ಇಂದಿನ ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಸದಾ ಸಕ್ರಿಯರಾಗಿರಲು ಯೋಗವು ಬಹಳ ಸಹಾಯಕವಾಗಿದ್ದು, ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಯೋಗ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳುತ್ತಿದೆ. ವಿಶ್ವದೆಲ್ಲಡೆ ನಾನಾ ರೂಪಗಳಲ್ಲಿ ಹರಡಿಕೊಂಡಿರುವ ಯೋಗ ವಿದ್ಯೆಯ ಮೂಲ ಭಾರತ. ಮಹಾಯೋಗಗುರು ಎಂದು ಕರೆಯಲ್ಪಡುವ ಪತಂಜಲಿ ಮಹರ್ಷಿ ಇದರ ಪ್ರವರ್ತಕರು, ಋಷಿ ಮುನಿಗಳಿಂದ ಆರಂಭವಾಗಿರು ಯೋಗ ಇಂದು ನಾನಾ ಮಾರ್ಪಟುಗಳೊಂದಿಗೆ ಅನೇಕರ ಜೀವನದ ಅವಿಭಾಜ್ಯ ಅಂಗವಾಗಿದೆ.
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಪ್ರತಿವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಪ್ರತಿ ವರ್ಷ ಒಂದೊಂದು ಥೀಮ್ ನೊಂದಿಗೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. 2023 ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಸುಧೈವಕುಟುಂಬಕಂ ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ. ಈ ವರ್ಷ ಒಂಬತ್ತನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮೊದಲ ಬಾರಿಗೆ ಯೋಗಾಭ್ಯಾಸವನ್ನು ಮುನ್ನಡೆಸಲಿದ್ದಾರೆ. ಈ ಬಾರಿ ಜಗತ್ತಿನಾದ್ಯಂತ 25 ಕೋಟಿ ಜನರು ಯೋಗಾಭ್ಯಾಸದಲ್ಲಿ ಭಾಗಿಯಾಗುತ್ತಾರೆ. 180 ದೇಶಗಳ ಗಣ್ಯರು ಯೋಗಾಭ್ಯಾಸ ಮಾಡಲಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನದ ಇತಿಹಾಸ :
2014ರ ಸೆಪ್ಟೆಂಬರ್ 27ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ ಅಂತರರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2014 ಡಿಸೆಂಬರ್ 11ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಅಂಗೀಕಾರ ಮಾಡಿ, ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ಅಲ್ಲಿಂದ ಪ್ರತಿ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಅಂತರಾಷ್ಟ್ರೀಯ ಯೋಗ ದಿನದ ಮಹತ್ವ:
ಅಂತರರಾಷ್ಟ್ರೀಯ ಯೋಗ ದಿನವು ಯೋಗಾಭ್ಯಾಸದ ಹಲವಾರು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತ ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಅಂತರಾಷ್ಟ್ರೀಯ ಯೋಗ ದಿನವು ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆಯಾದರೂ, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಯೋಗವನ್ನು ಮಾಡುತ್ತಾರೆ.
ಯೋಗ ಏಕೆ ಮಾಡಬೇಕು?
ಇಂದಿನ ಒತ್ತಡ ಜೀವನ ಶೈಲಿಯಲ್ಲಿ ಜನರಿಗೆ ಯೋಗ ಮಾಡಲು ಸಮಯವಿಲ್ಲ. ಆದರೆ ದಿನದಲ್ಲಿ ಐದರಿಂದ ಹತ್ತು ನಿಮಿಷವಾದರೂ ಯೋಗ ಮಾಡಿದರೆ ಆದರಿಂದ ನಾವು ಆನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡಯಬಹುದು. ಯೋಗ ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಯೋಗದ ಮೂಲಕ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ರಕ್ತಪರಿಚಲನೆ ಉತ್ತಮಗೊಂಡು ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಅಧಿಕ ರಕ್ತದೊತ್ತಡ, ದೇಹದ ತೂಕ ನಿಯಂತ್ರಣ, ದೈಹಿಕ ಸಾಮರ್ಥ್ಯ ಹೆಚ್ಚಳ ಮುಂತಾದವುಗಳಿಗೆ ಸಹಾಯ ಮಾಡುವುದಲ್ಲದೇ ಪದೇ ಪದೇ ಕಾಡುವ ಸ್ನಾಯುಸೆಳೆತ ಸಮಸ್ಯೆ ನಿವಾರಿಸಿಕೊಳ್ಳಬಹುದು. ಯೋಗದ ಮೂಲಕ ಏಕಾಗ್ರತೆ ಹಲವು ಮಾನಸಿಕ ಸಮಸ್ಯೆ ನಿವಾರಣೆಗೆಯಾಗುತ್ತದೆ. ಆದರಿಂದ ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಹೇಳಲಾಗುತ್ತದೆ.