ನ್ಯೂಯಾರ್ಕ್: ಭಾರತದ ಖ್ಯಾತ ಟೆನಿಸ್ ತಾರೆ ಕೊಡಗು ಮೂಲದ ರೋಹನ್ ಬೋಪಣ್ಣ ಅವರು ಯುಎಸ್ ಓಪನ್ನಲ್ಲಿ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ದೇಶದ ಹಿರಿಯ ಅನುಭವಿ ಆಟಗಾರ ಬೋಪಣ್ಣ ಅವರು ಗುರುವಾರ ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ 2023 (US Open 2023) ರ ಪುರುಷರ ಡಬಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ವಿಶ್ವದ ಬಹುತೇಕ ಆಟಗಾರರು ವೃತ್ತಿ ಪರ ಆಟಕ್ಕೆ ವಿದಾಯ ಹೇಳಿ ಕೋಚಿಂಗ್ ಮಾಡುವ ವಯಸ್ಸಿನಲ್ಲಿ , 43ರ ಹರೆಯದ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಸೆಮಿಫೈನಲ್ನಲ್ಲಿ ಫ್ರೆಂಚ್ ಜೋಡಿಯನ್ನು 7-6, 6-2 ಸೆಟ್ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ನಲ್ಲಿ ಪುರುಷರ ಡಬಲ್ಸ್ನಲ್ಲಿ ಫೈನಲ್ ತಲುಪಿದ್ದು, ಗ್ರ್ಯಾಂಡ್ ಸ್ಲಾಮ್ ನಲ್ಲಿ ಫೈನಲ್ ತಲುಪಿದ ಅತ್ಯಂತ ಹಿರಿಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬಹಳ ದಿನಗಳಿಂದ ತಮ್ಮ ಮೊದಲ ಪುರುಷರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಾಗಿ ಪ್ರಯತ್ನ ನಡೆಸುತ್ತಿರುವ ರೋಹನ್ ಬೋಪಣ್ಣ ಅವರಿಗೆ ಮತ್ತೊಮ್ಮೆ ಈ ಸಾಧನೆ ಮಾಡುವ ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾದ ಎಬ್ಡೆನ್ ಜೊತೆಯಲ್ಲಿ, ಯುಎಸ್ ಓಪನ್ಗೂ ಮೊದಲು ಪ್ರಬಲ ಪ್ರದರ್ಶನ ನೀಡಿದ್ದ ಬೋಪಣ್ಣ, ವರ್ಷದ ಕೊನೆಯ ಗ್ರ್ಯಾನ್ಸ್ಲಾಮ್ನಲ್ಲೂ ಅದ್ಭುತ ಆಟ ಪ್ರದರ್ಶಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.”
ನೆರೆದಿದ್ದ ಪ್ರೇಕ್ಷಕರು ಕರಡತಾನದ ಮೂಲಕ ಉತ್ತೇಜನ ನೀಡಿದ್ದಕ್ಕಾಗಿ ಧನ್ಯವಾದಗಳು” 13 ವರ್ಷಗಳ ನಂತರ (ಯುಎಸ್ ಓಪನ್) ಫೈನಲ್ಗೆ ಹಿಂತಿರುಗಿದ್ದು , ನಾನು ನ್ಯೂಯಾರ್ಕ್ ಅನ್ನು ಪ್ರೀತಿಸುತ್ತೇನೆ ಎಂದು ಅವರು ಭಾವುಕರಾಗಿ ನುಡಿದರು. 41 ವರ್ಷದ ಆಟಗಾರ ಮಹುತ್ ಅವರು 12 ನೇ ಗೇಮ್ನಲ್ಲಿ ಆಡುತಿದ್ದಾಗ ತಲೆತಿರುಗುವಿಕೆ ಅನುಭವಿಸಿದರು. ಆಗ ಫಿಸಿಯೊ ಮತ್ತು ವೈದ್ಯರು ಚಿಕಿತ್ಸೆ ನೀಡಲು ಬಂದಾಗ ನಾಲ್ಕು ನಿಮಿಷಗಳ ಕಾಲ ಆಟ ಸ್ಥಗಿತಗೊಂಡಿತು.
ಸೆಪ್ಟೆಂಬರ್ 7ರ ಗುರುವಾರ ನಡೆದ ಸೆಮಿಫೈನಲ್ನಲ್ಲಿ ಆರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಮೊದಲ ಸೆಟ್ನಲ್ಲಿ ಫ್ರೆಂಚ್ ಜೋಡಿಯಿಂದ ಕಠಿಣ ಹೋರಾಟವನ್ನು ಎದುರಿಸಿತು. ಇಬ್ಬರೂ ಮೊದಲ ಸೆಟ್ನಲ್ಲಿ 2-4 ರಿಂದ ಹಿನ್ನಡೆಯಲ್ಲಿದ್ದರು. ಆದರೆ ಬೋಪಣ್ಣ-ಎಬ್ಡೆನ್ ಜೋಡಿ ಪಂದ್ಯದಲ್ಲಿ ಪ್ರಚಂಡ ಪುನರಾಗಮನವನ್ನು ಮಾಡಿ ಟೈ-ಬ್ರೇಕರ್ನಲ್ಲಿ 7-6 (3) ಅಂತರದಿಂದ ಮೊದಲ ಸೆಟ್ ಗೆದ್ದರು. ಮೊದಲ ಸೆಟ್ನ ಈ ಯಶಸ್ಸಿನ ಪರಿಣಾಮ ಎರಡನೇ ಸೆಟ್ನಲ್ಲಿಯೂ ಕಂಡುಬಂತು. ಅಂತಿಮವಾಗಿ ಉಭಯ ದೈತ್ಯರು, ಫ್ರೆಂಚ್ ಜೋಡಿಯನ್ನು 7-6, 6-2 ರಿಂದ ಮಣಿಸಿ ಫೈನಲ್ ಪ್ರವೇಶಿಸಿದರು.
13 ವರ್ಷಗಳ ನಂತರ ಬೋಪಣ್ಣ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಪುರುಷರ ಡಬಲ್ಸ್ ಫೈನಲ್ನಲ್ಲಿ ಆಡಲಿದ್ದು, ಪ್ರಾಸಂಗಿಕವಾಗಿ 2010ರ ಯುಎಸ್ ಓಪನ್ನಲ್ಲಿ ಫೈನಲ್ ಆಡಿದ್ದ ಬೋಪಣ್ಣ ಆ ಪಂದ್ಯದಲ್ಲಿ ಸೋಲನುಭವಿಸಿದ್ದರು. ಇನ್ನು 2017 ರಲ್ಲಿ ಫ್ರೆಂಚ್ ಓಪನ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಬೋಪಣ್ಣ ಅವರಿಗೆ ಇದು ಅವರ ವೃತ್ತಿಜೀವನದ ಏಕೈಕ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದೆ. ಇದೀಗ ಬೋಪಣ್ಣ ಅವರಿಗೆ ಪುರುಷರ ಡಬಲ್ಸ್ನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಒದಗಿ ಬಂದಿದೆ.