ಒಡಿಶಾ ಭೀಕರ ರೈಲು ದುರಂತದ ಹೊಣೆಯನ್ನು ಹೊತ್ತು ರೈಲ್ವೆ ಸಚಿವ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಆದರೆ ಇದು ರಾಜಕೀಯ ಮಾಡುವ ಸಮಯವಲ್ಲ ಎಂದು ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಕೂಡ ಇಂತಹ ರೈಲು ದುರಂತಗಳಾದ ರೈಲ್ವೆ ಸಚಿವರಾಗಿದ್ದವರು ರಾಜೀನಾಮೆ ನೀಡಿರುವ ಉದಾಹರಣೆಗಳಿವೆ.
ಅಪಘಾತಗಳ ನಂತರ ರಾಜಿನಾಮೆ ನೀಡಿದ ರೈಲ್ವೆ ಸಚಿವರುಗಳು:
ಲಾಲ್ ಬಹದ್ದೂರ್ ಶಾಸ್ತ್ರಿ:
1956 ರ ಆಗಸ್ಟ್ನಲ್ಲಿ, ಆಂಧ್ರಪ್ರದೇಶದ ಮಹಬೂಬ್ನಗರದಲ್ಲಿ ರೈಲು ಅಪಘಾತ ಸಂಭವಿಸಿತ್ತು ಅದರಲ್ಲಿ 112 ಜನರು ಸಾವನ್ನಪ್ಪಿದರು. ಅಪಘಾತದ ನೈತಿಕ ಹೊಣೆ ಹೊತ್ತು, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ರಾಜೀನಾಮೆಯನ್ನು ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಸಲ್ಲಿಸಿದರು. ಆದರೆ ಜವಾಹರಲಾಲ್ ನೆಹರು ಅವರು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ರಾಜೀನಾಮೆಯನ್ನು ಹಿಂಪಡೆಯುವಂತೆ ಮನವೊಲಿಸಿದ್ದರು.
ಮೂರು ತಿಂಗಳುಗಳ ನಂತರ ನವೆಂಬರ್ನಲ್ಲಿ ತಮಿಳುನಾಡಿನ ಅರಿಯಲೂರಿನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 150 ಜನರು ಸಾವನ್ನಪ್ಪಿದರು. ಆಗ ಮತ್ತೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು, ನಂತರ ಅದನ್ನು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಒಲ್ಲದ ಮನಸ್ಸಿನಿಂದ ಅಂಗೀಕರಿಸಿದರು
ನಿತೀಶ್ ಕುಮಾರ್ :
ಆಗಸ್ಟ್ 1999 ರಲ್ಲಿ, ಪಶ್ಚಿಮ ಬಂಗಾಳದ ಗೈಸಾಲ್ನ ನಿಲ್ದಾಣದಲ್ಲಿ ಸುಮಾರು 2,500 ಜನರನ್ನು ಹೊತ್ತ ಎರಡು ರೈಲುಗಳು ಡಿಕ್ಕಿ ಹೊಡೆದವು. ಆಗಿನ ರೈಲ್ವೆ ಸಚಿವ ನಿತೀಶ್ ಕುಮಾರ್ ಅವರು ಗೈಸಾಲ್ ರೈಲು ದುರಂತದ ನೈತಿಕ ಹೊಣೆಗಾರಿಕೆಯನ್ನು ಹೊತ್ತು ರಾಜೀನಾಮೆ ನೀಡಿದರು. ಸಿಗ್ನಲ್ ದೋಷದಿಂದಾಗಿ ಈ ದುರಂತ ಸಂಭವಿಸಿತ್ತು. ನಿತೀಶ್ ಕುಮಾರ್ ಅವರು ಶಾಸ್ತ್ರಿಯವರ ನಂತರ ರಾಜೀನಾಮೆ ನೀಡಿದ ಎರಡನೇ ರೈಲ್ವೆ ಸಚಿವರಾಗಿದ್ದಾರೆ.
ಮಮತಾ ಬ್ಯಾನರ್ಜಿ :
2000ನೇ ಇಸವಿಯಲ್ಲಿ, ಒಂದೇ ವರ್ಷದಲ್ಲಿ ಎರಡು ರೈಲು ದುರಂತಗಳ ನಡೆದವು ಅವುಗಳ ನೈತಿಕ ಹೊಣೆ ಹೊತ್ತು ಮಮತಾ ಬ್ಯಾನರ್ಜಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಅಂದಿನ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ರಾಜೀನಾಮೆಯನ್ನು ತಿರಸ್ಕರಿಸಿದ್ದರು.
ಸುರೇಶ್ ಪ್ರಭು :
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಸರಣಿ ಅಪಘಾತಗಳ ನಂತರ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಆದರೆ ಅದನ್ನು ತೀರಸ್ಕರಿಸಲಾಯಿತು. 2016 ರಲ್ಲಿ, ಕೈಫಿಯತ್ ಎಕ್ಸ್ಪ್ರೆಸ್ ಮತ್ತು ಪುರಿ-ಉತ್ಕಲ್ ಎಕ್ಸ್ಪ್ರೆಸ್ ಅಪಘಾತ ಹಾಗೂ ಪಾಟ್ನಾ-ಇಂದೋರ್ ಎಕ್ಸ್ಪ್ರೆಸ್ನ 14 ಬೋಗಿಗಳು ಕಾನ್ಪುರ ಬಳಿ ಹಳಿತಪ್ಪಿ ಸುಮಾರು 150 ಜನರು ಸಾವನ್ನಪ್ಪಿದ್ದಾರೆ. ಇವೆಲ್ಲದರ ಹೊಣೆಯನ್ನು ಸುರೇಶ್ ಪ್ರಭು ಹೊತ್ತಿದ್ದರು. ಆದರೆ ಆ ಸಮಯದಲ್ಲಿ ಪ್ರಭು ಅವರ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ನಂತರ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ವರ್ಗಾಯಿಸಲಾಯಿತು.