ವಿಧಾನಸೌಧದಲ್ಲಿ ಈಗ ಅಧಿವೇಶನದ ಗದ್ದಲ. ಇನ್ನೇನು ಮತದಾನ ಮುಗಿದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಅಧಿಕಾರ ಅವಧಿ ಬಲು ವೇಗವಾಗಿಯೇ ಚಲಿಸುತ್ತಿದೆ. ಇವೆಲ್ಲದರ ಮಧ್ಯೆ ಚರ್ಚೆಗೊಳಗಾದುದು ಮಾನ್ಯ ಸಭಾಪತಿಗಳಾದ ಯು. ಟಿ. ಖಾದರ್ ರವರ ಭಾಷೆ.
ಹಲವಾರು ಪರ-ವಿರೋಧ ಟೀಕೆ, ನಗೆ ಪಾಟಲಿಗಳ ಮಧ್ಯೆ ಅರಿಯಬೇಕಾದ್ದು, “ಭಾಷೆ ಎಂದರೇನು”? ಎಂದು. ಒಬ್ಬ ವ್ಯಕ್ತಿ ತನ್ನ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಲು ಇರುವ ಮಾಧ್ಯಮವೇ ಭಾಷೆ. ಭಾರತೀಯರಾದ ನಾವುಗಳು ಹಲವಾರು ಧರ್ಮ, ಜಾತಿ, ಉಪಜಾತಿಗಳಾಗಿ ವಿಂಗಡಣೆಯಾಗುವುದು ಮಾತ್ರವಲ್ಲದೆ ಭಾಷಾ ವೈವಿಧ್ಯತೆಯಿ೦ದಲೂ ಹೆಸರಾದವರು. ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಧಾರವಾಡ ಕನ್ನಡ ಎಂಬಿತ್ಯಾದಿ ವಿಂಗಡಣೆಗಳು ಬರೇ ಕನ್ನಡ ಭಾಷೆಯಲ್ಲೇ ಇದೆ. ಇನ್ನು ಒಂದು ಜಿಲ್ಲೆಯಲ್ಲಿದ್ದುಕೊಂಡು ಏಳು ಭಾಷೆ ಮಾತನಾಡುವ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಭಾಷೆಯ ಮೇಲಿನ ಅರಿವು, ಪದಬಳಕೆ ಮುಂತಾದವುಗಳ ನಿಯಂತ್ರಣ ಮತ್ತು ಒಂದು ಭಾಷೆಯನ್ನಾಡುವಾಗ ಮತ್ತೊಂದು ಭಾಷೆ ಮಿಶ್ರಣ ಎಷ್ಟರ ಮಟ್ಟಿಗಿರಬಹುದೆಂದು ಊಹಿಸಬಹುದು.
ಖಾದರ್ ರವರ ಭಾಷೆಯ ಬಗ್ಗೆ ಲೇವಡಿ ಮಾಡುವ ಜನ ಅರಿಯಬೇಕಿರುವುದು ಭಾಷೆ ಮತ್ತು ಮಾತನಾಡುವ ಶೈಲಿಯ ಮಧ್ಯೆಯಿರುವ ಅಂತರ. ತನ್ನ ತಾಯಿನಾಡಾದ ಮಂಗಳೂರಿನ ಕನ್ನಡವನ್ನು, ತನ್ನ ಮಾತೃ ಭಾಷೆಯಾದ ಬ್ಯಾರಿ ಮಿಶ್ರಣದೊಂದಿಗೆ ಖಾದರ್ ರವರು ಮಾತನಾಡುವಾಗ ಅಲ್ಪ ವೈಕಲ್ಯ ಕೇಳಿ ಬರುವುದು ನಿಜ. ಅದು ಅವರ ಹುಟ್ಟು ಸಂವಹನ ರೀತಿಯೇ ಹೊರತು ಭಾಷಾ ಅರಿವಿನ ಕೊರತೆಯಲ್ಲ.
“ದೈಹಿಕ ರೋಗಗಳಿರುವಂತೆ, ಮಾನಸಿಕವಾಗಿ ಆಗುವ ಘಾಸಿಯೂ ಕಾಳಜಿ ವಹಿಸುವಂತದ್ದು,” ಎಂದು ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾಣ್ಣುಡಿಯಾಡುವವರು ಮತ್ತೊಬ್ಬರ ನ್ಯೂನ್ಯತೆಯನ್ನು ನಗೆ ಪಾಟಿಲಿನ ವಸ್ತುವಾಗಿಸುವಾಗ, ಮಾನಸಿಕ ಆರೋಗ್ಯವನ್ನು ಹದಗೆಡಿಸುವಲ್ಲಿ ನಮ್ಮ ಪಾಲೇನಿದೆ ಎಂಬ ಅರಿವನ್ನು ಒಳಗೊಳ್ಳುವುದು ಉತ್ತಮ. ಇನ್ನು ಈಗಷ್ಟೇ ಮಂಡನೆಯಾದ ಬಜೆಟ್, ಅಧಿವೇಶನ ನಡೆಯುವಾಗ ಮಂತ್ರಿ ನಾಮಧಾರಿಯಾಗಿ ಕುಳಿತು ಕಾಲ್ಕಿತ್ತ ಅಪರಿಚಿತ ವ್ಯಕ್ತಿ, ಒಬ್ಬ ಮಂತ್ರಿ ಮತ್ತು ಅಪರಿಚಿತ ವ್ಯಕ್ತಿಯನ್ನು ಗುರುತಿಸಿ ಪ್ರತ್ಯೇಕಿಸುವಲ್ಲಿ ನಡೆದ ಭದ್ರತಾ ಲೋಪ ಮುಂತಾದವುಗಳು ಅತ್ಯಂತ ಚರ್ಚಾಗ್ರಸ್ತ ವಿಷಯವಾಗಬೇಕು. ಭಾಷೆ ಸಂವಹನದ ಮೂಲ ಮಾತ್ರ, ಭಾಷೆಯ ಮೂಲಕ ಮಾತ್ರ ಸಂವಹನ ಸಾಧ್ಯ ಅಲ್ಲ.
ಇತ್ತೀಚಿಗೆ ಪ್ರಧಾನಿ ಮೋದಿ ಅಮೇರಿಕ ಭೇಟಿಯ ಸಂದರ್ಭದಲ್ಲಿ ಅವರು ಅಮೇರಿಕೆಯ ಸಂಸತ್ ಉದ್ದೇಶಿಸಿ ಇಂಗ್ಲೀಷ್ ನಲ್ಲಿ ಮಾತನಾಡಿದರು. ಆಗ ಅವರ ಇಂಗ್ಲೀಷ್ ಅನ್ನು ಸಹ ಟೀಕಿಸಲಾಗಿತ್ತು. ಅದೂ ಸಹ ಒಳ್ಳೆಯ ಬೆಳವಣಿಗೆ ಅಲ್ಲ ಎಂಬುದನ್ನು ನಾವಿಲ್ಲಿ ಮನಗಾಣಬಹುದು.