ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಯಾರು ತಮ್ಮ ಕ್ಷೇತ್ರಕ್ಕೆ ಜನಪ್ರತಿನಿಧಿ ಆಗಬೇಕು, ಯಾವ ಪಕ್ಷ ಸರ್ಕಾರ ನಡೆಸಬೇಕು ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ. ಹೀಗಿರುವಾಗ ಜನಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ಯಾವ ಅಭ್ಯರ್ಥಿಯೂ ಒಬ್ಬ ಮತದಾರನಿಗೆ ಇಷ್ಟವಾಗಲಿಲ್ಲ ಎಂದರೆ, ಆ ಮತದಾರನಿಗೆ ಇರುವ
ಒಂದು ಬಹುಮುಖ್ಯ ಆಯ್ಕೆಯೇ ನೋಟಾ!
ನೋಟಾ ಎಂದರೆ "ಮೇಲಿನ ಯಾವುದೂ ಇಲ್ಲ" (None Of The Above) ಎಂದರ್ಥ. ಈ ಆಯ್ಕೆಯನ್ನು ಆರಿಸುವ ಮೂಲಕ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳನ್ನು ಮತದಾರರು ಅಧಿಕೃತವಾಗಿ ನಿರಾಕರಿಸಬಹುದು.
ಮತದಾರರು ಇವಿಎಂನಲ್ಲಿ ನೋಟಾ ಒತ್ತಿದರೆ, ಅವರು ಯಾವುದೇ ಪಕ್ಷಕ್ಕೂ ಅಥವಾ ಯಾವ ಅಭ್ಯರ್ಥಿಗೂ ಮತ ಹಾಕಲು ಇಚ್ಛಿಸುವುದಿಲ್ಲ ಎಂದು ತಿಳಿಸುತ್ತದೆ.
2009 ರಿಂದ ಭಾರತದಲ್ಲಿ ಹೆಚ್ಚಿನ ಚುನಾವಣೆಗಳಲ್ಲಿ ನೋಟಾ ವನ್ನು ಆಯ್ಕೆಯಾಗಿ ಒದಗಿಸಲಾಗಿದೆ. PUCL ವರ್ಸಸ್ ಯೂನಿಯನ್ ಆಫ್ ಇಂಡಿಯಾ 2013 ರ ತೀರ್ಪಿನಲ್ಲಿ ಲೋಕಸಭೆ ಮತ್ತು ಆಯಾ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ನೋಟಾ ಆಯ್ಕೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ದೇಶದ ನಾಲ್ಕು ರಾಜ್ಯಗಳಲ್ಲಿ (ಛತ್ತೀಸ್ಗಢ, ಮಿಜೋರಾಂ, ರಾಜಸ್ಥಾನ ಮತ್ತು ಮಧ್ಯಪ್ರದೇಶ) ಮತ್ತು ದೆಹಲಿಯ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ನೋಟಾ ಆಯ್ಕೆ ನೀಡಲಾಯಿತು.
ಅಂದಿನಿಂದ ಇಂದಿನವರೆಗೂ ನೋಟಾ ಆಯ್ಕೆ ಚಾಲ್ತಿಯಲ್ಲಿದೆ ಹಾಗೂ ಉತ್ತಮ ಸಂಖ್ಯೆಯ ಮತಗಳನ್ನೂ ಪಡೆಯುತ್ತಿದೆ. ಕೆಲವೊಂದು ಕಡೆಗಳಲ್ಲಿ, ಒಬ್ಬ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ‘ನೋಟಾಪಡೆದದ್ದೂ ಇದೆ. ಇನ್ನೂ ಕೆಲವು ಕಡೆಗಳಲ್ಲಿ ಹಲವು ಅಭ್ಯರ್ಥಿಗಳು ಪಡೆದ ಮತಗಳಿಗಿಂತ ಹೆಚ್ಚಿನ ಮತಗಳನ್ನು ‘ನೋಟಾ’ ಪಡೆದಿದೆ. ಗುಜರಾತ್ (2017), ಕರ್ನಾಟಕ (2018), ಮಧ್ಯಪ್ರದೇಶ (2018) ಮತ್ತು ರಾಜಸ್ಥಾನ (2018) ಚುನಾವಣೆಗಳಲ್ಲಿ ಈ ರೀತಿಯ ನಿದರ್ಶನಗಳು ಸಿಗುತ್ತವೆ.
ನೋಟಾವನ್ನು ಪರಿಚಯಿಸುವ ಸಂದರ್ಭದಲ್ಲಿ, ನೋಟಾ ಎಂದು ಚಲಾವಣೆಯಾದ ಮತಗಳನ್ನು ಎಣಿಕೆ ಮಾಡಿದರೂ, ಅವು ಅಮಾನ್ಯವಾದ ಮತಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅವು ಚುನಾವಣಾ ಪ್ರಕ್ರಿಯೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಆದ್ದರಿಂದ, ನೋಟಾ ಎಷ್ಟೇ ಮತಗಳನ್ನು ಪಡೆದರೂ, ಒಟ್ಟು ಮಾನ್ಯವಾದ ಮತಗಳ ಲೆಕ್ಕಾಚಾರಕ್ಕೆ ಅದನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ನೋಟಾ ಹೆಚ್ಚಿನ ಮತಗಳನ್ನು ಪಡೆದರೂ, ಅತ್ಯಧಿಕ ಮತ ಪಡೆದ ಅಭ್ಯರ್ಥಿ ಜನಪ್ರತಿನಿಧಿ ಆಗುತ್ತಾರೆ.
ನೋಟಾ – ಆಗಬೇಕಿದೆ ಸುಧಾರಣೆ ನೋಟಾ ಆಯ್ಕೆ ಮತದಾರರನ್ನು ಇನ್ನಷ್ಟು ಸಬಲೀಕರಣಗೊಳಿಸಬೇಕು. ಈ ಕುರಿತು ಈಗಾಗಲೇ ಹಲವು ಕಡೆಗಳಲ್ಲಿ ಚರ್ಚೆಗಳು ನಡೆದಿವೆ. ಸೂಚಿಸಲಾದ ಕೆಲವು ಸುಧಾರಣೆಗಳು ಈ ಕೆಳಗಿನಂತಿವೆ:
● ನೋಟಾ ಅತಿ ಹೆಚ್ಚು ಮತಗಳನ್ನು ಪಡೆದರೆ, ಆ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳೊಂದಿಗೆ ಮರುಚುನಾವಣೆ ನಡೆಸಬೇಕು
● ಮರು-ಚುನಾವಣೆಯನ್ನು ನಡೆಸುವಾಗ, ನೋಟಾ ಆಯ್ಕೆಯನ್ನು ನಿಷ್ಕ್ರಿಯಗೊಳಿಸಬಹುದು
● ನೋಟಾ ಎದುರು ಸೋತ ರಾಜಕೀಯ ಪಕ್ಷಗಳು ಮರುಚುನಾವಣೆಯ ವೆಚ್ಚವನ್ನು ಭರಿಸಬೇಕು. ನೋಟಾ ಎದುರು ಸೋತ ಅಭ್ಯರ್ಥಿಗಳಿಗೆ ಒಂದಷ್ಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು.
● ನೋಟಾ ಪಡೆದ ಮತಗಳು ಗೆದ್ದ ಅಭ್ಯರ್ಥಿಯ ಅಂತರಕ್ಕಿಂತ ಹೆಚ್ಚಿದ್ದರೂ ಅಲ್ಲಿ ಮರು-ಚುನಾವಣೆ ನಡೆಸಬೇಕು.
ನೋಟಾದ ಮೌಲ್ಯವನ್ನು ಬಲಪಡಿಸಲು, 2016 ಮತ್ತು 2017 ರಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಸಲ್ಲಿಕೆಯಾಗಿವೆ. ಹೀಗಿದ್ದರೂ, ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿದ್ದು, ನೋಟಾಗೆ ಇಷ್ಟೊಂದು ಶಕ್ತಿ ನೀಡುವುದು ಅಸಾಧ್ಯ ಎಂದು ಹೇಳಿತ್ತು.