ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಅಧ್ಯಕ್ಷೀಯ ಗೌರವ ಸಿಕ್ಕಿದೆ. ಅಲ್ಲದೆ ಭಾರತದ ಅದೇ ಪ್ರಧಾನಿ ಅಮೆರಿಕದ ಕಾಂಗ್ರೆಸ್ ನಲ್ಲಿ ಎರಡನೇ ಬಾರಿ ಭಾಷಣ ಮಾಡಿರುವುದು ಇದೇ ಮೊದಲು!
ಅಧ್ಯಕ್ಷರ ನಿವಾಸದಲ್ಲಿ ಭರ್ಜರಿ ಭೋಜನ, ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗಗಳು ಉಭಯ ರಾಷ್ಟ್ರಗಳಿಗೂ ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲು ಸಹಕಾರಿಯಾಗಲಿವೆ. ಇನ್ನು ಭಾಷಣದಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸಿ, ಭಯೋತ್ಪಾದಕ ಚಟುವಟಿಕೆಯನ್ನು ನಿಲ್ಲಿಸುವಂತೆ ಹೇಳಿರುವುದು ಭಾರತದ ಪ್ರಮುಖ ರಾಜಕೀಯ ಗೆಲುವಾಗಿದೆ.
ಈ ಹಿಂದೆ ಕಾಶ್ಮೀರ ವಿವಾದಗಳು, ಪಿಒಕೆ ಮತ್ತು ಎಲ್ ಒಸಿ ಕುರಿತು ಭಾರತದ ಭೇಟಿ ನಂತರ ಅಥವಾ ಮುನ್ನ ಅಮೆರಿಕ ಕಮಾಂಡ್ ಮಾಡುವುದಿತ್ತು. ಆದರೆ ಈ ಬಾರಿ 2022ರಲ್ಲಿ ವಿದೇಶಾಂಗ ಸಚಿವ ಎಸ್. ಜಯಶಂಕರ್ ನಿಂದ ಹಿಡಿದು ಈಗಿನ ವರೆಗೂ ಭಾರತವೇ ಸಂದೇಶ ನೀಡಿದಂತಾಗಿದೆ.
ಈ ಬಾರಿಯ ದ್ವಿಪಕ್ಷೀಯ ಹೇಳಿಕೆಯಲ್ಲಿ ಎಲ್ಲಿಯೂ ಉಕ್ರೇನ್ ಮತ್ತು ರಷ್ಯಾ ಸಮಸ್ಯೆಗಳನ್ನು ಒಳಗೊಂಡಿಲ್ಲ. ಈ ಮೂಲಕ ಭಾರತ ಭೌಗೋಳಿಕ ರಾಜಕೀಯದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಹಾಗಿದ್ರೆ ಈ ಭೇಟಿ ಭಾರತಕ್ಕೆ ಏಕೆ ಅಷ್ಟು ಮಹತ್ವದ್ದಾಗಿದೆ?
ಭಾರತದ ರಕ್ಷಣಾ ಕ್ಷೇತ್ರ, ಆರೋಗ್ಯ, ತಂತ್ರಜ್ಞಾನ ಮತ್ತು ಪರಿಸದಿಂದ ಹಿಡಿದು ಭಾರತದ ಪ್ರತಿ ಹೆಜ್ಜೆಯು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಲಿದೆ.
ಯೂರೋಪ್, ಅಮೆರಿಕ ರಾಷ್ಟ್ರಗಳು ಚೀನಾ ಬದಲಾಗಿ ಭಾರತವೇ ಇಡೀ ರಾಜಕೀಯ ಆಟವನ್ನು ಮುನ್ನಡೆಸಬೇಕೆಂಬ ಆಕಾಂಕ್ಷೆ ಹೊತ್ತಿರುವುದು ಎದ್ದು ಕಾಣುತ್ತಿದೆ. ಈಗ ಈ ಎಲ್ಲದಕ್ಕೂ ಕಡಿವಾಣ ಹಾಕಿಲ್ಲವಾದರೆ ಮುಂದೆ ಚೀನಾ ಸೂಪರ್ ಪವರ್ ಆಗುವುದನ್ನು ಯಾರು ತಪ್ಪಿಸಲಾಗುವುದಿಲ್ಲ.
ಭಾರತದಲ್ಲಿ ತಂತ್ರಜ್ಞಾನದ ವಿಚಾರವಾಗಿ ಹೂಡಿಕೆ ಮಾಡಲು ಮತ್ತು ಹಂಚಿಕೊಳ್ಳಲು ಇತರೆ ರಾಷ್ಟ್ರಗಳಿಗಿಂತ ಹೆಚ್ಚು ವಿಶ್ವಾಸಾರ್ಹವಾಗಿದೆ. ಅಗತ್ಯವಿರುವ ಸಂಪನ್ಮೂಲಗಳು, ಬೃಹತ್ ಮೂಲ ಸೌಕರ್ಯ, ಸಂಪರ್ಕ ಮತ್ತು ತಂತ್ರಜ್ಞಾನ ಎರಡರಲ್ಲೂ ಭಾರತ ಎಂಎನ್ ಸಿ ಗಳಿಗೆ ನೆಚ್ಚಿನ ಕೇಂದ್ರವಾಗಿದೆ.
ಇವುಗಳ ನಡುವೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಮಗಳು ಮತ್ತು ನಿಬಂಧನೆಗಳಿಂದ ಟೆಸ್ಲಾದಂತಹ ದೈತ್ಯ ಸಂಸ್ಥೆಗಳಿಗೆ ಇನ್ನೂ ಪೂರ್ಣಸ್ವರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಲು ಸೀಮಿತಗೊಳಿಸಿವೆ.
ಭೋಜನದ ಸಮಯದಲ್ಲಿ ಅಂತಹ ಕಂಪನಿ ಮುಖ್ಯಸ್ಥರೊಂದಿಗಿನ ಸಭೆಗಳ ಮೂಲಕ ಅಮೆರಿಕ ಅಂತಹ ಹೂಡಿಕೆಗಳಿಗೆ ಉತ್ಸುಕವಾಗಿದೆ ಎಂಬುದು ಸಾಬೀತಾಗುತ್ತದೆ. ಭಾರತ ಅಂತಹ ಕಂಪನಿಗಳಿಗೆ ಯಾವ ರೀತಿ ಮಾರುಕಟ್ಟೆ ಪ್ರವೇಶಿಸಲು ಅನುಮತಿ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲಾ ರಾಜಕೀಯ ಬೆಳವಣಿಗೆಗಳು, ಚುನಾವಣಾ ವೇಳಾಪಟ್ಟಿಗಳನ್ನು ಬದಿಗಿಟ್ಟರು ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಅಮೆರಿಕ ಅಧ್ಯಕ್ಷರಿಗಿಂತ ಉತ್ತಮ ಅಂತಾರಾಷ್ಟ್ರೀಯ ನಾಯಕರಾಗಿ ತೊಡಗಿಸಿಕೊಂಡಿದ್ದಾರೆ.
ಸಭೆ, ಚಿತ್ರಗಳು ಹಾಗೂ ಅಮೆರಿಕ ಅಧ್ಯಕ್ಷರು ʼಎರಡು ಮಹಾನ್ ರಾಷ್ಟ್ರಗಳು, ಎರಡು ಮಹಾನ್ ಸ್ನೇಹಿತರು ಮತ್ತು ಎರಡು ಮಹಾನ್ ಶಕ್ತಿಗಳುʼ ಎಂದಿದೆ. ಈ ಮೂಲಕ ವಿಶ್ವದ ಬಿಗ್ ಬಾಸ್ ಅಮೆರಿಕಗೆ ಭಾರತದ ಪ್ರಧಾನಿ ಮೋದಿ ಭೇಟಿ ಎಷ್ಟು ಮಹತ್ವವಾದದ್ದು ಎಂಬುದನ್ನು ಸೂಚಿಸುತ್ತದೆ.
ಪ್ರಧಾನಿ ಮೋದಿ ಅವರು ಅಮೆರಿಕ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖ ಅಂಶಗಳಿವು, ಕಳೆದ ಕೆಲವು ವರ್ಷಗಳಲ್ಲಿ ಎಐ ಕೃತಕ ಬುದ್ದಿಮತ್ತೆಯಲ್ಲಿ ಅನೇಕ ಪ್ರಗತಿಗಳು ನಡೆದಿವೆ. ಇದು ಮಾತ್ರವಲ್ಲ ಇದೇ ಸಮಯದಲ್ಲಿ ಎಐ ಅಂದ್ರೆ ಅಮೆರಿಕ ಮತ್ತು ಇಂಡಿಯಾ ನಡುವೆಯೂ ಮಹತ್ವದ ಬದಲಾವಣೆ ಕಂಡುಬಂದಿದೆ.
ಪ್ರಧಾನಿ ಮೋದಿ ಅವರ ಈ ಭೇಟಿ ಮೂಲಕ ಎಫ್ ಡಿಐ, ಅಂದರೆ ಭಾರತದ ಆರ್ಥಿಕತೆಗೆ ಸ್ಪಷ್ಟವಾದ ಉತ್ತೇಜನ ಪಡೆಯುವ ನಿರೀಕ್ಷೆ ಇದೆ. ಸಾಲಗಳ ಮೂಲಕ ಚೀನಾದ ವಸಾಹತುಶಾಹಿ ವಿಧಾನವು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಕಳವಳಕಾರಿ ಅಂಶವಾಗಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವದ ಭೌಗೋಳಿಕ ರಾಜಕೀಯವನ್ನು ಮುನ್ನಡೆಸಬೇಕು ಎಂದು ನಿರೀಕ್ಷಿಸುತ್ತಿದ್ದು, 2023ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆ ದಾಟುವ ನಿರೀಕ್ಷೆ ಇರುವ ಭಾರತಕ್ಕೆ ಇದೊಂದು ಸುವರ್ಣಾವಕಾಶವಾಗಿದೆ.
ಆದರೆ ಭಾರತ ಈ ಅವಕಾಶವನ್ನು ರಾಜಕೀಯ ಮತ್ತು ಇತರೆ ಆಂತರಿಕ ಮತ್ತು ಬಾಹ್ಯ ಪ್ರಭಾವಗಳನ್ನು ಮೆಟ್ಟಿ ನಿಲ್ಲುವ ಬಗೆಯನ್ನು ನಾವು ಕಾದು ನೋಡಬೇಕಿದೆ.