ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಟ ಅಭಿಷೇಕ್ ಅಂಬರೀಶ್ ಮತ್ತು ಫ್ಯಾಶನ್ ಡಿಸೈನರ್ ಅವಿವಾ ಬಿದ್ದಪ್ಪ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ರಾಜಕೀಯ ಮತ್ತು ಚುನಾವಣಾ ಜಂಜಾಟದಲ್ಲಿದ್ದ ಸುಮಲತಾ ಅಂಬರೀಶ್ ಕೊಂಚ ಬಿಡುವು ಮಾಡಿಕೊಂಡು ಪುತ್ರನ ಮದುವೆ ತಯಾರಿಯ ನಡೆಸುತ್ತಿದ್ದಾರೆ.
ಜೂನ್ 5 ಮತ್ತು 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವಾ ವಿವಾಹ ಅದ್ಧೂರಿಯಾಗಿ ನಡೆಯಲಿದೆ ಎಂದು ಸುಮಲತಾ ಅವರು ತಿಳಿಸಿದ್ದಾರೆ.
ಅನಂತರ ಮಂಡ್ಯದಲ್ಲಿ ಆರತಕ್ಷತೆ ಮತ್ತು ಬೀಗರ ಊಟ ಕಾರ್ಯಕ್ರಮ ಆಯೋಜನೆಯಾಗಿದ್ದು, ಈ ವೇಳೆ 10ರಿಂದ 15 ಸಾವಿರ ಅತಿಥಿಗಳು ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ.
ಫ್ಯಾಷನ್ ಈವೆಂಟ್ವೊಂದರಲ್ಲಿ ಅಭಿಷೇಕ್ ಮತ್ತು ಅವಿವಾ ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಯಿತು. 3-4 ವರ್ಷಗಳ ಡೇಟಿಂಗ್ ನಂತರ ಕಳೆದ ವರ್ಷ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ವಿವಾಹ ಮಾಡಿಕೂಂಡು ಸಂಸಾರ ನಡೆಸಲು ರೆಡಿಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಸದ್ಯ ಕನ್ನಡ ಚಲನಚಿತ್ರದಲ್ಲಿ ನಟನಾಗಿ ಗುರುತಿಸಿಕೊಂಡಿದ್ದರೆ, ಅವಿವಾ ಬಿದ್ದಪ್ಪ ಫ್ಯಾಷನ್ ಡಿಸೈನರ್ ಆಗಿದ್ದಾರೆ.
ಇನ್ನು ಅಭಿಷೇಕ್ ಮತ್ತು ಅವಿವಾ ವಿವಾಹ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ. ಏಪ್ರಿಲ್ 5ರಂದು ಅಭಿಷೇಕ್ ಹಾಗೂ ತಾಯಿ ಸುಮಲತಾ ಅಂಬರೀಷ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಮಂತ್ರಣ ನೀಡಿ ಬಂದಿದ್ದರು. ಇದನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗಾಗಲೇ ಹಲವು ಗಣ್ಯರನ್ನು ವಿವಾಹ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಚಿವ, ನಟ ಅಂಬರೀಷ್ ಪುತ್ರ ಅಭಿಷೇಕ್ ವಿವಾಹ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು, ಕನ್ನಡ ಚಲನಚಿತ್ರ ರಂಗ ಸೇರಿದಂತೆ ದಕ್ಷಿಣ ಭಾರತದ ಹಲವು ನಟ-ನಟಿಯರು ಹಾಜರಾಗುವ ನಿರೀಕ್ಷೆ ಇದ್ದು ಭಾರೀ ತಯಾರಿ ನಡೆಸುತ್ತಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಮದುವೆಗಾಗಿ ಆಭರಣ, ವಸ್ತ್ರಗಳ ಖರೀದಿಯೂ ಜೋರಾಗಿ ನಡೆದಿದೆ. ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ರ ಉಡುಗೆಯನ್ನು ಡಿಸೈನ್ ಮಾಡುತ್ತಿದ್ದಾರೆ.