ನೂತನ ಕಾಂಗ್ರೆಸ್ ಸರ್ಕಾರ ತಾನು ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಆಗಲಿರುವ ಆರ್ಥಿಕ ಹೊರೆಯನ್ನು ಸರಿದೂಗಿಸುವುದು ರಾಜ್ಯದ ಹಣಕಾಸು ಇಲಾಖೆಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಸರ್ಕಾರ ಮುಂದಾಗಿದ್ದು ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮದ್ಯದ ದರದಲ್ಲಿ ಪ್ರತಿ ಬಾಟಲ್ಗೆ ರೂ.10 ರಿಂದ 20ರವರೆಗೆ ಹೆಚ್ಚಿಸುವ ಶಿಫಾರಸ್ಸನ್ನು ಅಬಕಾರಿ ಇಲಾಖೆ ಸರಕಾರದ ಮುಂದಿಡಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ. ಬಿಯರ್ ಸೇರಿ ಹಾಟ್ ಡ್ರಿಂಕ್ಸ್ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಬಡ್ವೈಜರ್ ಬಿಯರ್ ದರ ರೂ.198 ರಿಂದ 220ಕ್ಕೆ ಹೆಚ್ಚಿಸುವ ಸಾಧ್ಯತೆ ಇದ್ದು, ಕಿಂಗ್ಫಿಶರ್ ಬಿಯರ್ ದರವನ್ನು ರೂ.160ರಿಂದ 170ರೂ.ಗೆ ಏರಿಸಬಹುದು. ಯುಬಿ ಪ್ರೀಮಿಯಂ ದರ ರೂ.125ರಿಂದ 135, ಸ್ಟ್ರಾಂಗ್ ದರ ರೂ.130ರಿಂದ 135ಗೆ ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ರಾಜ್ಯದ ಮದ್ಯ ಮಾರಾಟಗಾರರಿಂದ 35 ಸಾವಿರ ಕೋಟಿ ರೂ. ಸಂಗ್ರಹ ಮಾಡುವ ಗುರಿಯನ್ನು ಹೊಂದಿತ್ತು. ಆದರೆ, ಸಂಗ್ರಹವಾಗಿದ್ದು 29 ಸಾವಿರ ಕೋಟಿ ರೂ. ಮಾತ್ರ. ರಾಜ್ಯ ಸರ್ಕಾರ 2023-24ನೇ ವರ್ಷದಲ್ಲಿ ಅಂದಾಜು 35 ಸಾವಿರ ಕೋಟಿ ರೂ.ಮೌಲ್ಯದ ಮದ್ಯ ಮಾರಾಟ ಮಾಡುವ ಗುರಿಯನ್ನು ಹೊಂದಿದ್ದು, ಆ ಮೂಲಕ, 65 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹೊಂದಿದೆ.
ಇನ್ನು ಸರ್ಕಾರದ ಬೊಕ್ಕಸ ತುಂಬಿಸಲು ಸರಕಾರಕ್ಕೆ ಹೆಚ್ಚಿನ ಆದಾಯ ತರುವ ಇಲಾಖೆಗಳಾದ ಆರ್ಟಿಒ, ಅಬಕಾರಿ, ಪೊಲೀಸ್ ಸೇರಿದಂತೆ ಹಲವು ಇಲಾಖೆಗಳಿಗೆ ಹೆಚ್ಚಿನ ಟಾರ್ಗೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ