ಇಂದಿನ ಕಾಲದಲ್ಲಿ ಮಹಿಳೆಯರು ಹೊರಗಡೆ ಹೋಗಿ ದುಡಿಯುವುದು ಸಾಮಾನ್ಯವಾಗಿದೆ. ಹಾಗೆ ಬೇರೆ ಬೇರೆ ಕಡೆ ಹೋಗಿ ಜೊಬ್ ಮಾಡುವುದರಿಂದ ಪ್ರಯಾಣವನ್ನು ಕೂಡ ಆಚೆಯಿಂದ ಈಚೆ ಮಾಡುತ್ತಿರಬೇಕಾಗುತ್ತದೆ. ಹಾಗೆ ಮಾಡುವಾಗ ಕೆಲವೊಮ್ಮೆ ತುಂಬ ದೂರದ ಪ್ರಯಾಣವನ್ನು ಮಾಡಬೇಕು. ಅಂತ ಸಮಯದಲ್ಲಿ ತುಂಬಾ ಜಾಗರೂಕರಾಗಿ ಇರಬೇಕಾಗುತ್ತದೆ.
ಇನ್ನೂ ರಾತ್ರಿ ಹೊತ್ತು ಬಸ್ಸಿನಲ್ಲಿ ಪ್ರಯಾಣಿಸುವಾಗ ನೀವು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಪ್ರಯಾಣಿಸುವಾಗ ರಾತ್ರಿ ಆಗಲಿ ಅಥವಾ ಹಗಲಾಗಿರಲಿ, ಯಾವಾಗಲೂ ನಿಮ್ಮ ಫ್ಯಾಮಿಲಿ ಅಥವಾ ಆತ್ಮೀಯರೊಂದಿಗೆ ಸಂಪರ್ಕದಲ್ಲಿರಿ. ಅದರಲ್ಲಿಯೂ ಆಟೋರಿಕ್ಷಾ, ಟ್ಯಾಕ್ಸಿಗಳಂತಹ ವಾಹನಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮತ್ತಷ್ಟು ಹೆಚ್ಚಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಪ್ರಯಾಣ ಮಾಡುವಾಗ ಯಾವಾಗಲೂ ಆತ್ಮವಿಶ್ವಾಸದ ಮುಖವನ್ನು ಇಟ್ಟುಕೊಂಡಿರಬೇಕು. ನೀವು ಒಬ್ಬಂಟಿಯಾಗಿದ್ದರೆ ಅಥವಾ ನೀವು ಭಯಪಡುತ್ತಿದ್ದರೆ, ಅಸಮಾಧಾನಗೊಂಡಿದ್ದರೆ ಇದು ಯಾರಿಗೂ ತಿಳಿಯದಂತೆ ನಗುತ್ತಾ ಇರಿ.
ಅದೇ ರೀತಿ ಪ್ರಯಾಣ ಮಾಡುವಾಗ ಸದಾ ಜಾಗೃತರಾಗಿರಿ. ಸುತ್ತಮುತ್ತಲಿನ ಜನ ಮತ್ತು ವಾತಾವರಣವನ್ನು ಗಮನಿಸಿಕೊಂಡು, ಪ್ರಯಾಣದ ಸಮಯದಲ್ಲಿ ನಿಮ್ಮ ಪರ್ಸ್ ಬಗ್ಗೆ ಕಾಳಜಿ ವಹಿಸಿ. ಸಾಧ್ಯವಾದರೆ ಮನೆಯಿಂದ ಪ್ರಯಾಣ ಹೊರಟಿರುವಾಗ ಬೇಕಾಗುವ ಆಹಾರ, ನೀರನ್ನು ತೆಗೆದುಕೊಂಡು ಹೋಗಿ. ಹವಾಮಾನ ಉತ್ತಮವಾಗಿದ್ಯಾ ಎಂಬುವುದನ್ನು ಮೊದಲೇ ನೋಡಿಕೊಂಡು ಪ್ರಯಾಣದ ಶುರು ಮಾಡಿದರೆ ಒಳ್ಳೆಯದು.
ಯಾವುದಾದರೂ ತುರ್ತು ಸಂದರ್ಭ ಎದುರಾದರೆ, ವಾಹನದಿಂದ ಹೊರಬರಲು ಮಾರ್ಗವಿದ್ಯಾ? ಎಂಬುವುದನ್ನು ತಿಳಿದುಕೊಳ್ಳಬೇಕು. ಹಾಗಾಗಿ ನೀವು ಪ್ರಯಾಣಿಸುವ ವಾಹನದ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು. ಪ್ರಯಾಣದ ಸಮಯದಲ್ಲಿ ನಿಮ್ಮ ಪಕ್ಕದಲ್ಲಿ ಕುಳಿತ ವ್ಯಕ್ತಿಯೊಂದಿಗೆ ಮಾತನಾಡಿ. ಏಕೆಂದರೆ ಆ ವ್ಯಕ್ತಿ ನಿಮಗೆ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಬಹುದು. ಇದಿಷ್ಟು ಕಾಳಜಿ ವಹಿಸಿದರೆ ನೀವು ಒಬ್ಬಂಟಿಯಾಗಿ ಪ್ರಯಾಣ ಮಾಡಬಹುದು.