ಒಂದು ಕಾಲದಲ್ಲಿ ಜನಸಾಮಾನ್ಯರ ಪಾಲಿನ ಸಂಚಾರ ಸಾಧನವಾಗಿ ರಸ್ತೆಯಲೆಲ್ಲಾ ಬೈಸಿಕಲ್ ನದ್ದೇ ರಾಜ್ಯಭಾರವಿತ್ತು ಆದರೆ ಈಗ ಅದು ಕಣ್ಮರೆಯಾಗಿ ಕೇವಲ ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನ, ಸೈಕ್ಲಿಂಗ್ ಪಟುಗಳಿಗೆ ಕ್ರೀಡಾ ಸಾಧನವಾಗಿ ಹೋಗಿದೆ. ದೇಹದ ವ್ಯಾಯಾಮಕ್ಕೆ ಬೈಸಿಕಲ್ ತುಳಿ ಯುವುದಕ್ಕಿಂತ ಮಿಗಿಲಾದ ಚಟು ವಟಿಕೆ ಇನ್ನೊಂದಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕ್ಲಿಂಗ್ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎನ್ನುವುದು ಹಲವಾರು ಅಧ್ಯಯನ ಗಳಿಂದ ಸಾಬೀತಾಗಿದೆ.
ಮಾನವನ ಆರೋಗ್ಯ ಹಾಗೂ ಪರಿಸರ ಕಾಪಾಡುವಲ್ಲಿ ಬೈಸಿಕಲ್ನ ಪಾತ್ರವನ್ನು ಎತ್ತಿ ತೋರಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಬೈಸಿಕಲ್ ದಿನದ ಇತಿಹಾಸ:
ಏಪ್ರಿಲ್ 2018ರಲ್ಲಿ ಪ್ರತಿ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವಾಗಿ ಆಚರಿಸಲಾಗುವುದು ಎಂದು ವಿಶ್ವಸಂಸ್ಥೆ ಘೋಷಿಸಿತು. ತುರ್ಕಮೆನಿಸ್ತಾನ ದೇಶವು ವಿಶ್ವ ಬೈಸಿಕಲ್ ದಿನದ ಆಚರಣೆಯ ಕುರಿತು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿತ್ತು.
ಬೈಸಿಕಲ್ನ ಹುಟ್ಟು:
ಕ್ರಿಸ್ತ ಶಕ 1817ರ ಜೂನ್ 12ರಂದು ಜರ್ಮನಿಯ ಬ್ಯಾರನ್ ಕಾರ್ಲ್ ವನ್ ಡ್ರೈಸ್ ಅವರು ಬೈಸಿಕಲ್ ಅನ್ನು ವಿಶ್ವದ ಜನತೆಗೆ ಪರಿಚಯಿ ಸಿದರು ಎಂಬ ಉಲ್ಲೇಖವಿದೆ. ಆ ಬಳಿಕ ನಿರಂತರ ವಾಗಿ ಜಗತ್ತಿನಾದ್ಯಂತ ಸಂಚಾರ ಸಾಧನವಾಗಿ ಈ ಸೈಕಲ್ ವ್ಯಾಪಕವಾಗಿ ಬಳಸಲ್ಪಟ್ಟಿತ್ತು. ಕಾಲಕ್ಕೆ ತಕ್ಕಂತೆ ಸೈಕಲ್ಗಳೂ ಸುಧಾರಣೆ ಕಂಡವು. ಇದರ ಜತೆಯಲ್ಲಿ ಸೈಕ್ಲಿಂಗ್ ಒಂದು ಕ್ರೀಡೆಯಾಗಿ, ದೈಹಿಕ ವ್ಯಾಯಾಮಕ್ಕೆ ಬಳಸಲ್ಪಡುವ ಸಾಧನವಾಗಿ ಪರಿಗಣಿಸಲ್ಪಟ್ಟಿತು.
ಬೈಸಿಕಲ್ನ ಅನುಕೂಲಗಳು:
*ಬೇರೆ ವಾಹನಗಳಂತೆ ಸೈಕಲ್ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುವುದಿಲ್ಲ. ಹಾಗಾಗಿ ಪರಿಸರ ಕಾಳಜಿಗೆ ಉತ್ತಮ ಆಯ್ಕೆಯಾಗಿದೆ.
*ಸೈಕ್ಲಿಂಗ್ ಹೃದಯ ರಕ್ತನಾಳದ ಫಿಟ್ನೆಸ್, ಸ್ನಾಯು ಬಲ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ಆರೋಗ್ಯಕರ ಜೀವನಕ್ಕೆ ಕೊಡುಗೆ ನೀಡುತ್ತದೆ.
*ಸೈಕ್ಲಿಂಗ್ ಮಾನಸಿಕ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಸೈಕಲ್ ತುಳಿಯುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ.
*ಸೈಕ್ಲಿಂಗ್ ಅಗ್ಗದ ಸಾರಿಗೆ ಮಾರ್ಗವಾಗಿದ್ದು, ಹಣವನ್ನು ಉಳಿಸುತ್ತದೆ.
ಬೈಸಿಕಲ್ನ ಆರೋಗ್ಯ ಪ್ರಯೋಜನೆಗಳು:
*ಕೊಬ್ಬು ಕರಗಿಸುವುದು:
ದಿನಕ್ಕೆ 15 ನಿಮಿಷ ಕಾಲ ಬೈಸಿಕಲ್ ತುಳಿದರೆ ಆಗ ವರ್ಷಕ್ಕೆ 5 ಕೆಜಿ ಕೊಬ್ಬು ಕರಗುವುದು ಎಂದು ಹೇಳಲಾಗುತ್ತದೆ. ತೂಕ ಇಳಿಸಿಕೊಳ್ಳುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
*ಮಾನಸಿಕ ಆರೋಗ್ಯ:
ಸೈಕ್ಲಿಂಗ್ ಖಿನ್ನತೆ, ಆತಂಕ, ಒತ್ತಡವನ್ನು ತಡೆಯುತ್ತದೆ ಮತ್ತು ಸಂತೋಷದ ಹಾರ್ಮೋನ್ ಬಿಡುಗಡೆ ಮಾಡುವ ಮೂಲಕ ಮಾನಸಿಕವಾಗಿ ಆರೋಗ್ಯಗೊಳಿಸುತ್ತದೆ. ಜೊತೆಗೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಕೆಲವೊಂದಿಷ್ಟು ಹೊತ್ತು ಸೈಕಲ್ ಸವಾರಿ ಮಾಡುವುದರಿಂದ ಸೈಕಲ್ ಸವಾರಿ ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸಬಹುದು.
*ಹೃದಯದ ಆರೋಗ್ಯ:
ಸೈಕಲ್ ಸವಾರಿಯೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಪ್ರತೀ ದಿನ ಕೆಲವೊಂದಿಷ್ಟು ಹೊತ್ತು ಸೈಕ್ಲಿಂಗ್ ಮಾಡುವುದರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ಹೃದಯದಲ್ಲಿ ರಕ್ತ ಪರಿಚಲನೆಯು ಸರಾಗಗೊಳಿಸುತ್ತದೆ.
*ಮಧುಮೇಹಕ್ಕೆ ನಿಯಂತ್ರಿಸುತ್ತದೆ:
ಸೈಕ್ಲಿಂಗ್ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ದೇಹವು ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಇದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.