ಮಳೆಗಾಲ ಆರಂಭವಾದರೆ ಸಾಕು ಎಲ್ಲಾ ಕಡೆ ಕೆಮ್ಮು, ಶೀತ, ಜ್ವರ ಶುರುವಾಗಿಬಿಡುತ್ತೆ. ಸಣ್ಣ ಮಕ್ಕಳಿಂದ ಹಿಡಿದು ಮನೆ ಮಂದಿಯೆಲ್ಲಾ ಶೀತ ನೆಗಡಿಯಿಂದ ಹೈರಾಣಾಗಿ ಬಿಡುತ್ತಾರೆ. ಮಳೆಗೆ ಒದ್ದೆಯಾಗಿ ಬರುವ ರೋಗಗಳು ಒಂದೆಡೆಯಾದರೆ ಮಳೆಗಾಲದ ಸೊಳ್ಳೆಗಳ ಕಾಟದಿಂದ ಕಾಡುವ ಗಂಭೀರ ಆರೋಗ್ಯ ಸಮಸ್ಯೆಗಳು ಇನ್ನೊಂದೆಡೆ.
ಮಳೆಗಾಲದ ಸೊಳ್ಳೆಯಿಂದ ಬರುವ ಗಂಭೀರ ಆರೋಗ್ಯ ಸಮಸ್ಯೆಗಳು:
ಡೆಂಗ್ಯೂ:
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಅನಾರೋಗ್ಯವೆಂದರೆ ಡೆಂಗ್ಯೂ. ಇತ್ತೀಚೆಗೆ ಹಲವೆಡೆ ಈ ಡೆಂಗ್ಯೂ ಕೇಸ್ಗಳು ಹೆಚ್ಚು ಕಂಡುಬರುತ್ತಿದೆ. ಈಡಿಸ್ ಇಜಿಪ್ಟಿ ಎನ್ನುವ ಸೊಳ್ಳೆಯಿಂದ ಈ ಡೆಂಗ್ಯೂ ಜ್ವರ ಹರಡುತ್ತದೆ . ತೀವ್ರವಾದ ಜ್ವರ, ತಲೆನೋವು, ಸ್ನಾಯು, ಕೀಲುಗಳಲ್ಲಿ ನೋವು ಇದರ ಲಕ್ಷಣ. ಇಷ್ಟೇ ಅಲ್ಲ ಕಣ್ಣುಗಳ ಹಿಂದೆ ನೋವು, ಆಯಾಸ, ವಾಕರಿಕೆ, ವಾಂತಿಯೂ ಕಂಡುಬರುತ್ತದೆ. ಜ್ವರ ಪ್ರಾರಂಭವಾದ ಎರಡರಿಂದ ಐದು ದಿನಗಳ ನಂತರ ಮೈ ಮೇಲೆ ಕೆಂಪಾದ ದದ್ದು ಕಾಣಿಸಿಕೊಳ್ಳುತ್ತದೆ. ಮೂಗಿನಲ್ಲಿ, ಒಸಡುಗಳಲ್ಲಿ ರಕ್ತಸ್ರಾವವೂ ಆಗಬಹುದು, ಅಲ್ಲದೇ ದೇಹದಲ್ಲಿ ಪ್ಲೇಟ್ಲೆಟ್ಗಳ ಸಂಖ್ಯೆಯಲ್ಲೂ ಇಳಿಕೆಯಾಗಿಬಿಡುತ್ತದೆ. ಹೀಗಾದಾಗ ಡೆಂಗ್ಯೂ ಅಪಾಯ ಹೆಚ್ಚು. ಡೆಂಗ್ಯೂ ಜ್ವರ ಬಂದರೆ ಸಾಮಾನ್ಯವಾಗಿ ಹತ್ತು ದಿನಗಳವರೆಗೂ ಇರುತ್ತದೆ.
ಚಿಕುನ್ ಗುನ್ಯಾ:
ಚಿಕುನ್ಗುನ್ಯಾ ಕೂಡಾ ಈಜಿಪ್ಟಿ ಎನ್ನುವ ಸೊಳ್ಳೆಯಿಂದ ಹರಡುವ ವೈರಲ್ ಖಾಯಿಲೆ. ಇದು ಚಿಕುನ್ ಗುನ್ಯಾ ವೈರಸ್ನಿಂದ ಉಂಟಾಗುತ್ತೆ. ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಗಳು ರಾತ್ರಿ ಮಾತ್ರವಲ್ಲ ಹಗಲಿನಲ್ಲೂ ಕಚ್ಚುತ್ತವೆ. ಸೋಂಕಿತ ಸೊಳ್ಳೆ ಕಚ್ಚಿದ ಏಳು ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದರ ಮುಖ್ಯ ಲಕ್ಷಣವೇ ಜ್ವರ ಮತ್ತು ದೇಹದ ಕೀಲುಗಳಲ್ಲಿ ನೋವು ತಲೆನೋವು, ಸ್ನಾಯುಗಳಲ್ಲಿ ನೋವು, ಗಂಟುಗಳಲ್ಲಿ ಊತ ಕಾಣಿಸಿಕೊಳ್ಳಬಹುದು.
ಮಲೇರಿಯಾ:
ಅನಾಫಿಲೀಸ್ ಎನ್ನುವ ಹೆಣ್ಣು ಸೊಳ್ಳೆಯ ಕಡಿತದ ಮೂಲಕ ಹರಡುವ ಮಲೇರಿಯಾವನ್ನು ಗುಣಪಡಿಸಬಹುದಾದರೂ, ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು. ಸೊಳ್ಳೆ ಕಚ್ಚಿದ ಹತ್ತು ಹದಿನೈದು ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತುಂಬಾ ಜ್ವರ, ಮೈಕೈನೋವು, ತೀವ್ರವಾದ ಶೀತ, ಚಳಿ ಜ್ವರ, ತಲೆನೋವು, ಕೆಮ್ಮು, ಉಸಿರಾಟದ ಸಮಸ್ಯೆ, ವಾಕರಿಕೆ, ವಾಂತಿ, ಅತಿಸಾರವೂ ಕಾಣಿಸಿಕೊಳ್ಳಬಹುದು.
ಸೊಳ್ಳೆಯಿಂದ ಬರುವ ರೋಗಗಳನ್ನು ತಡೆಗಟ್ಟುವ ಕ್ರಮಗಳು:
*ಮನೆಯೊಳಗೆ ಮತ್ತು ಮನೆಯ ಸುತ್ತಲು ಎಲ್ಲಿಯೂ ನೀರು ನಿಲ್ಲದಂತೆ ಸ್ವಚ್ಛವಾಗಿಡಿ.
*ಮನೆಯಲ್ಲಿ ಸೊಳ್ಳೆ ನಿವಾರಕಗಳನ್ನು ಬಳಸಿ, ಕಿಟಕಿ, ಬಾಗಿಲುಗಳಿಗೆ ಸಾಧ್ಯವಾದರೆ ಸೊಳ್ಳೆ ಪರದೆಯನ್ನು ಹಾಕಿ.
*ಮನೆಯಲ್ಲಿ ನೀರು ಸಂಗ್ರಹಿಸಿಡುವಂತಹ ವಸ್ತುಗಳಾದ ಕೂಲರ್, ಬಕೆಟ್ಗಳನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಿ, ಸ್ವಚ್ಛಗೊಳಿಸಿ.
*ತ್ಯಾಜಗಳನ್ನು ವಿಲೇವಾರಿ ಮಾಡಿ, ಸ್ವಚ್ಛತೆಯನ್ನು ಆದಷ್ಟು ಕಾಪಾಡಿಕೊಳ್ಳಿ.
*ಬಾತ್ರೂಮ್, ಶೌಚಾಲಯವನ್ನು ಆಗಾಗ ಸ್ವಚ್ಛಗೊಳಿಸಿ.
*ಮನೆಯಲ್ಲಿ ನೀರಿನ ಸಂಗ್ರಹಣೆ ಮಾಡುವ ಟ್ಯಾಂಕ್, ನೀರಿನ ತೊಟ್ಟಿಗಳಿಗೆ ಕೀಟನಾಶಕಗಳನ್ನು ಬಳಸಿ.
*ಮನೆಯಿಂದ ಹೊರಗೆ ಹೋಗುವಾಗಲೂ, ಮನೆಯೊಳಗೆ ಇದ್ದಾಗಲೂ ಕೈ, ಕಾಲುಗಳನ್ನು ಆದಷ್ಟು ಮುಚ್ಚಲ್ಪಡುವ ಬಟ್ಟೆ ಧರಿಸಿ.