ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ)ವು ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆ ಮತ್ತು ಸೊತ್ತುಗಳನ್ನು ಜಪ್ತಿ ಮಾಡಲು ಕಂದಾಯ ಇಲಾಖೆಯಿಂದ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಜೂನ್ 27 ರಂದು ಸುಳ್ಯ ಪಟ್ಟಣದಲ್ಲಿ ಎನ್ಐಎ ನ್ಯಾಯಾಲಯದ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡಿದ್ದು ಜೂನ್ 30 ರೊಳಗೆ ಬೆಂಗಳುರಿನ ಎನ್ಐಏ ನ್ಯಾಯಾಲಯಕ್ಕೆ ಶರಣಾಗದಿದ್ದರೆ ಅವರ ಮನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಘೋಷಿಸಿತ್ತು. ಎನ್ಐಎ ನ್ಯಾಯಾಲಯದ ಅಧಿಕಾರಿಗಳು ಮತ್ತು ಸುಳ್ಯದ ಪೊಲೀಸ್ ಸಿಬ್ಬಂದಿಗಳು ಪ್ರಕಟಣೆ ಮಾಡಿದ್ದು ಆರೋಪಿಗಳ ಸುಳಿವು ನೀಡಿದರೆ ನಗದು ಬಹುಮಾನ ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರಾದರೂ ಆರೋಪಿಗಳು ಇನ್ನೂ ಶರಣಾಗಲಿಲ್ಲ. ಇದೀಗ ಮುಂದಿನ ಕ್ರಮವಾಗಿ ಆರೋಪಿಗಳು ಹೊಂದಿರುವ ಸ್ಥಿರ ಮತ್ತು ಚರ ಆಸ್ತಿಗಳನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಆರೋಪಿಗಳ ಹೆಸರಿನಲ್ಲಿ ಮನೆ ಇದ್ದರೆ ಮನೆಯಲ್ಲಿದ್ದವರನ್ನು ಹೊರ ಹಾಕಿ ಬೀಗಮುದ್ರೆ ಹಾಕಲಾಗುತ್ತದೆ. ಆರೋಪಿಗಳ ಹೆಸರಿನಲ್ಲಿ ಮನೆ, ಶಾಪಿಂಗ್ ಕಾಂಪ್ಲೆಕ್ಸ್ ಇದ್ದು ಬಾಡಿಗೆಗೆ ನೀಡಿದ್ದರೂ ಬಾಡಿಗೆದಾರರನ್ನು ಹೊರ ಕಳಿಸಿ ಬೀಗ ಮುದ್ರೆ ಹಾಕಲಾಗುತ್ತದೆ. ಆರೋಪಿಗಳು ಜಮೀನು , ತೋಟ ಇತ್ಯಾದಿ ಹೊಂದಿದ್ದಲ್ಲಿ ಆದರೊಳಗೆ ಯಾರೂ ಪ್ರವೇಶಿಸದಂತೆ ಪೋಲೀಸ್ ಪಹರೆ ಹಾಕಲಾಗುತ್ತದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಕಳೆದ ಜನವರಿ 20 ರಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಒಟ್ಟು 240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತಲೆ ಮರೆಸಿಕೊಂಡಿರುವ ಆರು ಆರೋಪಿಗಳ ವಿರುದ್ದ ಕರ್ನಾಟಕ ಮತ್ತು ಕೇರಳ ರಾಜ್ಯದ ವಿವಿಧ ಬಾಗಗಳಲ್ಲಿ ತೀವ್ರ ಶೋಧ ನಡೆಸಿದೆ. ಎನ್ಐಏ, ಕಳೆದ ಮೇ 2 ರಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿದೆ.
ಪೂರಕ ಆರೋಪ ಪಟ್ಟಿ ಸಲ್ಲಿಕೆಯಾದ ಇಬ್ಬರು ಆರೋಪಿಗಳಾದ – ತುಫೈಲ್ ಎಂ. ಎಚ್. ಮತ್ತು ಮಹಮ್ಮದ್ ಜಬೀರ್ ವಿರುದ್ದ – ಐಪಿಸಿ ಮತ್ತು ಯುಎ (ಪಿ) ಆಕ್ಟ್, 1967 ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಕಳೆದ ಜುಲೈ 26, 2022 ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಈ ಕೊಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಗುರಿಯೊಂದಿಗೆ ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಮತ್ತು ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ PFI ನ ಕಾರ್ಯಸೂಚಿಯ ಭಾಗವಾಗಿ ನೆಟ್ಟಾರು ಅವರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ನಂತರ ಜನಾಕ್ರೋಶ ತೀವ್ರವಾಗಿ ಭುಗಿಲೆದ್ದಿದ್ದು ರಾಜ್ಯ ಸರ್ಕಾರ ಪ್ರಕರಣವನ್ನು ಎನ್ಐಏ ಗೆ ಒಪ್ಪಿಸಿತ್ತು.
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ವು ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆ ಅವರನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು. ಆದರೆ ಅವರು 2788 ಮತ ಗಳಿಸಿದ್ದರು.