ಬಾಗಲಕೋಟೆ: ಒಂದು ಕಡೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತೊಂದು ಕಡೆಗೆ ಶನಿವಾರ, ಭಾನುವಾರ ರಜೆ ಮುಗಿಸಿಕೊಂಡು ಕೆಲಸಕ್ಕೆ ಹಾಜರಾಗುವ ನೌಕರರು. ಇದರಿಂದ ಸೋಮವಾರ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸುತ್ತಾರೆ. ಬಹುತೇಕ ಬಸ್ ಹೌಸ್ ಫುಲ್ ಆಗಿಯೇ ಬರುವುದರಿಂದ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಬೆಳಗಿನ ವೇಳೆ ಅನೇಕ ಬಸ್ಸುಗಳು ನಿಲ್ಲಿಸದೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಇದರಿಂದ ನಗರ, ಪಟ್ಟಣಕ್ಕೆ ಕೆಲಸಕ್ಕೆ ಹೋಗುವ ನೌಕರರು, ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುವಂತಾಗಿದೆ. ಈ ಪರಿಸ್ಥಿತಿ ಸೋಮವಾರ ಹೆಚ್ಚಾಗಿ ಕಾಣಿಸಿಕೊಂಡರೂ, ಬೇರೆ ದಿವಸಗಳೂ ಇದಕ್ಕೆ ಹೊರತಾಗಿಲ್ಲ.
ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಬೆಳಗ್ಗೆ 9 ಗಂಟೆಯಿಂದ ಎರಡು ತಾಸು ನಿಂತರೂ ಆರು ಬಸ್ ಗಳಲ್ಲಿ ಒಂದು ಬಸ್ ಸಹ ನಿಲ್ಲಿಸಲಿಲ್ಲ. ಇದರಿಂದ ಕಚೇರಿ ಸಮಯಕ್ಕೆ ಹೋಗಲು ಆಗುತ್ತಿಲ್ಲ ಎಂದು ಬಾಗಲಕೋಟೆ ತಹಶೀಲ್ದಾರ ಕಚೇರಿಯ ಮಹಿಳಾ ಸಿಬ್ಬಂದಿ ಕೆ. ವಿ. ಕುಲಕರ್ಣಿ ಅವರು ತೀವ್ರ ಬೇಸರ ಹೊರಹಾಕಿದರು. ಉಚಿತ ಬಸ್ ಪ್ರಯಾಣದಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇಲ್ಲವಾದರೆ ಗ್ರಾಮೀಣ ಪ್ರದೇಶದಿಂದ ಕೆಲಸಕ್ಕೆ ಬರುವವರು, ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತದೆ ಎಂದರು. ಯೋಜನೆ ಒಳ್ಳೆಯದು, ಅದಕ್ಕೆ ತಕ್ಕಂತೆ ಬಸ್ಸುಗಳ ಸಂಖ್ಯೆ ಹೆಚ್ಚಳ ಆಗಬೇಕು ಎಂದು ಅನೇಕ ಪ್ರಯಾಣಿಕರು ಕುಲಕರ್ಣಿಯವರೊಂದಿಗೆ ದನಿಗೂಡಿಸಿದರು.
ಕಳ್ಳತನದ ಬಗ್ಗೆ ಇರಲಿ ಎಚ್ಚರಿಕೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಶಕ್ತಿ ಯೋಜನೆ ಜಾರಿಯಾಗಿದ್ದು, ಬಹುತೇಕ ವಾಹನಗಳು ತುಂಬಿ ತುಳುಕುತ್ತಿದ್ದು, ನೂಕು ನುಗ್ಗಲು ಸಾಮಾನ್ಯವಾಗಿದೆ.
ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಕಳ್ಳರು ಇಲ್ಲಿಯೂ ಸಹ ತಮ್ಮ ಕೈಚಳಕ ತೋರಿಸುತ್ತಿದ್ದಾರೆ.
ಇದಕ್ಕೆ ಉದಾಹರಣೆಯಾಗಿ 2ನೇ ದಿನವಾದ ಸೋಮವಾರದಂದು ನಡೆದ ಘಟನೆ. ಗದ್ದನಕೇರಿ ಕ್ರಾಸ್ ನಿಂದ ಬಾಗಲಕೋಟೆ ನವನಗರ ಬಸ್ ನಿಲ್ದಾಣಕ್ಕೆ ಬರುವಷ್ಟರವರಲ್ಲಿ ಅಜ್ಜಿ ಒಬ್ಬರ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದ 30 ಸಾವಿರ ರೂ.ಗಳನ್ನು ಕಳುವು ಮಾಡಿ ಕಳ್ಳ ಪರಾರಿಯಾಗಿರುವುದು ವರದಿಯಾಗಿದೆ.
ಗದ್ದನಕೇರಿ ಕ್ರಾಸ್ ನಿಂದ ಚನ್ನಮ್ಮ ಬಾಣದ ಎನ್ನುವ ವೃದ್ದ ಮಹಿಳೆ ಬಾಗಲಕೋಟೆ ಬಸ್ ಹತ್ತಿದ್ದರು. ಬಾಗಲಕೋಟೆಯಿಂದ ಬಾದಾಮಿಯಲ್ಲಿ ಒಬ್ಬರಿಗೆ ದುಡ್ಡು ಕೊಡಲೆಂದು 30 ಸಾವಿರ ರೂ. ಚೀಲದಲ್ಲಿ ಇಟ್ಟುಕೊಂಡು ಬಂದಿದ್ದರು. ಉಚಿತ ಬಸ್ ಪ್ರಯಾಣದ ಹಿನ್ನಲೆಯಲ್ಲಿ ಟಂಟಂ ಬಿಟ್ಟು ಬಸ್ ಹತ್ತಿದ್ದಾರೆ. ಆದರೆ, ವಿಪರೀತ ಗದ್ದಲ ಇದ್ದಿದ್ದರಿಂದ ನೂಕು ನುಗ್ಗಲು ಇತ್ತು. ಕಂಡಕ್ಟರ್ ಗೆ ಆಧಾರ ಕಾರ್ಡ್ ತೋರಿಸಿ ಮರಳಿ ಬ್ಯಾಗ್ ನಲ್ಲಿ ಇಟ್ಟಿದ್ದಾರೆ. ಆಗ ಬ್ಯಾಗ್ ನಲ್ಲಿ 30 ಸಾವಿರ ಇತ್ತು. ನವನಗರ ಬಸ್ ನಿಲ್ದಾಣದಲ್ಲಿ ಇಳಿದು ಚೀಲ ನೋಡಿದಾಗ ದುಡ್ಡು ಇರಲಿಲ್ಲ. ಇದರಿಂದ ಹೌಹಾರಿದ ಅಜ್ಜಿ ನಿಲ್ದಾಣದಲ್ಲಿ ಇದ್ದ ಮಹಿಳಾ ಪೊಲೀಸ್ ಒಬ್ಬರಿಗೆ ತನ್ನ ಸಂಕಷ್ಟ ತೋಡಿಕೊಂಡರಾದರೂ ಅಷ್ಟರಲ್ಲಿ ಆ ಬಸ್ ನಿಲ್ದಾಣದಿಂದ ಹೋಗಿಯಾಗಿತ್ತು. ದುಡ್ಡು ಕಳೆದುಕೊಂಡ ನೋವಲ್ಲಿ ಚನ್ನಮ್ಮ ಅವರು, ಎಲ್ಲರಿಗೂ ತಮ್ಮ ಬ್ಯಾಗ್ ತೆರೆದು ತೆರೆದು ತೋರಿಸುತ್ತ ಇದ್ದಿದ್ದು ಎಲ್ಲರನ್ನು ಮರಗುವಂತೆ ಮಾಡಿತ್ತು.
ಉಚಿತ ಬಸ್ ಪ್ರಯಾಣ ಎಂದು ಟಂಟಂ ಬಿಟ್ಟು ಬಸ್ ಹತ್ತಿದೆ. ಗದ್ದಲದಲ್ಲಿ ಯಾರೋ ನನ್ನ ದುಡ್ಡು ಹೊಡೆದಿದ್ದಾರೆ. ಏನು ಮಾಡುವುದು ತಿಳಿಯದಾಗಿದೆ ಎಂದು ಮಹಿಳೆ ಪೇಚಾಡುತ್ತಲೇ ಇದ್ದರು.