ಒಂದು ಜೀವವನ್ನು ಉಳಿಸುವ ರಕ್ತದಾನ, ದಾನಗಳೆಲ್ಲ ಶ್ರೇಷ್ಠದಾನ ಎಂದು ಹೇಳಲಾಗುತ್ತದೆ. ರಕ್ತದಾನವೆಂದರೆ ಅದು ಜೀವದಾನ. ಇದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ. ಜನರಿಗೆ ರಕ್ತದ ಪ್ರಾಮುಖ್ಯತೆಯನ್ನು ತಿಳಿಸಲು, ರಕ್ತದಾನ ಮಾಡುವಂತೆ ಪ್ರೇರೇಪಿಸಲು ಹಾಗೂ ಸ್ವಯಂಪ್ರೇರಿತ ರಕ್ತದಾನ ಮಾಡುವ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಪ್ರತೀ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.
ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಶನ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಫ್ಯೂಷನ್ ಸಹಯೋಗದಲ್ಲಿ ವಿಶ್ವಾ ಆರೋಗ್ಯ ಸಂಸ್ಥೆ ಈ ದಿನವನ್ನು ಆಚರಿಸುತ್ತದೆ.
ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಒಂದೊಂದು ಥೀಮ್ ಇಟ್ಟುಕೊಂಡು ಆಚರಣೆ ಮಾಡಲಾಗುತ್ತದೆ. ಈ ವರ್ಷ ‘ರಕ್ತವನ್ನು ನೀಡಿ, ಪ್ಲಾಸ್ಮಾವನ್ನು ನಿಡಿ, ಜೀವವನ್ನು ಹಂಚಿಕೊಳ್ಳಿ’ ಎಂಬ ಸಂದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ರಕ್ತದಾನಿಗಳ ದಿನದ ಇತಿಹಾಸ:
ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್ಸ್ಟೇನರ್ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್ಗಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ಮೊದಲ ಬಾರಿಗೆ ರಿಚರ್ಡ್ ಲೊವರ್ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಎರಡು ನಾಯಿಗಳ ನಡುವೆ ರಕ್ತವನ್ನು ವರ್ಗಾವಣೆ ಮಾಡುವುದರ ಮೂಲಕ ಹೊಸ ಸಂಶೋದನೆಯನ್ನು ಮಾಡಿದರು. ಅನಂತರ ಹೊಸ ತಂತ್ರಜ್ಞಾನಗಳ ಸಹಾಯದಿಂದ ಕಾರ್ಲ್ ಲ್ಯಾಂಡ್ಸ್ಟೈನರ್ ಮಾನವನ ರಕ್ತದಲ್ಲಿ ಅ,ಆ,ಓ ಮೂರು ಗುಂಪುಗಳನ್ನು ಕಂಡುಹಿಡಿದರು. ಆ ಬಳಿಕ ಮಾನವರಲ್ಲಿ ರಕ್ತ ವರ್ಗಾವಣೆ ಪ್ರಾರಂಭವಾಯಿತು. 2005 ಮೇ ನಲ್ಲಿ ನಡೆದ 58ನೇ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಪ್ರತೀ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
ವಿಶ್ವ ರಕ್ತದಾನಿಗಳ ದಿನದ ಮಹತ್ವ:
ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ರಕ್ತ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದು ವಿಶ್ವ ರಕ್ತದಾನಿಗಳ ಉದ್ದೇಶವಾಗಿದೆ. ಇದರ ಜೊತೆ ಅಗತ್ಯವಿರುವ ರೋಗಿಗಳಿಗೆ ರಕ್ತ ಲಭಿಸುವಂತೆ ನೋಡಿಕೊಳ್ಳುವುದಾಗಿದೆ. ರಕ್ತ ದಾನಿಗಳು ಪ್ರತಿ ವರ್ಷ ಕೋಟ್ಯಾಂತರ ಜನರ ಜೀವವನ್ನ ಉಳಿಸಿವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತ ಬೇಕಾಗುತ್ತದೆ. ಆದರೆ, ಕೇವಲ 2.5 ಕೋಟಿ ಯೂನಿಟ್ ಮಾತ್ರ ರಕ್ತ ಸಕಾಲಕ್ಕೆ ಲಭ್ಯವಾಗುತ್ತದೆ. ದೇಶದಲ್ಲಿ ಪ್ರತಿ 2 ಸೆಕೆಂಡ್ಗೆ ಯಾರಿಗಾದರೂ ರಕ್ತದ ಅಗತ್ಯವಿರುತ್ತದೆ.
ರಕ್ತದಾನದಿಂದಾಗುವ ಆರೋಗ್ಯ ಪ್ರಯೋಜನೆಗಳು:
ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು.ರಕ್ತದಲ್ಲಿನ ಹೆಚ್ಚುವರಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆ ಮೂಲಕ ಹಿಮೋಕ್ರೊಮಾಟೋಸಿಸ್ ಅನ್ನು ತಡೆಯುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲು ಕೂಡ ರಕ್ತದಾನ ಸಹಕಾರಿಯಾಗಲಿದೆ.
ಯಾರು ರಕ್ತದಾನ ಮಾಡಬಹುದು:
18 ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು ದಾನಿಗಳ ದೇಹದ ತೂಕ 45 ಕೆ.ಜಿ. ಮೇಲ್ಪಟ್ಟಿದ್ದು, ಹಿಮೋಗ್ಲೋಬಿನ್ ಅಂಶ 12.5 ಗ್ರಾಮ್ಗಿಂತ ಹೆಚ್ಚಿರಬೇಕು. ರಕ್ತದ ಒತ್ತಡ ಸಾಮಾನ್ಯವಾಗಿರಬೇಕು ಅಂತವರು ರಕ್ತದಾನ ಮಾಡಬಹುದು. ಆದರೆ ಅನಾರೋಗ್ಯ ಪೀಡಿತರು, ನಿರಂತರ ಔಷಧ ಸೇವಿಸುವರು. ಎಚ್ಐವಿ/ಏಡ್ಸ್ ಸೋಂಕಿತರು, ಕ್ಯಾನ್ಸರ್ ರೋಗಿಗಳು, ಸಾಂಕ್ರಾಮಿಕ ರೋಗ ಹೊಂದಿರುವವರು, ಹೃದ್ರೋಗಿಗಳು, ಕ್ಷಯ ರೋಗಿಗಳು, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು, ಮಧುಮೇಹಿಗಳು, ಹೆಪಟೈಟಿಸ್ ‘ಬಿ’ ಸೋಂಕಿತರು, ಮಾದಕ ವ್ಯಸನಿಗಳು, ಕಡಿಮೆ ತೂಕ ಹಾಗೂ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ರಕ್ತದಾನ ಮಾಡುವಂತಿಲ್ಲ.