ಮಂಗಳೂರು: ನಗರದ ಕದ್ರಿ ಮಂಜುನಾಥ ದೇವಸ್ಥಾನದ ಅಂಗಣಕ್ಕೆ ಮೂವರು ಅನ್ಯ ಕೋಮಿನ ಯುವಕರು ಬೈಕಿನಲ್ಲಿ ಗುರುವಾರ ರಾತ್ರಿ ಪ್ರವೇಶಿಸಿದ್ದು, ಅವರನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಯುವಕರು ಮಾತನಾಡಿರುವ ವಿಡಿಯೊವನ್ನು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಬಳಗದ ವಾಟ್ಸಾಪ್ ಗ್ರೂಪ್ನಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ, ಯುವಕರು ತಮ್ಮನ್ನು ಮುಸ್ಲಿಮರೆಂದೂ ಅಸೈಗೋಳಿಯವರು ಎಂದೂ ಹೇಳಿಕೊಂಡಿದ್ದಾರೆ. ದೇವಾಲಯ ಪ್ರವೇಶಿಸಿದ ಹಸನ್ ಶಾಹಿನ್, ಜಾಫರ್, ಫಾರೂಕ್ನನ್ನು ಕದ್ರಿ ಪೊಲೀಸರಿಗೆ ಒಪ್ಪಿಸಲಾಗಿದೆ.
‘ಕಾಟಿಪಳ್ಳಕ್ಕೆ ಹೊರಟ ತಾವು ಜಿಪಿಎಸ್ ಹಾಕಿಕೊಂಡು ಬೈಕಿನಲ್ಲಿ ಹೋಗುತ್ತಿದ್ದೆವು. ದಾರಿ ತಪ್ಪಿ ಇಲ್ಲಿಗೆ ಬಂದೆವು’ ಎಂದೂ ಹೇಳಿಕೊಂಡಿದ್ದಾರೆ. ‘ದೇವಸ್ಥಾನ ಅಂಗಣದಲ್ಲಿ ಯುವಕರು ಸಂಶಯಾಸ್ಪದವಾಗಿ ತಿರುಗುತ್ತಿದ್ದರು. ಈ ಯುವಕರು ದೇವಸ್ಥಾನದ ಪ್ರಾಂಗಣಕ್ಕೆ ಬೈಕ್ ತಂದಿದ್ದಾರೆ. ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದರು’ ಎಂದು ಬಜರಂಗದಳವರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಠಾಣೆಯಲ್ಲಿ ವಶಕ್ಕೆ ಪಡೆದಿರುವವರ ತೀವ್ರ ವಿಚಾರಣೆ ನಡೆಯುತ್ತಿದೆ.
ಈ ಹಿಂದೆ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಶಾರಿಕ್ ಕದ್ರಿ ದೇವಾಲಯದಲ್ಲಿ ಬಾಂಬ್ ಸ್ಪೋಟಿಸಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದು ಪೋಲೀಸ್ ತನಿಖೆ ಯ ವೇಳೆ ಬೆಳಕಿಗೆ ಬಂದಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗುತ್ತಿದೆ.
ಕದ್ರಿ ದೇಗುಲಕ್ಕೆ ಬೈಕ್ನೊಂದಿಗೆ ನುಗ್ಗಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ದಿ ಕೇರಳ ಸ್ಟೋರಿ ಸಿನಿಮಾ, ಚುನಾವಣೆಗಳು ನಡೆದಿರುವುದರಿಂದ ನಾನಾ ಆಯಾಮಗಳಲ್ಲಿ ವಿಚಾರಣೆ ನಡೆಸುತತ್ತಿದ್ದಾರೆ.
ಈ ಕುರಿತು ವೆರಿಟೋ ಟುಡೇ ಜತೆ ಮಾತನಾಡಿದ ಕದ್ರಿ ಪೋಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರು ದೇವಾಲಯ ಸಮಿತಿಯವರು ದೇಗುಲಕ್ಕೆ ಅಕ್ರಮ ಪ್ರವೇಶ ಮಾಡಿದ ಕುರಿತು ದೂರು ನೀಡಿದ್ದು ಮೂವರ ವಿರುದ್ದವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಈಗ ತನಿಖೆಯಲ್ಲಿ ಆರೋಪಿಗಳ ಹಿನ್ನೆಲೆ ಕುರಿತ ಮಾಹಿತಿ ಸಂಗ್ರಹಿಸಲಾಗುತಿದ್ದು ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.