ಬಿಜೆಪಿ ಮುಂಬರಲಿರುವ ಲೋಕಸಭಾ ಚುನಾವಣೆಯ ಸಿದ್ದತೆಯನ್ನು ಆರಂಭಿಸಿದ್ದು ಇಂದಿನಿಂದ ದೇಶಾದ್ಯಂತ ಒಂದು ತಿಂಗಳ ಕಾಲ ‘ಮಹಾ ಜನಸಂಪರ್ಕ’ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಅಭಿಯಾನವು ಮೇ 31 ರಿಂದ ಜೂನ್ 30ರವರೆಗೆ ನಡೆಯಲಿದ್ದು ಇಂದು ರಾಜಸ್ಥಾನದ ಅಜ್ಮೇರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಅಭಿಯಾನದ ಗುರಿ:
ಮೇ 31 ರಿಂದ ಜೂನ್ 30ರವರೆಗೆ ಮಹಾ ಜನ ಸಂಪರ್ಕ ಅಭಿಯಾನದಡಿ ದೇಶಾದ್ಯಂತ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲೂ ಈ ಅಭಿಯಾನವನ್ನು ನಡೆಸುವ ಗುರಿಯನ್ನು ಬಿಜೆಪಿ ಹೊಂದಿದೆ.500ಕ್ಕೂ ಹೆಚ್ಚು ಲೋಕಸಭೆ ಹಾಗೂ 4 ಸಾವಿರ ವಿಧಾನಸಭಾ ಕ್ಷೇತ್ರಗಳಲ್ಲಿ 51ಕ್ಕೂ ಹೆಚ್ಚು ಬೃಹತ್ ರ್ಯಾಲಿಗಳು, 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು 600ಕ್ಕೂ ಹೆಚ್ಚು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು ಹಾಗೂ 5ಲಕ್ಷಕ್ಕೂ ಹೆಚ್ಚು ಗಣ್ಯರ ಕುಟುಂಬಗಳನ್ನು ಸಂಪರ್ಕಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ.
ಅತಿ ದೊಡ್ಡ ಕಾರ್ಯಕ್ರಮ:
ಬಿಜೆಪಿ ಇತಿಹಾಸದಲ್ಲಿಯೇ ಅತಿ ದೊಡ್ಡ ಕಾರ್ಯಕ್ರಮ ಇದಾಗಿದ್ದು, ಒಟ್ಟು 288 ಬಿಜೆಪಿ ನಾಯಕರು ಮತ್ತು 16 ಲಕ್ಷ ಪಕ್ಷದ ಕಾರ್ಯಕರ್ತರ ಹತ್ತು ಲಕ್ಷ ಬೂತ್ಗಳಲ್ಲಿ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಮತ್ತು ಕೇಂದ್ರದಲ್ಲಿ ಪಕ್ಷದ 9 ವರ್ಷಗಳ ಆಡಳಿತದಲ್ಲಿನ ಸಾಧನೆಗಳ ಸಂದೇಶವನ್ನು ರವಾನಿಸಲು ಎಲ್ಲಾ ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ 144 ಕ್ಲಸ್ಟರ್ಗಳನ್ನು ಸ್ಥಾಪನೆ ಮಾಡಲಾಗುತ್ತದೆ.
ಮಹಾ ಜನಸಂಪರ್ಕ ಅಭಿಯಾನ :
*ಮಹಾ ಜನಸಂಪರ್ಕ ಅಭಿಯಾನ ಪ್ರಚಾರದ ಭಾಗವಾಗಿ ಪಕ್ಷದ ನಾಯಕರು ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 1 ಸಾವಿರ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ. ಹಾಗೆಯೇ ಶಿಕ್ಷಕರು, ಸಾಮಾಜಿಕ ಮಾಧ್ಯಮ ಪ್ರಭಾವಿಗಳೊಂದಿಗೆ ಭಾರತದಾದ್ಯಂತ 51 ಮೆಗಾ ರ್ಯಾಲಿಗಳನ್ನು ನಡೆಸಲಿದ್ದಾರೆ.
*ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಹೇಗೆ ನಾಶಪಡಿಸಿತು ಎಂಬುದರ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತದೆ.
*ಜೂನ್ 20 ರಿಂದ ಜೂನ್ 30 ರವರೆಗೆ ಮನೆ-ಮನೆಗೆ ತೆರಳಿ ಸಾರ್ವಜನಿಕ ಸಭೆಗಳು ನಡೆಯಲಿದ್ದು, ಕೇಂದ್ರ ಸಚಿವರು, ರಾಷ್ಟ್ರೀಯ ಪದಾಧಿಕಾರಿಗಳು ಸೇರಿದಂತೆ ಎಲ್ಲ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.
*ಯುವ ಮೋರ್ಚಾದ ಸದಸ್ಯರು ಫಲಾನುಭವಿಗಳ ಸಂಪರ್ಕದ ಬೂತ್ಗಳಲ್ಲಿ ಮುದ್ರಾ ಸಾಲ ಯೋಜನೆ, ಸ್ಟಾರ್ಟ್ಅಪ್ ಇಂಡಿಯಾ ಇತ್ಯಾದಿ ಫಲಾನುಭವಿಗಳನ್ನು ಭೇಟಿ ಮಾಡಿ, ಕೇಂದ್ರದ ಬಿಜೆಪಿ ಸರ್ಕಾರ 9 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಿದ್ದಾರೆ.
*ಮೋದಿ ಸರ್ಕಾರದ ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ಸಾಧನೆಗಳನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವ ಸಲುವಾಗಿ ಕೋಟ್ಯಂತರ ಬಿಜೆಪಿ ಕಾರ್ಯಕರ್ತರು, 300 ಕ್ಕೂ ಹೆಚ್ಚು ಸಂಸದರು ಮತ್ತು 1400 ಕ್ಕೂ ಹೆಚ್ಚು ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
*ಬಿಜೆಪಿ ಸರ್ಕಾರದ ಸಾಧನೆ ಎಲ್ಲರಿಗೂ ತಲುಪಿಸುವ ಸಲುವಾಗಿ ಹೊಸ ಮತದಾರರ ಸಮಾವೇಶದಲ್ಲಿ 15931 ಮಂಡಲಗಳು 18 ರಿಂದ 25 ವರ್ಷ ವಯಸ್ಸಿನ ಮತದಾರರ ಸಮಾವೇಶವನ್ನು ಆಯೋಜಿಸಲಾಗುತ್ತದೆ. ದೇಶಾದ್ಯಂತ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಎಲ್ಲ ಕುಟುಂಬಗಳನ್ನು ಆಹ್ವಾನಿಸಿ ರಾಷ್ಟ್ರಮಟ್ಟದಲ್ಲಿ ಆನ್ಲೈನ್ ರಸಪ್ರಶ್ನೆ ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ.