ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ರಕ್ಷಿತ್ ಶೆಟ್ಟಿ ಅಭಿನಯದ ’ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಎರಡೇ ತಿಂಗಳಲ್ಲಿ ಎರಡೂ ಪಾರ್ಟ್ಗಳು ರಿಲೀಸ್ ಆಗಲಿವೆ. ಮೊದಲ ಭಾಗ ಸೆಪ್ಟೆಂಬರ್ 1ಕ್ಕೆ ರಿಲೀಸ್ ಆದರೆ, ಎರಡನೇ ಭಾಗ ಅಕ್ಟೋಬರ್ 20ಕ್ಕೆ ತೆರೆಗೆ ಬರಲಿದೆ.
ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತನ್ನ ವಿಭಿನ್ನ ಕಂಟೆಂಟ್ ಮೂಲಕ ಸಿನಿ ರಸಿಕರ ಮನ ಗೆದ್ದಿರುವ ಹೇಮಂತ್ ರಾವ್ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿಂಪಲ್ಸ್ಟಾರ್ ರಕ್ಷಿತ್ಗೆ ಜೊತೆಯಾಗಿ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.
ನಾನು ಈ ಸಿನಿಮಾ ಕಥೆಯನ್ನು 20 ವರ್ಷದ ಹಿಂದೆಯೇ ಬರೆದಿದ್ದೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ. ಸಮಯಕ್ಕೆ ತಕ್ಕಂತೆ ಈ ಕಥೆಯಲ್ಲಿ ವಿಕಸನ ಆಗಿದೆ. ಈ ಕಥೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಸೈಡ್- ಎ ಸೆಪ್ಟೆಂಬರ್ 1, ಸೈಡ್ – ಬಿ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ. ಶೀಘ್ರದಲ್ಲೇ ಸಿಗೋಣ’ ಎಂದು ಹೇಮಂತ್ ರಾವ್ ಟ್ವೀಟ್ ಮಾಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಎರಡು ಶೇಡ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಮನು ಎಂಬ ಪಾತ್ರವನ್ನು ಮಾಡಲಿದ್ದಾರೆ. ಸೈಡ್-ಎನಲ್ಲಿ ಮನುವಿನ ಪ್ರೀತಿಯ ಆರಂಭಿಕ ಹೆಜ್ಜೆಗಳನ್ನು ಹಿಡಿದಿಟ್ಟಿರುವಂತಿದೆ. ಸೈಡ್-ಬಿ ಯಲ್ಲಿ ಮನುವಿನ ಇನ್ನೊಂದು ಮುಖ ಅನಾವರಣಗೊಂಡಿದೆ. ಚಿತ್ರದಲ್ಲಿ ನಟಿ ರುಕ್ಮಣಿ ವಸಂತ್ ಪ್ರಿಯಾ ಎಂಬ ಪಾತ್ರದ ಮೂಲಕ ಹಾಗೂ ನಟಿ ಚೈತ್ರಾ ಆಚಾರ್ ಸುರಭಿ ಪಾತ್ರದಲ್ಲಿ ರಕ್ಷಿತ್ಗೆ ಜೋಡಿಯಾಗಲಿದ್ದಾರೆ.
ಸದಾ ವಿಭಿನ್ನ ಹೊಸತನದ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಛಾಪು ಮೂಡಿಸಿರುವ ರಕ್ಷಿತ್ ಶೆಟ್ಟಿ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ’ಸಪ್ತ ಸಾಗರದಾಚೆ ಎಲ್ಲೋ’ ರಲೀಸ್ ಡೇಟ್ ಅನೌನ್ಸ್ ಆಗಿರುವುದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.