ಮಳೆಗಾಲ ಬಂತೆಂದರೆ ಸೊಳ್ಳೆ ಕಾಟ ಶುರುವಾಗುತ್ತದೆ. ಈ ಸೊಳ್ಳೆಗಳು ಮಾರಕ ರೋಗಗಳನ್ನು ತರುವುದಲ್ಲದೆ ಚರ್ಮದ ಆರೋಗ್ಯಕ್ಕೂ ಹಾನಿಕರ. ಸೊಳ್ಳೆ ಕಡಿತದಿಂದ ನಿಮಗೂ ವಿಪರೀತ ತುರಿಕೆಯಾಗ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಬಹುದು.
ಮಳೆಗಾಲದ ಆರಂಭದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುವುದು ಹೆಚ್ಚು. ಈ ಸಮಯದಲ್ಲಿ ಸೊಳ್ಳೆಗಳು ಕೂಡ ಹೆಚ್ಚಿರುತ್ತವೆ. ಅಲ್ಲಲ್ಲಿ ನೀರು ನಿಂತಿರುವ ಕಾರಣ, ಸೊಳ್ಳೆಗಳು ಸುಲಭವಾಗಿ ಹುಟ್ಟಿಕೊಳ್ಳುತ್ತವೆ. ಈ ಸೊಳ್ಳೆಗಳು ರಾತ್ರಿ ಪೂರ್ತಿ ಸರಿಯಾಗಿ ನಿದ್ರೆ ಮಾಡೋಕೆ ಬಿಡೋದಿಲ್ಲ. ಇನ್ನು ಕೆಲವುಕಡೆ ಹಗಲಿನಲ್ಲೂ ಸೊಳ್ಳೆ ಕಾಣಿಸಿಕೊಳ್ಳುತ್ತದೆ.
ಪಾರ್ಕ್ ಗಳಂತ ಪ್ರದೇಶದಲ್ಲಿ ಸಂಜೆ ಸಮಯದಲ್ಲಿ ಸೊಳ್ಳೆಗಳ ಅಬ್ಬರ ಹೆಚ್ಚು. ಈ ಸೊಳ್ಳೆ ಕಡಿತದಿಂದ ಉರಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಲವರ ಚರ್ಮ ಸೂಕ್ಷ್ಮವಾಗಿರುವ ಕಾರಣ ಸೊಳ್ಳೆ ಕಡಿತದಿಂದ ಕೈ, ಮೈಗಳ ಮೇಲೆ ಕೆಂಪು ಗಾಯಗಳು ಆಗುವುದನ್ನು ನಾವು ಕಾಣಬಹುದು. ಅವು ವಿಪರೀತ ಹಿಂಸೆ ನೀಡುತ್ತವೆ. ನಿಮಗೂ ಸೊಳ್ಳೆಯಿಂದ ಕೆಂಪು ದುದ್ದು, ತುರಿಕೆ, ಉರಿಯಾಗ್ತಿದ್ದರೆ ಈ ಕೆಳಗಿನ ಮನೆ ಮದ್ದನ್ನು ಬಳಸಬಹುದು.
ಐಸ್ ಕ್ಯೂಬ್ : ನಿಮ್ಮ ದೇಹದ ಮೇಲೆ ಸೊಳ್ಳೆ ಕಾರಣಕ್ಕೆ ಊತವಾಗಿದ್ದರೆ ನೀವು ಐಸ್ ಕ್ಯೂಬ್ ಬಳಸಬಹುದು. ನೀವು ಐಸ್ ಕ್ಯೂಬನ್ನು ಊತದ ಮೇಲೆ ನೇರವಾಗಿ ಇಡಬೇಡಿ. ಒಂದು ತೆಳುವಾದ ಬಟ್ಟೆಯಲ್ಲಿ ಐಸ್ ಸುತ್ತಿ ನಂತ್ರ ಅದನ್ನು ಊತವಾಗಿರುವ ಜಾಗದಲ್ಲಿ ಇಟ್ಟರೆ ಊತ ಕಡಿಮೆಯಾಗುತ್ತದೆ.
ಅಲೋವೇರಾ : ಅಲೋವೇರಾ ಅನೇಕ ಆರೋಗ್ಯ ಗುಣವನ್ನು ಹೊಂದಿದೆ. ಅದು ತುರಿಕೆ, ಉರಿ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಸೊಳ್ಳೆ ಕಡಿತದ ಸಮಯದಲ್ಲಿ ನೀವು ಆ ಜಾಗಕ್ಕೆ ಅಲೋವೇರಾ ಜೆಲ್ ನ್ನು ಊತದ ಮೇಲೆ ಹಚ್ಚಿ 10 – 15 ನಿಮಿಷ ಬಿಡಬೇಕು.
ಜೇನುತುಪ್ಪ : ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ತುರಿಕೆ ಕಡಿಮೆ ಮಾಡುತ್ತದೆ. ಸೊಳ್ಳೆ ಕಡಿತ ಜಾಗಕ್ಕೆ ನೀವು ಸ್ವಲ್ಪ ಪ್ರಮಾಣದ ಜೇನುತುಪ್ಪವನ್ನು ಹಚ್ಚಬೇಕು. 10 – 15 ನಿಮಿಷ ಅದನ್ನು ಹಾಗೆ ಬಿಟ್ಟು ನಂತ್ರ ತೊಳೆದುಕೊಳ್ಳಬೇಕು.
ಆಪಲ್ ವಿನೇಗರ್ : ಒಂದು ಹತ್ತಿಯಲ್ಲಿ ಆಪಲ್ ಸೈಡರ್ ವಿನೆಗರನ್ನು ಅದ್ದಿ ಅದನ್ನುಸೊಳ್ಳೆ ಕಡಿತದ ಜಾಗಕ್ಕೆ ತಾಗಿಸಬೇಕು. ವಿನೆಗರ್ನಲ್ಲಿರುವ ಆಮ್ಲೀಯತೆಯು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಓಟ್ ಮೀಲ್ : ಉಪಾಹಾರಕ್ಕಾಗಿ ಹೆಚ್ಚಾಗಿ ಬಳಕೆ ಮಾಡಲಾಗುವ ಓಟ್ ಮೀಲ್ ಅನ್ನು ನೀವು ತುರಿಕೆಯನ್ನು ಕಡಿಮೆ ಮಾಡಲು ಬಳಸಬಹುದು. ಒಂದು ಪಾತ್ರೆಗೆ ಸಮ ಪ್ರಮಾಣದಲ್ಲಿ ಓಟ್ ಮೀಲ್ ಮತ್ತು ನೀರನ್ನು ಬೆರೆಸಿ ಓಟ್ ಮೀಲ್ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತ್ರ ಸ್ವಚ್ಛಗೊಳಿಸಿದ್ರೆ ಸೊಳ್ಳೆಯಿಂದಾಗುವ ತುರಿಕೆ, ಊತ ಕಡಿಮೆಯಾಗುತ್ತದೆ.
ಈ ರೀತಿ ಕೆಲವು ಮನೆಮದ್ದುಗಳಿಂದ ಸೊಳ್ಳೆ ಕಡಿತದಿಂದ ಆಗುವ ಊತವನ್ನು ತಪ್ಪಿಸಬಹುದು.