ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ 19ನೇ ಅಪೆಕ್ಸ್ ಕೌನ್ಸಿಲ್ ಸಭೆಯನ್ನು ಜುಲೈ 7 ರಂದು ಮುಂಬೈನಲ್ಲಿ ನಡೆಸಿದ್ದು, ಈ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತದ ಆಟಗಾರರು ವಿದೇಶಿ ಲೀಗ್ಗಳಲ್ಲಿ ಆಡುವ ಬಗ್ಗೆ ಹೊಸ ನೀತಿ ಜಾರಿಗೊಳಿಸಲು ಬಿಸಿಸಿಐ ಮುಂದಾಗಿದೆ. ಹಾಗೆಯೇ ಕಳೆದ ಐಪಿಎಲ್ನಲ್ಲಿ ಜಾರಿಗೆ ತಂದಿದ್ದ ಹೊಸ ನಿಯಮ ಇಂಪ್ಯಾಕ್ಟ್ ಪ್ಲೇಯರ್ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ ಇದರೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ ಟೀಂ ಇಂಡಿಯಾ ಆಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಬಿಸಿಸಿಐ, ವಿಶ್ವಕಪ್ ಆಯೋಜನೆಯ ಬಗ್ಗೆಯೂ ಚರ್ಚೆ ನಡೆಸಿದೆ.
* ವಿದೇಶಿ ಲೀಗ್ಗಳಲ್ಲಿ ಆಡುವ ಆಟಗಾರರಿಗೆ ಕಡಿವಾಣ:
ಇತ್ತೀಚಿಗೆ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾದ ಹಾಗೆಯೇ ಭಾರತ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಹಿರಿಯ ಆಟಗಾರರು ವಿದೇಶಿ ಲೀಗ್ ಆಡುತ್ತಿದ್ದಾರೆ. ಆದರೆ ಇದೀಗ ಭಾರತ ಕ್ರಿಕೆಟ್ಗೆ ವಿದಾಯ ಹೇಳಿ ವಿದೇಶಿ ಲೀಗ್ ಆಡಲು ಬಯಸುವ ಆಟಗಾರರಿಗೆ ಕಡಿವಾಣ ಹಾಕಲು ಬಿಸಿಸಿಐ ಮುಂದಾಗಿದೆ. ಇದರ ಸಲುವಾಗಿ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಹೊಸ ನೀತಿ ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈಗ ಚರ್ಚಿಸಿರುವ ಹೊಸ ನೀತಿಯ ಪ್ರಕಾರ, ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆಟಗಾರರು ವಿದೇಶಿ ಲೀಗ್ಗಳಲ್ಲಿ ಆಡಬೇಕೆಂದರೆ, ಬಿಸಿಸಿಐನಿಂದ ಎನ್ಒಸಿ ಪಡೆಯಬೇಕು. ಹಾಗೆಯೇ ನಿವೃತ್ತ ಆಟಗಾರರಿಗೆ ಕೂಲಿಂಗ್-ಆಫ್ ಅವಧಿಯನ್ನು ಪರಿಚಯಿಸಲು ಬಿಸಿಸಿಐ ಮುಂದಾಗಿದೆ. ಅಂದರೆ, ಟೀಂ ಇಂಡಿಯಾ ಆಟಗಾರರು ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಒಂದು ವರ್ಷದವರೆಗೆ ಯಾವುದೇ ಸಾಗರೋತ್ತರ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ.
* ಇಂಪ್ಯಾಕ್ಟ್ ಪ್ಲೇಯರ್ ನಿಯಮ:
ಕಳೆದ ಬಾರಿಯಂತೆ ಈ ಬಾರಿಯೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಬೌಲರ್ ಗಳು ಈಗ ಒಂದು ಓವರ್ ನಲ್ಲಿ 2 ಬೌನ್ಸರ್ ಗಳನ್ನು ಎಸೆಯಲು ಸಾಧ್ಯವಾಗುತ್ತದೆ. ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ, ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪ್ರತಿ ಓವರ್ ಗೆ ಎರಡು ಬೌನ್ಸರ್ ಗಳನ್ನು ಅನುಮತಿಸಲು ಬಿಸಿಸಿಐ ನಿರ್ಧರಿಸಿದೆ .ಇಲ್ಲಿಯವರೆಗೆ ಯಾವುದೇ ಬೌಲರ್ ಪ್ರತಿ ಓವರ್ ಗೆ ಒಂದು ಬೌನ್ಸರ್ ಅನ್ನು ಮಾತ್ರ ಮಾಡಬಹುದಾಗಿತ್ತು. ಆದರೆ ಈ ನಿಯಮದಲ್ಲಿ ಎರಡು ಬದಲಾವಣೆಗಳನ್ನು ತರಲಾಗಿದೆ. ಉಭಯ ತಂಡಗಳು ಟಾಸ್ಗೂ ಮೊದಲು ತಮ್ಮ ತಮ್ಮ ತಂಡಗಳ 4 ಬದಲಿ ಆಟಗಾರರೊಂದಿಗೆ ತಮ್ಮ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಬೇಕಾಗುತ್ತದೆ. ಪಂದ್ಯದ ಯಾವುದೇ ಸಮಯದಲ್ಲಿ ತಂಡಗಳು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಬಹುದಾಗಿದೆ. ಈ ಹಿಂದಿನ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉಭಯ ತಂಡಗಳು ಇನಿಂಗ್ಸ್ನ 14 ನೇ ಓವರ್ ಒಳಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಬಹುದಾಗಿತ್ತು. ಆದರೆ ಈಗ ಇನ್ನಿಂಗ್ಸ್ನ ಯಾವ ಹಂತದಲ್ಲಾದರೂ ಈ ನಿಯಮವನ್ನು ಬಳಸಿಕೊಳ್ಳಬಹುದಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಇದರ ಇಂಪ್ಯಾಕ್ಸ್ ಪ್ಲೇಯರ್ ನಿಯಮವು ಇಂಡಿಯನ್ ಪ್ರೀಮಿಯರ್ ಲೀಗ್ ನಂತೆ ಅನ್ವಯಿಸುತ್ತದೆ.
* ಏಷ್ಯನ್ ಗೇಮ್ಸ್ಗೆ ಭಾರತ ತಂಡ:
ಇದೇ ಸೆಪ್ಟೆಂಬರ್ನಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಭಾರತ ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ಇದೇ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಷ್ಯನ್ ಗೇಮ್ಸ್ಗೆ ಭಾರತ ಬಿ ಪುರುಷ ತಂಡವನ್ನು ಕಳುಹಿಸಲಾಗುತ್ತಿದೆ.
*ಎರಡು ಹಂತಗಳಲ್ಲಿ ದೇಶದ ಸ್ಟೇಡಿಯಂಗಳ ಉನ್ನತೀಕರಣ:
ಐದನೇ ನಿರ್ಣಯವಾಗಿ ಬಿಸಿಸಿಐ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ದೇಶದ ಕ್ರಿಕೆಟ್ ಕ್ರೀಡಾಂಗಣಗಳನ್ನು ಎರಡು ಹಂತಗಳಲ್ಲಿ ಉನ್ನತೀಕರಣಗೊಳಿಸಲು ಮುಂದಾಗಿದೆ.ಮೊದಲ ಹಂತದಲ್ಲಿ ಏಕದಿನ ವಿಶ್ವಕಪ್ಗೆ ಆತಿಥ್ಯವಹಿಸುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯವನ್ನು ವಿಶ್ವಕಪ್ ಪ್ರಾರಂಭವಾಗುವ ಮೊದಲು ಪೂರ್ಣಗೊಳಿಸಲಾಗುತ್ತದೆ. ಹಾಗೆಯೇ ಎರಡನೇ ಹಂತದಲ್ಲಿ ಉಳಿದ ಕ್ರಿಕೆಟ್ ಮೈದಾನಗಳನ್ನು ಉನ್ನತೀಕರಣಗೊಳಿಸಲಾಗತ್ತದೆ.