ದನದ ಸಗಣಿಗಳನ್ನು ನಮ್ಮ ಪೂರ್ವಜ್ಜರ ಕಾಲದಿಂದಲೂ ಕೃಷಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಗಣಿಯಿಂದ ತಯಾರಿಸುವ ಜೀವಾಮೃತವು ಸಸ್ಯಗಳ ಪಾಲಿಗೆ ಜೀವ ನೀಡುವ ಅಮೃತದಂತೆಯೇ ಕಾರ್ಯನಿರ್ವಹಿಸುತ್ತವೆ. ಜೀವಾಮೃತ ಯಾವುದೇ ಕೃಷಿನೆಲಕ್ಕೆ ಫಲವತ್ತೆಯನ್ನು ನೀಡುವ ಜೈವಿಕ ಸಂಪತ್ತು. ರೈತರು ಸಾವಯವ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯಲು ಜೀವಾಮೃತ ನೆರವಾಗುತ್ತದೆ. ಜೀವಾಮೃತಕ್ಕಾಗಿ ಮರುಕಟ್ಟೆಗೆ ಹೋಗುವ ಅವಶ್ಯಕತೆ ಇಲ್ಲ. ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ಜೀವಾಮೃತ ತಯಾರಿಸುವುದು ಹೇಗೆ?
ಜೀವಾಮೃತವನ್ನು ತಯಾರಿಸಲು ನಾವು ಒಂದು ಒಳ್ಳೆಯ ನೆರಳಿನ ಜಾಗವನ್ನು ಹುಡುಕಬೇಕು ಅದು ಗಿಡದ ಕೆಳಗಡೆಯಾದರೆ ತುಂಬಾ ಒಳ್ಳೆಯದು. ಇದನ್ನು ತಯಾರಿಸಲು 200 ಲೀಟರ್ ಬ್ಯಾರೆಲ್ ಅವಶ್ಯಕತೆ ಇದೆ.
ಮೊದಲಿಗೆ 10 ಕೆಜಿ ದೇಸಿ ಹಸುವಿನ ಸಗಣಿಯನ್ನು ಒಂದು ಬಕೆಟ್ ನಲ್ಲಿ ಚೆನ್ನಾಗಿ ಕಲಿಸಬೇಕು ಯಾವುದೇ ಗಂಟುಗಳು ಇಲ್ಲದ ಹಾಗೆ ಅದನ್ನು ಕಲಿಸಬೇಕು. ಕಲಿಸಿದ ನಂತರ ಇದನ್ನು 200 ಲೀಟರ್ ಬ್ಯಾರೆಲ್ ಗೆ ಹಾಕಬೇಕು, ಆಮೇಲೆ ಇದಕ್ಕೆ 10ಲೀಟರ್ ಗಂಜಲವನ್ನು ಹಾಕಬೇಕು, ಇದಾದ ನಂತರ ಇದಕ್ಕೆ ಎರಡು ಕೆಜಿ ಬೆಲ್ಲ, ಎರಡು ಕೆಜಿ ದ್ವಿದಳ ಧಾನ್ಯದ ಹಿಟ್ಟು, ಒಂದು ಹಿಡಿ ಮಣ್ಣನ್ನು ಹಾಕಿ ಇದಕ್ಕೆ 200 ಲೀಟರ್ ನೀರನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಅದರ ಮೇಲೆ ಗೋಣಿ ಚೀಲ ಅಥವಾ ಹಳೆಯ ಬಟ್ಟೆಯನ್ನು ಮುಚ್ಚಿ ನೆರಳಿನಲ್ಲಿಡಬೇಕು. ನಂತರ ೩ ದಿನಗಳ ವರೆಗೆ ಬೆಳಗ್ಗೆ ಮತ್ತು ಸಾಯಂಕಾಲ ಈ ಮಿಶ್ರಣವನ್ನು ೨ ನಿಮಿಷ ಕೋಲಿನಿಂದ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗಿಸಿ ಪುನಃ ಮುಚ್ಚಿಡಬೇಕು. ನಾಲ್ಕನೇ ದಿನದಿಂದ ಈ ಜೀವಾಮೃತವನ್ನು ಉಪಯೋಗಿಸಬಹುದು.
ಜೀವಾಮೃತವನ್ನು ಉಪಯೋಗಿಸುವ ಪದ್ಧತಿ:
*ಜೀವಾಮೃತ ತಯಾರಾದ ನಂತರ ಅದನ್ನು ೭ ದಿನಗಳ ವರೆಗೆ ಉಪಯೋಗಿಸಬಹುದು; ಆದರೆ ಮೊದಲನೇ ೪ ದಿನಗಳಲ್ಲಿ, ಅಂದರೆ ಜೀವಾಮೃತದ ಘಟಕಗಳನ್ನು ಬೆರೆಸಿದ ನಾಲ್ಕನೇ ದಿನದಿಂದ ಏಳನೇ ದಿನದ ವರೆಗೆ ಉಪಯೋಗಿಸಿದರೆ ಹೆಚ್ಚು ಒಳ್ಳೆಯ ಪರಿಣಾಮ ಸಿಗುತ್ತದೆ. ಜೀವಾಮೃತವನ್ನು ಬಳಸುವಾಗ ಅದರಲ್ಲಿ ೧೦ ಪಟ್ಟು ನೀರು ಸೇರಿಸಿ ಬಳಸಬೇಕು. ಪ್ರತಿಸಲ ತಾಜಾ ಜೀವಾಮೃತವನ್ನು ತಯಾರಿಸಬೇಕು.
*ಕಸಕಡ್ಡಿಗಳಂತಹ ಕೊಳೆಯುವಂತಹ ಕಸದಿಂದ ಫಲವತ್ತಾದ ಮಣ್ಣನ್ನು (ಹ್ಯೂಮಸ್) ತಯಾರಿಸಲು ಪ್ರತಿ ವಾರಕ್ಕೊಮ್ಮೆ ಕಸದ ಮೇಲೆ ನೀರು ಸಿಂಪಡಿಸಿದಂತೆ ಜೀವಾಮೃತವನ್ನು ಸಿಂಪಡಿಸಬೇಕು.
*೧೦ ಪಟ್ಟು ನೀರಿನಲ್ಲಿ ತೆಳ್ಳಗೆ ಮಾಡಿದ ಜೀವಾಮೃತವನ್ನು ಚಿಕ್ಕ ಗಿಡಗಳಿಗೆ ಒಂದು ಕಪ್ ಮತ್ತು ದೊಡ್ಡ ಗಿಡಗಳಿಗೆ ೧ ತಂಬಿಗೆ ಈ ಪ್ರಮಾಣದಲ್ಲಿ ಎಲ್ಲ ಬದಿಗಳಿಂದ ಬೇರುಗಳಿಗೆ ನೀರು ಹಾಕುವಂತೆ ಹಾಕಬೇಕು.
*ಗಿಡಗಳ ಮೇಲೆ ಮುಗ್ಗಲು (ಬುರುಸು) ಹಿಡಿಯುವುದನ್ನು ತಡೆಯಲು ಜೀವಾಮೃತವನ್ನು ೧೦ ಪಟ್ಟು ನೀರಿನಲ್ಲಿ ಸೇರಿಸಿ ಬಟ್ಟೆಯಿಂದ ಸೋಸಿ ‘ಸ್ಪ್ರೇ’ ಬಾಟಲಿಯಲ್ಲಿ ತುಂಬಿ ಗಿಡಗಳ ಮೇಲೆ ಸ್ಪ್ರೇ ಮಾಡಬೇಕು.
* ವಾರದಲ್ಲಿ ಒಂದು ಸಲ ಅಥವಾ ೧೫ ದಿನಗಳಿಗೊಮ್ಮೆ ಅಥವಾ ಅಷ್ಟೂ ಸಾಧ್ಯವಾಗದಿದ್ದರೆ ತಿಂಗಳಿಗೊಮ್ಮೆ ಎಲ್ಲ ಗಿಡಗಳಿಗೆ ಜೀವಾಮೃತವನ್ನು ಹಾಕಬೇಕು.
ಜೀವಾಮೃತವು ಮಹತ್ವ:
ನೈಸರ್ಗಿಕ ಕಸವನ್ನು ವಿಘಟಿಸುವ ಅಸಂಖ್ಯಾತ ಜೀವಾಣುಗಳು ಜೀವಾಮೃತದಲ್ಲಿರುತ್ತವೆ. ಜೀವಾಮೃತವನ್ನು ನೈಸರ್ಗಿಕ ಕಸದ ಮೇಲೆ ಸಿಂಪಡಿಸಿದರೆ ಈ ಜೀವಾಣುಗಳು ಕಸವನ್ನು ಶೀಘ್ರಗತಿಯಲ್ಲಿ ವಿಘಟಿಸುತ್ತವೆ. ಕಸದ ವಿಘಟನೆಯಿಂದ ಗಿಡಗಳಿಗೆ ಆವಶ್ಯಕವಿರುವ ಫಲವತ್ತಾದ ಮಣ್ಣು ತಯಾರಾಗುತ್ತದೆ. ಜೀವಾಮೃತದಲ್ಲಿನ ಜೀವಾಣುಗಳು ಗಿಡಗಳಿಗೆ ಆಹಾರದ್ರವ್ಯಗಳನ್ನು ಬಹಳಷ್ಟು ಪ್ರಮಾಣದಲ್ಲಿ ದೊರಕಿಸಿ ಕೊಡುತ್ತವೆ. ಇದರಿಂದ ಗಿಡಗಳು ಸಶಕ್ತವಾಗುತ್ತವೆ. ಗಿಡಗಳ ಎಲೆಗಳ ಆಕಾರವೂ ದೊಡ್ಡದಾಗುತ್ತದೆ. ಗಿಡಗಳು ಅವುಗಳಿಗೆ ಬೇಕಾಗುವ ಆಹಾರವನ್ನು ದ್ಯುತಿಸಂಶ್ಲೇಷಣೆಯ ಕ್ರಿಯೆಯಿಂದಮಾಡುತ್ತಿರುತ್ತವೆ. ಗಿಡಗಳು ಹಣ್ಣುಗಳಲ್ಲಿ ಹೊಸ ಬೀಜಗಳಿಗಾಗಿ ಆಹಾರವನ್ನು ಸಂಗ್ರಹಿಸಿಡುತ್ತವೆ. ದ್ಯುತಿಸಂಶ್ಲೇಷಣೆಯ ಕ್ರಿಯೆ ಮತ್ತು ಆಹಾರದ್ರವ್ಯಗಳ ಪೂರೈಕೆ ಎಷ್ಟು ಜಾಸ್ತಿಯಾಗುತ್ತದೆಯೋ, ಅಷ್ಟು ಫಲಧಾರಣೆ, ಅಂದರೆ ಆಹಾರವನ್ನು ಸಂಗ್ರಹಿಸುವ ಕ್ರಿಯೆಯು ಜಾಸ್ತಿಯಾಗುತ್ತದೆ. ಜೀವಾಮೃತದಿಂದ ಗಿಡಕ್ಕೆ ಆಹಾರದ್ರವ್ಯಗಳು ಹೆಚ್ಚು ಪ್ರಮಾಣದಲ್ಲಿ ಸಿಗುತ್ತಲೇ ಇರುತ್ತವೆ, ಹಾಗೆಯೇ ಎಲೆಗಳ ಆಕಾರವೂ ದೊಡ್ಡದಾಗುತ್ತದೆ. ಇದರಿಂದಾಗಿ ದ್ಯುತಿಸಂಶ್ಲೇಷಣೆಯ ಕ್ರಿಯೆಯೂ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ ಮತ್ತು ಹೆಚ್ಚು ಬೆಳೆ ಬರುತ್ತದೆ. ಇದರಿಂದ ಆದಾಯ ಹೆಚ್ಚಾಗುತ್ತದೆ. ಜೀವಾಮೃತದಲ್ಲಿ ಗಿಡಗಳ ರೋಗಗಳನ್ನು ತಡೆಯುವ ಗುಣವೂ ಇರುತ್ತದೆ.
ಜೀವಾಮೃತದ ಉಪಯೋಗ:
*ಜೀವಾಮೃತವನ್ನು ತಯಾರಿಸುವುದು ಅತ್ಯಂತ ಸುಲಭ ಮತ್ತು ಅಗ್ಗವಾಗಿದೆ. ಇದರಿಂದ ಗೊಬ್ಬರಗಳಿಗಾಗಿ ಮಾಡುವ ವೆಚ್ಚವು ತುಂಬಾ ಕಡಿಮೆಯಾಗುತ್ತದೆ.
*ಇದು ಸಂಪೂರ್ಣ ನೈಸರ್ಗಿಕವಾಗಿದ್ದು ಗಿಡಗಳಿಗೆ ಅಮೃತಸಮಾನವಾಗಿದೆ. ವಿಷಮುಕ್ತ ಆಹಾರದ ನಿರ್ಮಿತಿಗಾಗಿ ಜೀವಾಮೃತವು ಮಹತ್ವದ ಘಟಕವಾಗಿದೆ.
*ಜೀವಾಮೃತದಿಂದ ನೈಸರ್ಗಿಕ ಕಸವು ಬೇಗನೇ ವಿಘಟನೆಯಾಗಿ ಅದು ಫಲವತ್ತಾದ ಮಣ್ಣಿನಲ್ಲಿ (‘ಹ್ಯೂಮಸ್’ಗೆ) ರೂಪಾಂತರವಾಗುತ್ತದೆ.
*ಮಣ್ಣಿನಲ್ಲಿ ಟೊಳ್ಳು ನಿರ್ಮಾಣವಾಗುತ್ತದೆ. ಇದರಿಂದ ಮಣ್ಣಿನಲ್ಲಿ ಕೆಲಸ ಮಾಡುವುದು ಸುಲಭವಾಗುತ್ತದೆ.
*ಮಣ್ಣಿನ ನೀರು ಹಿಡಿದಿಡುವ ಮತ್ತು ಅದನ್ನು ಗಿಡಗಳಿಗೆ ದೊರಕಿಸಿಕೊಡುವ ಕ್ಷಮತೆಯು ಹೆಚ್ಚುತ್ತದೆ. ಆದುದರಿಂದ ಕಡಿಮೆ ನೀರಿನಲ್ಲಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ನೀರಿನ ಉಳಿತಾಯವಾಗುತ್ತದೆ.
*ಗಿಡಗಳಿಗೆ ಆವಶ್ಯಕವಿರುವ ಆಹಾರದ್ರವ್ಯಗಳು ಮತ್ತು ‘ಮಿತ್ರ ಜೀವಾಣುಗಳು’ (ಉಪಯುಕ್ತ ಜೀವಾಣುಗಳು) ಬಹಳಷ್ಟು ಪ್ರಮಾಣದಲ್ಲಿ ದೊರಕುತ್ತವೆ.
*ಗಿಡಗಳಲ್ಲಿ ರೋಗನಿರೋಧಕಶಕ್ತಿ ನಿರ್ಮಾಣವಾಗಿರುವುದರಿಂದ ಗಿಡಗಳಿಗೆ ರೋಗವಾಗುವ ಪ್ರಮಾಣವೂ ಕಡಿಮೆಯಾಗುತ್ತದೆ.
*ಜೀವಾಮೃತವನ್ನು ಗಿಡಗಳ ಮೇಲೆ ಸಿಂಪಡಿಸುವುದರಿಂದ ಗಿಡಗಳ ಮೇಲೆ ನಿರ್ಮಾಣವಾಗುವ ಮುಗ್ಗಲನ್ನು ತಡೆಯಲು ಸಹಾಯವಾಗುತ್ತದೆ.
*ಗಿಡಗಳು ಉಷ್ಣತೆ, ಚಳಿ ಅಥವಾ ಮಳೆ ಹೆಚ್ಚು ಕಡಿಮೆ ಆದಾಗ ಸಹಿಸಿಕೊಳ್ಳುತ್ತವೆ.