ಈ ಹಿಂದೆ ಬೈಜೂಸ್ ನ ಕೈಯಲ್ಲಿ ಇದ್ದ ಹಕ್ಕನ್ನು ಇದೀಗ (Byju’s) ಡ್ರೀಮ್-11 ಜೆರ್ಸಿ ತನ್ನಪಾಲಾಗಿಸಿಕೊಂಡಿದೆ. ಇನ್ಮುಂದೆ ಟೀಂ ಇಂಡಿಯಾ ಡ್ರೀಮ್ 11 ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದೇ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ಮೂಲಕ ಭಾರತ ಡ್ರೀಮ್-11 ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ.
ಬೈಜೂಸ್ ಪ್ರಾಯೋಜಕತ್ವದಲ್ಲಿ ಬಿಸಿಸಿಐ ದ್ವಿಪಕ್ಷೀಯ ಸರಣಿಯಲ್ಲಿ ಪ್ರತಿ ಪಂದ್ಯಕ್ಕೆ ಸುಮಾರು 5.50 ಕೋಟಿ ರೂ. ಜೆರ್ಸಿಯಲ್ಲಿ ಲೋಗೋವನ್ನ ಇರಿಸಿದ್ದರೆ, ಐಸಿಸಿ ಟೂರ್ನಿ ಪಂದ್ಯಗಳಲ್ಲಿ ಈ ಮೊತ್ತವು 1.70 ಕೋಟಿ ರೂ.ಗೆ ಇಳಿದಿತ್ತು. ಆದ್ರೆ ಡ್ರಿಮ್-11 ಒಪ್ಪಂದಕ್ಕೆ ಹೋಲಿಸಿದರೆ, ಬೈಜೂಸ್ಗಿಂತಲೂ ಕಡಿಮೆ ಮೊತ್ತ ಬೀಳುತ್ತದೆ. ಡೀಮ್-11 358 ಕೋಟಿ ರೂ.ಗಳಿಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದ ಹಕ್ಕನ್ನು ಖರೀದಿಸಿದೆ.
ಈ ಜಾಹೀರಾತು ಒಪ್ಪಂದವು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯೊಂದಿಗೆ ಆರಂಭವಾಗಲಿದ್ದು, ಮುಂಬರುವ 2025ರವರೆಗೆ ಮುಂದುವರೆಯಲಿದೆ.
ಇನ್ನು ಈ ಒಪ್ಪಂದದ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ನಾನು ಡ್ರೀಮ್ 11 ಅನ್ನು ಅಭಿನಂದಿಸುತ್ತೇನೆ. ಬಿಸಿಸಿಐಯ ಅಧಿಕೃತ ಪ್ರಾಯೋಜಕತ್ವದಿಂದ ಡ್ರೀಮ್11 ಈಗ ಪ್ರಮುಖ ಪ್ರಾಯೋಜಕರಾಗಿದ್ದಾರೆ. ಇದು ಭಾರತೀಯ ಕ್ರಿಕೆಟ್ ನೀಡುವ ನಂಬಿಕೆ, ಮೌಲ್ಯ, ಸಾಮರ್ಥ್ಯ ಮತ್ತು ಬೆಳವಣಿಗೆಗೆ ನೇರ ಸಾಕ್ಷಿಯಾಗಿದೆ. ಈ ವರ್ಷದ ಕೊನೆಯಲ್ಲಿ ಐಸಿಸಿ ವಿಶ್ವಕಪ್ ಅನ್ನು ಆಯೋಜಿಸಲು ನಾವು ತಯಾರಿ ನಡೆಸುತ್ತಿರುವಾಗ, ಅಭಿಮಾನಿಗಳ ಅನುಭವವನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಈ ಪಾಲುದಾರಿಕೆಯು ಅಭಿಮಾನಿಗಳ ಅನುಭವವನ್ನು ಹೆಚ್ಚಿಸಲು ನಮಗೆ ಸಹಾಯ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಡ್ರೀಮ್ ಸ್ಪೋರ್ಟ್ಸ್ನ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀ ಹರ್ಷ್ ಜೈನ್, ಬಿಸಿಸಿಐ ಮತ್ತು ಟೀಮ್ ಇಂಡಿಯಾದ ದೀರ್ಘಕಾಲದ ಪಾಲುದಾರರಾಗಿ, ನಮ್ಮ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಡ್ರೀಮ್11 ಮತ್ತೊಂದು ಹೆಜ್ಜೆಯನ್ನಿಟ್ಟಿದೆ. Dream11 ಮೂಲಕ ನಾವು ಶತಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ. ಹಾಗೆಯೇ ರಾಷ್ಟ್ರೀಯ ತಂಡಕ್ಕೆ ಪ್ರಮುಖ ಪ್ರಾಯೋಜಕರಾಗಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಮೊದಲಿಗೆ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯ ಜುಲೈ 12 ರಿಂದ 16 ರವರೆಗೆ ನಡೆದರೆ, 2ನೇ ಪಂದ್ಯ ಜುಲೈ 20 ರಿಂದ 24ರವರೆಗೆ ನಡೆಯಲಿದೆ.
ಇದಾದ ಬಳಿಕ ಜುಲೈ 27, 29 ರಂದು ಮೊದಲ ಮತ್ತು 2ನೇ ಏಕದಿನ ಪಂದ್ಯ ನಡೆಯಲಿದೆ. ಹಾಗೆಯೇ ಆಗಸ್ಟ್ 1 ರಂದು ಮೂರನೇ ಏಕದಿನ ಪಂದ್ಯ ಜರುಗಲಿದೆ.ಆಗಸ್ಟ್ 3 ರಿಂದ ಟಿ20 ಸರಣಿ ಶುರುವಾಗಲಿದ್ದು, ಈ ಸರಣಿಯ ಪಂದ್ಯಗಳು ಆಗಸ್ಟ್ 3, 6, 8, 12 ಮತ್ತು ಆಗಸ್ಟ್ 13 ರಂದು ಕ್ರಮವಾಗಿ ಪಂದ್ಯಗಳು ನಡೆಯಲಿವೆ.