ಶಕ್ತಿಯೋಜನೆಗೆ ಹೊಸ ಪೋರ್ಟಲ್
ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆಂದೇ ಹೊಸದೊಂದು ಪೋರ್ಟಲ್ ಕಾರ್ಯಾರಂಭ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಹೇಳಿದ್ದಾರೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸ್ಮಾರ್ಟ್ ಕಾರ್ಡ್ಗಳನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಯಾವುದೇ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡುವ ಮೂಲಕ ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಸದ್ಯಕ್ಕೆ, ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿಯನ್ನು ತೋರಿಸಿ ಮಹಿಳೆಯರು ಮೂರು ತಿಂಗಳವರೆಗೆ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಕರ್ನಾಟಕದಾದ್ಯಂತ ಜೂನ್ 28ರಂದು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯ ಹಲವೆಡೆ ದಾಳಿ ಮಾಡಿದ್ದು, ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರು, ರಾಮನಗರ, ಬಾಗಲಕೋಟೆ, ಬೆಳಗಾವಿ, ತುಮಕೂರು, ಕಲಬುರಗಿ, ಯಾದಗಿರಿ, ಕೋಲಾರ ಸೇರಿದಂತೆ ಇನ್ನು ಇತರೆ ಜಿಲ್ಲೆಗಳಲ್ಲೂ ಲೋಕಾಯುಕ್ತ ದಾಳಿಯಾಗಿದೆ.
ಬೆಂಗಳೂರಿನ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಸೇರಿದಂತೆ 10 ಕಡೆ ಲೋಕಾಯುಕ್ತ ದಾಳಿ ಮಾಡಿದ್ದು, ಅಜಿತ್ ಮನೆಯಲ್ಲಿ ಲಕ್ಷಾಂತರ ರೂ. ನಗದು ಪತ್ತೆಯಾಗಿದೆ. ಇನ್ನು ತುಮಕೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಅವರ ನಿವಾಸ ಹಾಗೂ ಫಾರಂ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಶಂಕರಪುರದಲ್ಲಿರುವ ನಿವಾಸ ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆಯಲ್ಲಿ ಮಾಡಿದ್ದಾರೆ. ಹಾಗೆಯೇ ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಸಿಂಧನೂರು ಪಟ್ಟಣದ ಕಚೇರಿ ಮತ್ತು ಮನೆ ಹಾಗೂ ಕಲಬುರಗಿಯ ನಾಗನಹಳ್ಳಿ-ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಮನೆ ಮೇಲೆ ದಾಳಿ ಮಾಡಲಾಗಿದೆ. ಹಾಗೆಯೇ ಬಾಗಲಕೋಟೆ ಕೃಷಿ ಜೆಡಿ ಚೇತನಾ ಪಾಟಿಲ್ ಮನೆಯಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರು ಮನೆಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೋಲಾರದ KRDL ಎಇಇ ಕೋದಂಡರಾಮಯ್ಯ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್: ಹೆಚ್ಡಿಕೆ ಆರೋಪ
ಕಾಂಗ್ರೆಸ್ ಸರಕಾರವು ಕಾಸಿಗಾಗಿ ಪೋಸ್ಟಿಂಗ್ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಹುದ್ದೆಗೆ ನಾಲ್ವರಿಗೆ ಶಿಫಾರಸು ಪತ್ರಗಳನ್ನು ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿ ಸರಕಾರಕ್ಕೆ ಚಾಟಿ ಬೀಸಿದ್ದಾರೆ. ಪಂಚಗ್ಯಾರಂಟಿಗಳ ರಾಜ್ಯ ಕಾಂಗ್ರೆಸ್ ಸರಕಾರ, ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ. ಅದು; ʼಕಾಸಿಗಾಗಿ ಪೋಸ್ಟಿಂಗ್!!ʼ ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ ಎಂದಿರುವ ಅವರು ಕಾಸಿಗಾಗಿ ಪೋಸ್ಟಿಂಗ್ ಎಂದು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.
ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವರ್ಗಿ ದಂಧೆಗೆ ʼಹುಂಡಿʼ ಇದೆ ಎನ್ನುವುದು ಇಲ್ಲಿ ದಾಖಲೆ ಸಮೇತ ಬಟಾಬಯಲಾಗಿದೆ. ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ!! ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? CMO ಅಂದರೆ CM of Karnataka ವೋ ಅಥವಾ Corruption of Karnataka ವೋ?? ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಮೊದಲ ದಿನದಿಂದಲೇ ʼಕಾಸಿಗಾಗಿ ಪೋಸ್ಟಿಂಗ್ʼ ದಂಧೆ ಶುರುವಾಗಿದೆ. ʼಸರಕಾರದ ಕೆಲಸ ದೇವರ ಕೆಲಸʼ ಎನ್ನುವುದರ ಬದಲು ʼಬಂದಿದ್ದನ್ನು ಬಿಡದೇ ಬಾಚಿಕೋ..ʼ ಎಂಬುದು ಈ ಸರಕಾರದ ಧ್ಯೇಯನೀತಿ ಆಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ, ಬಿಟ್ಟಿಭಾಗ್ಯದ ಬೆಲ್ಲದ ಆಮಿಷವೊಡ್ಡಿ ʼಲೂಟಿಪರ್ವʼಕ್ಕೆ ʼಹುಂಡಿʼ ಇಡಲಾಗಿದೆ ಎಂದು ಹೆಚ್ಡಿಕೆ ದೂರಿದ್ದಾರೆ.
ಸರ್ಕಾರ ನೀಡುವ ಹಣಕ್ಕೆ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ: ಬಸವರಾಜ ಬೊಮ್ಮಾಯಿ
![Give 15 kg of rice to everyone: Basavaraj Bommai](https://kannada.verito.today/wp-content/uploads/2023/06/bommai-1_11zon-300x188.jpg)
ಕಾಂಗ್ರೆಸ್ ನವರು ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನಿಡಿದ್ದರು. ಈಗ ಅಕ್ಕಿಯ ಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ ಐವತ್ತರಿಂದ ಆರವತ್ತು ರೂಪಾಯಿ ಬೆಲೆ ಇದೆ. ಇವರು ಮೂವತ್ತು ರೂಪಾಯಿ ಕೊಟ್ಟರೆ ಜನರಿಗೆ ಎರಡುವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಐದು ಕೆಜಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಮಾತಿಗೆ ತಪ್ಪುತ್ತಿದ್ದಾರೆ. ಎಷ್ಟಾದರೂ ಆಗಲಿ ನಾವು ಅಕ್ಕಿಯನ್ನೇ ಕೊಡುತ್ತೇವೆ ಅಂತ ಹೇಳಿದ್ದರು. ಈಗ ಹಣ ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ. ಇವರು ಮತ್ತೆ ಮಾತಿಗೆ ತಪ್ಪಿದ್ದಾರೆ ಎಂದು ಆರೊಪಿಸಿದರು.