ಬೆಂಗಳೂರು: ಈಗಾಗಲೇ ಭಾರತದಲ್ಲಿ 5ಜಿ ಸೆಟ್ ಗಳು ಎಲ್ಲೆಡೆ ಸಂಪರ್ಕ ಒದಗಿಸುತ್ತಿದೆ. ಈ ನಡುವೆ ಎಂಜಿನಿಯರ್ ಗಳು 6ಜಿ ತಂತ್ರಜ್ಞಾನದ ಪೇಟೆಂಟ್ ಪಡೆಯಲು ಶುರು ಮಾಡಿದ್ದಾರೆ.
ಈವರೆಗೆ ಸುಮಾರು 100 ರಷ್ಟು ಪೇಟೆಂಟ್ ಗಾಗಿ ಅರ್ಜಿ ಬಂದಿವೆ ಎಂದು ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಗಂಗೋತ್ರಿಯಲ್ಲಿ 2 ಲಕ್ಷ 5ಜಿ ಸೈಟ್ಗೆ ಮತ್ತು ಡೆಹ್ರಾಡೂನ್ ನಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜತೆಗೂಡಿ ಚಾರ್ಧಾಮ್ ಫೈಬರ್ ಕನೆಕ್ಟಿವಿಟಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 5ಜಿ ವಿಚಾರದಲ್ಲಿ ಭಾರತವು ವಿಶ್ವದ ಇತರ ದೇಶಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತದೆ. ಆದರೆ 6ಜಿ ತಂತ್ರಜ್ಞಾನದಲ್ಲಿ ದೇಶವು ಮುಂದಾಳತ್ವ ಸಾಧಿಸಬಹುದು ಎಂದು ಹೇಳಿದರು.
ಈಗಿನ ಬೆಳವಣಿಗೆಯೊಂದಿಗೆ ಡಿಸೆಂಬರ್ 31 ರ ವೇಳೆಗೆ 3 ಲಕ್ಷ 5ಜಿ ಸೈಟ್ ಗಳನ್ನು ಹೊಂದಬಹುದಾಗಿದೆ ಎಂದು ಅವರು ಹೇಳಿದರು. ಟೆಲಿಕಾಂ ಟವರ್ನಲ್ಲಿರುವ ಅತ್ಯಂತ ಸುಧಾರಿತ ಮತ್ತು ಸಂಕೀರ್ಣ ಸಾಧನವೆಂದರೆ ರೇಡಿಯೊ ಉಪಕರಣ. ಭಾರತದಲ್ಲಿ ತಯಾರಿಸಿದ ಉಪಕರಣಗಳನ್ನೇ ಅಮೆರಿಕದಲ್ಲಿ ಹೆಚ್ಚಾಗಿ ಸ್ಥಾಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತದ 4ಜಿ ಮತ್ತು 5ಜಿ ಅನ್ನು ಬಳಸುವುದು ಮುಖ್ಯವಾಗಿದೆ, ಇದರಿಂದಾಗಿ ಸೈಬರ್ ಭದ್ರತೆಗೆ ಸಂಬಂಧಿಸಿದ ಆತಂಕಗಳನ್ನು ಕಡಿಮೆ ಮಾಡಬಹುದು ಎಂದರು.