ಕಳೆದ ಕೆಲವು ತಿಂಗಳುಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ನಂತರ ಪ್ರಸುತ ರಾಜಸ್ಥಾನದ ಬಿಕಾನೇರ ಪ್ರದೇಶದಲ್ಲಿ ಹೆಚ್ಚು ಪ್ರಮಾಣ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು ಭಾರತವು ಚೀನಾ ದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಸ್ವಾವಲಂಬಿಯಾಗಿ ಬೆಳೆಯುತ್ತದೆ. ಮತ್ತು ಇದರಿಂದ ದೇಶದ ಬೇಡಿಕೆಯ ಶೇ.80ರಷ್ಟು ಈಡೇರಲಿದೆ. ಇದು ಜಮ್ಮು-ಕಾಶ್ಮೀರಕ್ಕಿಂತ ದೊಡ್ಡ ನಿಕ್ಷೇಪವಾಗಿದ್ದು ಸರಾಸರಿಯಲ್ಲಿ 5.90 ದಶಲಕ್ಷ ಟನ್ ಎಂದು ಅಂದಾಜು ಮಾಡಲಾಗಿದೆ.
ಲಿಥಿಯಂ ಭಾರತದ ರಾಜಸ್ಥಾನ ಜಮ್ಮು ಮತ್ತು ಕಾಶ್ಮೀರ, ಆಂದ್ರಪ್ರದೇಶ, ಛತ್ತಿಸಗಡ್,ಗುಜರಾತ್ , ತಮಿಳುನಾಡು, ಒಡಿಶಾ ಮತ್ತು ಕರ್ನಾಟಕದಲ್ಲಿ ಹರಡಿಕೊಂಡಿದೆ.
ಲಿಥಿಯಂ ಬೆಳ್ಳಿಯಂತಹ ಬಿಳಿಯಾದ ಲೋಹ, ಇದು ಅತ್ಯಂತ ಹಗುರವಾದ ಲೋಹವಾಗಿರುತ್ತದೆ. ತೇವಾಂಶ ಉಳ್ಳ ಗಾಳಿಗೆ ಇದನ್ನು ತೆರೆದಿಟ್ಟರೆ ಇದು ಬುದು ಬಣ್ಣಕ್ಕೆ ತಿರುಗುತ್ತದೆ.
ಲಿಥಿಯಂ ಪ್ರಕೃತಿಯಲ್ಲಿ ಸ್ವತಂತ್ರವಾಗಿ ದೊರೆಯದೆ ಕಂಪೌಂಡಗಳ ರೂಪದಲ್ಲಿ ದೊರೆಯುತ್ತದೆ.
ಲಿಥಿಯಂ ನೀರಿನಲ್ಲಿ ತೇಲುತ್ತದೆ, ಆದ್ದರಿಂದ ಇದನ್ನು ಸಾಧಾರಣವಾಗಿ ಪೆಟ್ರೋಲಿಯಂ ಜಲ್ಲಿಯಲ್ಲಿ ಶೇಖರಿಸಿಡುತ್ತಾರೆ.
ಲಿಥಿಯಂ ಬೆಂಕಿಯ ಮುಂದಿಟ್ಠಾಗ ಕೆಂಪು ಬಣ್ಣವನ್ನು ಹೊರಹೊಮ್ಮಿಸುತ್ತದೆ.
ಲಿಥಿಯಂನ ಉಪಯೋಗಗಳು :-
• ಶಾಖವನ್ನು ತಡೆದುಕೊಳ್ಳ ಬಲ್ಲ ಗಾಜು, ಪಿಂಗಾಣಿ, ವಿಮಾನಗಳನ್ನು ನಿರ್ಮಿಸಲು ಬೇಕಾಗುವ ಹಗುರ ಹಾಗೂ ಶಕ್ತಿಶಾಲಿ ಮಿಶ್ರಲೋಹಗಳ ಉತ್ಪಾದನೆ, ಲಿಥಿಯಮ್- ಅಯಾನ್ ಬ್ಯಾಟರಿಗಳ ನಿರ್ಮಾಣದಲ್ಲಿ ಇವು ಉಪಯುಕ್ತ.
ಗಮನಾರ್ಹ ಪ್ರಮಾಣದಲ್ಲಿ ಎಲ್ಲ ಜೀವರಾಶಿಗಳಲ್ಲೂ ಲಿಥಿಯಮ್ ಅಂಶವಿರುತ್ತದೆ. ಆದರೆ ಅದು ಇಲ್ಲದಿದ್ದರೂ ಮನುಷ್ಯ ಸಂಪೂರ್ಣವಾಗಿ ಆರೋಗ್ಯವಾಗಿರಬಲ್ಲ. ಹೀಗಾಗಿ, ಅದರ ಅಸ್ತಿತ್ವ ಯಾವ ನಿರ್ದಿಷ್ಟ ಜೀವಕ್ರಿಯೆಗೂ ಸಂಬಂಧಿಸಿಲ್ಲ. ಆದರೆ ಮನುಷ್ಯನ ದೇಹಕ್ಕೆ ಲಿಥಿಯಮ್ ಅಯಾನುಗಳನ್ನು ನೀಡಿ ಮನಸ್ಥಿತಿಯನ್ನು ಸಿಮಿತಕ್ಕೆ ತರಲು ಸಾಧ್ಯವಿದೆ. ಲಿಥಿಯಮ್ ನರಮಂಡಲದ ಪ್ರಭಾವಬೀರಬಲ್ಲದು.
ಲೀಥಿಯಂ ಖನಿಜವು ವಿದ್ಯುತ್ಚಾಲಿತ ವಾಹನಗಳ (ಎಲ್ಲಿಸ್ಟಿಕ್ ವೆಹಿಕಲ್ ಇವಿ) ಬ್ಯಾಟರಿ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಜಗತ್ತಿನ ಶೇ. 75 ಲಿಥಿಯಂ ಚೀನಾ ನಿಯಂತ್ರಣದಲ್ಲಿದೆ. ಜಾಗತಿಕ ಸಂಸ್ಕರಣಿಯ ಶೇಕಡ 75ರಷ್ಟನ್ನು ಚೀನಾ ನಿಯಂತ್ರಿಸುತ್ತದೆ. ಇದೀಗ ಭಾರತದ ಎರಡು ಕಡೆ ದೊಡ್ಡ ಪ್ರಮಾಣದಲ್ಲಿ ಲೀಥಿಯಂ ಖನಿಜ ಸಿಕ್ಕಿರುವುದರಿಂದ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಜತೆಗೆ ಲಿಥಿಯಂನಲ್ಲಿ ಚೀನಾ ಹೊಂದಿರುವ ಜಾಗತಿಕ ಏಕಸ್ವಾಮ್ಯವನ್ನು ಮುರಿಯಲು ಸಾಧ್ಯವಾಗಲಿದೆ. 2020-21ರಲ್ಲಿ ಭಾರತ ಒಟ್ಟು 5,000 ಕೋಟಿ ರೂಪಾಯಿ ಮೌಲ್ಯದ ಲೀಥಿಯಂ ಆಮದು ಮಾಡಿಕೊಂಡಿದೆ.
ಹೀಗಾಗಿ ಈ ಅಪರೂಪದ ಲೀಥಿಯಂ ಪತ್ತೆಗೆ ಸರ್ಕಾರ ದೇಶದಲ್ಲೂ ಹುಡುಕಾಟ ನಡೆಸುತ್ತಿತ್ತು. ದೇಶದಲ್ಲಿ ಮಾರಾಟವಾಗುವ ವಾಹನಗಳಲ್ಲಿ ವಿದ್ಯುತ್ಚಾಲಿತ ವಾಹನಗಳ ಪ್ರಮಾಣ ಕೇವಲ ಶೇಕಡ 1ಕ್ಕಿಂತ ಸ್ವಲ್ಪ ಹೆಚ್ಚಿದೆ. ವಿದ್ಯುತ್ ಚಾಲಿತ ವಾಹನಗಳಿಗೆ ಲೀಥಿಯಂ ಬ್ಯಾಟರಿಯೊಂದೇ ಪರ್ಯಾಯವಾಗಿದೆ.. ಇದು ಹೆಚ್ಚು ಇಂಧನ ದಕ್ಷತೆ ಹೊಂದಿದ್ದು ವಿವಿಧ ತಾಪಮಾನಗಳಲ್ಲಿ ಬ್ಯಾಟರಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಇದು ಒಟ್ಟು ಸುರಕ್ಷಿತವಾಗಿದ್ದು ಅವಲಂಬನೆಯು ಇತರ ವಸ್ತುಗಳ . ಮೇಲಿನ ಅವಲಂಬನೆಗಿಂತ ಹೆಚ್ಚಾಗಿರುತ್ತದೆ.
ಲಿಥಿಯಂಗೆ ಮಹತ್ವ:
ಮೊಬೈಲ್, ಲ್ಯಾಪ್ಟಾಪ್, ಎಲೆಕ್ಟ್ರಿಕ್ ವಾಹನ ಹೀಗೆ ಅನೇಕ ವಿದ್ಯುನ್ಮಾನ ಪರಿಕರಗಳಲ್ಲಿ ಬ್ಯಾಟರಿ ತಯಾರಿಕೆಗೆ ಲೀಥಿಯಂ ಬೇಕೇ ಬೇಕು. ಇಂಗಾಲಾಮ್ಲವನ್ನು ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಎಲ್ಲ ದೇಶಗಳಂತೆ ಭಾರತವೂ ಉತ್ತೇಜಿಸುತ್ತಿದ್ದು, ಸದ್ಯ ಬ್ಯಾಟರಿಗಳ ತಯಾರಿಕೆಗೆ ವಿದೇಶಗಳಿಂದ ಭಾರತವು ಲೀಥಿಯಂ ಅನ್ನು ಆಮದು ಮಾಡಿಕೊಳ್ಳುತ್ತಿದೆ.
ಎಲೆಕ್ಟ್ರಿಕ್ ವಾಹನಗಳು, ಬಹುತೇಕ ಎಲ್ಲಾ ಎಲೆಕ್ಟ್ರಿಕ್ ಉಪಕರಣಗಳಲ್ಲಿ ಬ್ಯಾಟರಿ ತಯಾರಿಕೆಗೆ ಬಳಸುವ ಲೀಥಿಯಂ ಖನಿಜವು ಇಷ್ಟು ದೊಡ್ಡ ಪ್ರಮಾಣದಲ್ಲಿ ಒಂದೇ ಸ್ಥಳದಲ್ಲಿ ಪತ್ತೆಯಾಗಿರುವುದು ಇದೇ ಮೊದಲು. ಇದರಿಂದ ನಿರ್ಣಾಯಕ ಖನಿಜಗಳಿಗಾಗಿ ವಿದೇಶಗಳ ಮೇಲೆ ಅವಲಂಬನೆಯಾಗುವುದು ತಗ್ಗಲಿದ್ದು, ವಾಹನೋದ್ಯಮ, ಎಲೆಕ್ಟ್ರಾನಿಕ್ಸ್ ಹಾಗೂ ಹಲವು ವೈದ್ಯಕೀಯ ಸಲಕರಣೆಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ನೆರವಾಗಲಿದೆ.
ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆಯಲ್ಲಿ ಅತಿ ಹೆಚ್ಚು ವೆಚ್ಚ ಬ್ಯಾಟರಿಯದ್ದೇ ಆಗಿದೆ. ಲೀಥಿಯಂ ಮೇಲೆ ವಿದೇಶಿ ಅವಲಂಬನೆಯೂ ಇದಕ್ಕೆ ಪ್ರಮುಖ ಕಾರಣ. ದೇಶೀಯವಾಗಿ ಲಭ್ಯವಾಗುವ ಲೀಥಿಯಂ ಬಳಸಿದಲ್ಲಿ ಬ್ಯಾಟರಿ ತಯಾರಿಕೆ ವೆಚ್ಚ ತಗ್ಗಲಿದ್ದು, ಇದರಿಂದ ‘ಇವಿ’ಗಳ ಬೆಲೆ ಇಳಿಕೆಯಾಗುತ್ತದೆ. 2030ರ ವೇಳೆಗೆ ಕನಿಷ್ಠ ಶೇ. 30ರಷ್ಟು ಹೊಸ ವಾಹನ ನೋಂದಣಿಗಳು ಎಲೆಕ್ಟ್ರಿಕ್ ಮಾಡುವ ಗುರಿಯನ್ನು ಹೊಂದಿರುವ ಭಾರತಕ್ಕೆ ಲೀಥಿಯಂ ಅಪರೂಪದ ಖನಿಜಗಳಿಗೆ ವಿದೇಶಗಳನ್ನು ಅವಲಂಬಿಸುವುದು ತಪ್ಪುತ್ತದೆ.
ಎಲ್ಲೆಲ್ಲಿ ಲೀಥಿಯಂ ಬಳಕೆ:
ಎಲೆಕ್ಟ್ರಿಕ್ ವಾಹನಗಳು ಹಾಗೂ ಮೊಬೈಲ್ ಫೋನ್, ಲ್ಯಾಪ್ಟಾಪ್, ಡಿಜಿಟಲ್ ಕ್ಯಾಮೆರಾ ಹೀಗೆ ಬಹುತೇಕ ಎಲ್ಲಾ ರೀಚಾಜ್ ಮಾಡುವ ವಿದ್ಯುತ್ ಸಾಧನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ಅತ್ಯಂತ ಮುಖ್ಯವಾದ ಖನಿಜ ಇದಾಗಿದೆ. ಗೊಂಬೆಗಳು ಮತ್ತು ಗಡಿಯಾರಗಳಲ್ಲಿ ಬಳಸುವ ಬ್ಯಾಟರಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಹಾಗೆಯೇ ಸೆಮಿ ಕಂಡಕ್ಟರ್ಗಳ ತಯಾರಿಕೆಗೂ ಲೀಥಿಯಂ ಬಳಸಲಾಗುತ್ತಿದೆ. ಅಲ್ಲದೆ, ಸೆರಾಮಿಕ್ ಮತ್ತು ಗಾಜು, ಗ್ರೀಸ್, ಔಷಧ ಉತ್ಪಾದನೆ, ಎಸಿ, ಅಲ್ಯೂಮಿನಿಯಂ ಉತ್ಪಾದನೆಗೂ ಲೀಥಿಯಂ ಬಳಸಲಾಗುತ್ತದೆ.
ಕರ್ನಾಟಕದ ಹಲವೆಡೆ ಲೀಥಿಯಂ ಪತ್ತೆಯಾಗಿತ್ತು:
ಕರ್ನಾಟಕದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಆನಂದಪುರ, ಕರೆಗುಡ್ಡ, ಜಾಲಹಳ್ಳಿ ಪ್ರದೇಶದಲ್ಲಿಯೂ ಲೀಥಿಯಂ ನಿಕ್ಷೇಪ ಪತ್ತೆಯಾಗಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ತಪ್ಪಲಿನಲ್ಲಿರುವ ಮರಳಗಾಲ ಮತ್ತು ಅಲ್ಲಾಪಟ್ಟಣ ಎಂಬ ಗ್ರಾಮಗಳ ಅಡಿಯಲ್ಲೂ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದಾಗಿ 2021ರಲ್ಲಿ ಭಾರತ ಸರಕಾರ ಘೋಷಿಸಿತ್ತು. ಆದರೆ, ಇದರ ಪ್ರಮಾಣ ಕೇವಲ 1,600 ಟನ್ ಆಗಿರುವುದರಿಂದ ಇದು ನಿರುಪಯುಕ್ತ ಎಂದು ತಜ್ಞರು ಹೇಳಿದ್ದರು.
ಭಾರತದಲ್ಲಿ ಈ ಲಿಥಿಯಂ ನಿಕ್ಷೇಪವು ದೊರೆತಿರುವದರಿಂದ ಸ್ವಾವಲಂಬನೆ ಮಾತ್ರವಲ್ಲದೆ ಜಾಗತೀಕ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.