ಭಾರತದ ಮೊದಲ ವಿದೇಶಿ ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಂಜಿಬಾರ್ನಲ್ಲಿ ನಿರ್ಮಾಣವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಪೂರ್ವ ಆಫ್ರಿಕಾದ ಕರಾವಳಿಯಲ್ಲಿರುವ ತಾಂಜೇನಿಯಾದ ದ್ವೀಪಸಮೂಹವಾಗಿರುವ ಜಾಂಜಿಬಾರ್ನಲ್ಲಿ ಐಐಟಿ ಮದ್ರಾಸ್ನ ಕ್ಯಾಂಪಸ್ನ ಸ್ಥಾಪನೆಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಾಗಿದೆ.
ತಾಂಜಾನಿಯಾ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಜಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿ 2020 ಉನ್ನತ ಕಾರ್ಯಕ್ಷಮತೆ ಹೊಂದಿರುವ ಭಾರತೀಯ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳನ್ನು ಇತರ ದೇಶಗಳಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸುತ್ತಿದೆ. ಹಾಗೂ “ಈ ಕ್ಯಾಂಪಸ್ ಭಾರತ ಮತ್ತು ತಾಂಜಾನಿಯಾ ನಡುವಿನ ದೀರ್ಘಕಾಲದ ಸ್ನೇಹವನ್ನು ಪ್ರತಿಬಿಂಬಿಸುತ್ತದೆ. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಶೈಕ್ಷಣಿಕ ಪಾಲುದಾರಿಕೆಯ ಸಂಬಂಧವನ್ನು ಔಪಚಾರಿಕಗೊಳಿಸಲಾಗಿದೆ. ಐಐಟಿ 2023ರ ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಐಐಟಿ ಮದ್ರಾಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾನದಂಡ ನಿಗಧಿಪಡಿಸಲಿದೆ. ವಿದೇಶದಲ್ಲಿನ ಕ್ಯಾಂಪಸ್ನ್ನು ಮುನ್ನಡೆಸುವ ಜವಬ್ದಾರಿಯನ್ನು ಮದ್ರಾಸ್ ಐಐಟಿಗೇ ವಹಿಸಲಾಗಿದೆ. ಇದು ಭಾರತದ ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸುವ ಮೊದಲ ಹೆಜ್ಜೆಯಾಗಿದೆ ಎಂದು ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ.