ಕಾಂಗ್ರೆಸ್ ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಜೂನ್ 27ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮೀ ವಿಳಂಬವಾಗುತ್ತಿದೆ ಎಂಬ ಮಾತು ಈಗಾಗಲೇ ರಾಜ್ಯದಲ್ಲಿ ಕೇಳಿಬಂದಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದಕ್ಕೆ ಪ್ರತಿಕ್ರಿಯಿಸಿ ಗೃಹಲಕ್ಷ್ಮೀ ಯೋಜನೆ ನೋಂದಣಿಗಾಗಿ ಆಪ್ ಒಂದನ್ನು ಸಿದ್ದಪಡಿಸಲಾಗುತ್ತಿದೆ ಆ ನಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದರು. ಆದರಂತೆಯೇ ಈಗ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಆ್ಯಪ್ ತಯಾರಾಗಿದ್ದು, ಜೂನ್ 27ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ಶನಿವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಯೋಜನೆ ಜಾರಿ ತಡವಾಗುತ್ತಿಲ್ಲ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಆ್ಯಪ್ ತಯಾರಾಗಿದೆ. ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ. ಜೂ.27ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಾವತಿಸಬಾರದು. ಆಗಸ್ಟ್ 16 ಅಥವಾ 17ರಂದು ಮನೆ ಯಜಮಾನಿ ಖಾತೆಗೆ ಹಣ ತಲುಪುತ್ತದೆ ಎಂದಿದ್ದಾರೆ.
ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ಮಾಡಲಾಗಿದೆ. ಜೂನ್ 27 ರಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಆ್ಯಪ್ ತೋರಿಸಲಾಗುವುದು ನಂತರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಅರ್ಜಿಸಲ್ಲಿಸಲು ಕೊನೆ ದಿನಾಂಕವಿಲ್ಲ:
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೇ ಅರ್ಜಿ ಸಲ್ಲಿಕೆಗೆ ಯಾವ ಶುಲ್ಕವೂ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಲಾಗಿದೆ. ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಸಿಕ್ಕರೆ ಆಗ ನೀವು ಫಲಾನುಭವಿ ಪಟ್ಟಿಗೆ ಸೇರ್ಪಡೆಗೊಳ್ಳುವಿರಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.