ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂದೇ ಗುರುತಿಸಿಕೊಂಡಿರುವ ಐಎನ್ಎಸ್ ವಿಕ್ರಾಂತ್ ಮೊದಲ ಬಾರಿಗೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಿಲುಗಡೆಗೊಂಡಿದೆ.
2022 ರ ಸೆಪ್ಟೆಂಬರ್ನಲ್ಲಿ ಲೋಕಾರ್ಪಣೆಗೊಂಡಿರುವ ಭಾರತೀಯ ತಂತ್ರಜ್ಞಾನ ಹಾಗೂ ನಿರ್ಮಾಣದ ಮೊದಲ ಯುದ್ಧ ವಿಮಾನ ವಾಹಕ ನೌಕೆ ವಿಕ್ರಾಂತ್ನ್ನು ಕದಂಬ ಜಟ್ಟಿಯಲ್ಲಿ ತಂದು ನಿಲ್ಲಿಸಲಾಗಿದೆ.
ವಿಕ್ರಾಂತ್ ಹಡಗು ಕೊಚ್ಚಿಯಲ್ಲಿಯೇ ಇದ್ದು ಈ ಹಿಂದೆ ಅದನ್ನು ಅರಬ್ಬಿ ಸಮುದ್ರದಲ್ಲಿ ಪರೀಕ್ಷಿಸಲಾಗಿತ್ತು, ಇದೀಗ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ನಿಲುಗಡೆಮಾಡಲಾಗಿದೆ. ಇನ್ನು ವಿಕ್ರಾಂತ್ ಒಂದು ತಿಂಗಳ ಕಾಲ ಇಲ್ಲಿಯೇ ಇರಲಿದೆ. ನಂತರ ಇಂಧನ, ಆಹಾರ ತುಂಬಿಕೊಂಡು ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸಲಿದೆ
ಐಎನ್ಎಸ್ ವಿಕ್ರಾಂತ್ ವಿಶೇಷತೆ ಏನು?
ಕೊಚ್ಚಿಯ ಹಡಗು ಕಾರ್ಖಾನೆಯಲ್ಲಿ 2000 ತಂತ್ರಜ್ಞರು, 13 ವರ್ಷಗಳಿಂದ ಕೆಲಸ ಮಾಡಿ ನಿರ್ಮಾಣ ಮಾಡಿದ ಯುದ್ಧನೌಕೆ ಇದಾಗಿದ್ದು, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು.
40 ಸಾವಿರ ಟನ್ ತೂಕದ 23 ಸಾವಿರ ಕೋಟಿ ರೂ. ಹಣ ವ್ಯಯಿಸಿ ಯುದ್ಧವಿಮಾನ ವಾಹಕ ನೌಕೆಯನ್ನು ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿಸುವ ಮೂಲಕ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ
ಈ ನೌಕೆಯ 262 ಮೀಟರ್ ಉದ್ದ, 62 ಮೀಟರ್ ಅಗಲ ಹಾಗೂ 59 ಮೀಟರ್ ಎತ್ತರವಿದೆ. 18 ಮಹಡಿಗಳನ್ನು ಹೊಂದಿರುವ ಈ ಹಡಗಿನಲ್ಲಿ 2,400 ವಿಭಾಗಗಳು ಇವೆ. ಒಂದೇ ಬಾರಿಗೆ 1600 ನೌಕಾ ಸಿಬ್ಬಂದಿಯನ್ನು ಒಂದೇ ಬಾರಿಗೆ ಐಎನ್ಎಸ್ ವಿಕ್ರಾಂತ್ನಲ್ಲಿ ನಿಯೋಜಿಸಬಹುದಾಗಿದೆ.
ಮಿಗ್- 29 ಕೆ, ಕಮೋವ್- 31 ಹೆಲಿಕಾಪ್ಟರ್ಗಳು, ಅಮೆರಿಕ ನಿರ್ಮಿತ ಎಫ್-18ಎ ಸೂಪರ್ ಹಾರ್ನೆಟ್, ಫ್ರಾನ್ಸ್ ನಿರ್ಮಿತ ರಫೇಲ್ (ಎಂ) ಯುದ್ಧ ವಿಮಾನಗಳು, ಫೈಟರ್ ಜೆಟ್ ಎಂಎಚ್- 60 ರೋಮಿಯೊ ಮಲ್ಟಿರೋಲ್ ಹೆಲಿಕಾಪ್ಟರ್ಗಳು ಕಾರ್ಯನಿರ್ವಹಿಸುತಿದ್ದು 32 ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಚಿಮ್ಮುವ ವಾಯು ಕ್ಷಿಪಣಿಗಳು ಮತ್ತು ಎಕೆ- 630 ಫಿರಂಗಿ ಗನ್ಗಳೂ ವಿಕ್ರಾಂತ್ ಬತ್ತಳಿಕೆಯಲ್ಲಿದೆ.
ಇದರ ರನ್ ವೇ 262 ಮೀಟರ್ಗಳಷ್ಟು ಉದ್ದವಿದೆ. ಬರೋಬ್ಬರಿ 2 ಫುಟ್ಬಾಲ್ ಮೈದಾನದಷ್ಟು ದೊಡ್ಡದಾಗಿದೆ. 2 ಒಲಿಂಪಿಕ್ಸ್ ಈಜುಕೊಳಗಳನ್ನು ನಿರ್ಮಿಸಬಹುದಾದಷ್ಟು ಉದ್ದವಾದ ರನ್ವೇ ಹೊಂದಿದೆ. ಹಾಗೆಯೇ ನೌಕೆ ಗಂಟೆಗೆ 33 ಕಿ.ಮೀ. ವೇಗದಲ್ಲಿ ಚಲಿಸಿ, ಒಂದೇ ಬಾರಿಗೆ 7,500 ನಾಟಿಕಲ್ ಮೈಲು ಕ್ರಮಿಸಬಲ್ಲದು. 250 ಟ್ಯಾಂಕರ್ಗಳಷ್ಟು ಇಂಧನ ಇದರಲ್ಲಿರುತ್ತದೆ.
ಸಿಬ್ಬಂದಿಗಳ ಆರೋಗ್ಯ ಸಮಸ್ಯೆ ಉಂಟಾದರೆ ಅವರನ್ನು ಉಪಸಚರಿಸಲು 16 ಬೆಡ್ಗಳ ಆಸ್ಪತ್ರೆ ಇದೆ. 2,500 ಕಿ.ಮೀ. ಉದ್ದದ ವಿದ್ಯುತ್ ಕೇಬಲ್ ವಿಕ್ರಾಂತ್ನಲ್ಲಿದೆ. ಇದರ ಅಡುಗೆಮನೆಯಲ್ಲಿ ಒಂದೇ ದಿನದಲ್ಲಿ 4,800 ಜನರಿಗೆ ಅಡುಗೆ ಸಿದ್ಧಪಡಿಸಬಹುದು. 1 ಗಂಟೆಯಲ್ಲಿ 3 ಸಾವಿರ ಚಪಾತಿ ಮಾಡುವ, ಇಡ್ಲಿ ಬೇಯಿಸುವ ಅತ್ಯಾಧುನಿಕ ಯಂತ್ರಗಳಿವೆ. ಇನ್ನು ಈ ಹಡಗು ಐ.ಎನ್.ಎಸ್ ವಿಕ್ರಮಾದಿತ್ಯಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
ಕದಂಬದ ವಿಶೇಷತೆ:
ಏಷ್ಯಾದ ಅತೀ ದೊಡ್ಡ ನೌಕಾ ನೆಲೆ ಎಂದೇ ಪ್ರಸಿದ್ಧಿ ಪಡೆದಿರುವ ಕದಂಬದಲ್ಲಿ ಈಗಾಗಲೇ 40 ಯುದ್ದ ಹಡಗುಗಳು, ಜಲಾಂತರ್ಗಾಮಿ ನೌಕೆ ನಿಲ್ಲುವಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ. ಹಡಗುಗಳನ್ನು ರಿಪೇರಿ ಮಾಡಲು ಸಮುದ್ರದಿಂದಲೇ ಮೇಲೆತ್ತಿ ದಡಕ್ಕೆ ತರುವ ದೇಶದ ಮೊದಲ ʼಟ್ರಾಲಿ ಶಿಪ್ಟಿಂಗ್ ಸಿಸ್ಟಮ್ʼತಂತ್ರಜ್ಞಾನ ಇಲ್ಲಿರುವುದು ವಿಶೇಷ.