮಕ್ಕಳಿಗೆಂದೆ ವಿಶೇಷವಾಗಿ ಪ್ರಾರಂಭಿಸಿದ ಯೋಜನೆಯಾಗಿದೆ. ಈ ಯೋಜನೆಯ ವಿಶೇಷತೆಗಳೆಂದರೆ
1. ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರತೆಗಳನ್ನು ಉತ್ತೇಜಿಸುವ ಸಲುವಾಗಿ “ಬೇಟಿ ಬಚಾವೊ – ಬೇಟಿ ಪಡಾವೊ’ “ಹೆಣ್ಣು ಮಗುವನ್ನು ಉಳಿಸಿ – ಹೆಣ್ಣು ಮಗುವನ್ನು ಓದಿಸಿ” ಎಂಬ ಘೋಷ ವಾಕ್ಯದೊಂದಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ಆರಂಭಿಸಿದೆ.
2.ಈ ಹೊಸ ಯೋಜನೆಯನ್ನು 10 ವರ್ಷದೊಳಗಿನ ಹೆಣ್ಣು ಮಗುವಿಗಾಗಿಯೇ ರೂಪಿಸಲಾಗಿದೆ. ಈ ಖಾತೆಯನ್ನು ಯಾವುದೇ ಅಂಚೆ ಕಛೇರಿಯಲ್ಲಿ ಹೆಣ್ಣು ಮಗುವಿಗಾಗಿ ತೆರೆಯ ಬಹುದಾಗಿದೆ.
3. ಪಾಲಕರು/ಪೋಷಕರು ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆ ಹಾಗೂ ಗರಿಷ್ಟ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಎರಡು ಖಾತೆಗಳನ್ನು ತೆರೆಯಬಹುದಾಗಿದೆ.
4. ಈ ಖಾತೆಯನ್ನು ಯಾವುದೇ ಅಂಚೆ ಕಛೇರಿಯಲ್ಲಿ ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರು/ಪಾಲಕರ ವಿಳಾಸ ಮತ್ತು ಗುರುತಿನ ಚೀಟಿಗಳನ್ನು ನೀಡಿ ಆರಂಭಿಸಬಹುದು.
5. ಖಾತೆಯ ಮೇಲೆ ಶೇಕಡಾವಾರು 8.4% ರಷ್ಟು ಬಡ್ಡಿಯನ್ನು ತ್ರೈಮಾಸಿಕವಾಗಿ ನೀಡಲಾಗುತ್ತದೆ. ಬಡ್ಡಿದರಗಳು ವಿತ್ತ ಸಚಿವಾಲಯದ ಆದೇಶದ ಮೇರೆಗೆ ತ್ರೈಮಾಸಿಕವಾಗಿ ಬದಲಾಗ ಬಹುದಾಗಿದೆ.
6. ಖಾತೆಯನ್ನು ಕೇವಲ ರೂ. 1,000-00 ದೊಂದಿಗೆ ತೆರೆದು ಪ್ರತಿ ವರ್ಷ ರೂ. 1,50,000-00ರವರೆಗೂ ಹಣ ಸಂದಾಯ ಮಾಡಬಹುದಾಗಿದೆ. ಮುಂದಿನ ಜಮಾವಣೆಗಳು ರೂ. 100ರಗುಣಕದಲ್ಲಿರಬೇಕು.
7. ಈ ಖಾತೆಯಲ್ಲಿ ಖಾತೆ ಪ್ರಾರಂಭಗೊಂಡ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡ ಬಹುದಾಗಿದೆ. ಈ ಅವಧಿಯ ನಂತರ ಖಾತೆಯಲ್ಲಿರುವ ಮೊತ್ತವು ಕಾಲಾನುಕ್ರಮವಾಗಿ ಬಡ್ಡಿಯನ್ನು ಪಡೆಯುತ್ತದೆ.
8. ಖಾತೆಯ ಪೂರ್ಣಾವಧಿಯು ಖಾತೆ ಪ್ರಾರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಇರುತ್ತದೆ. ಖಾತೆಯಲ್ಲಿ ಜಮಾಗೊಂಡಿರುವ ಅಸಲು ಮತ್ತು ಬಡ್ಡಿಯ ಒಟ್ಟು ಮೊತ್ತದಲ್ಲಿ ಶೇಕಡಾ 50 ರಷ್ಟು ಭಾಗವನ್ನು ಹೆಣ್ಣು ಮಗಳಿಗೆ 18 ವರ್ಷ ತುಂಬಿದಾಗ ಹಿಂಪಡೆಯಬಹುದಾಗಿದೆ. ಹೆಣ್ಣು ಮಗಳಿಗೆ 18 ವರ್ಷ ತುಂಬಿದ ನಂತರ ವಿವಾಹವಾದರೆ, ಈ ಖಾತೆಯನ್ನು ಅವಧಿ ಪೂರ್ವದಲ್ಲಿಯೇ ಮುಕ್ತಾಯಗೊಳಿಸಬಹುದಾಗಿದೆ.
ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪಡೆಯ ಬೇಕಾದಲ್ಲಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯ ಬಹುದಾಗಿದೆ.