ಕೆಲವೊಬ್ಬರಿಗೆ ಪ್ರಯಾಣ ಎಂದರೆ ಬಹಳ ಇಷ್ಟವಾದರೂ ಕೂಡ ಪ್ರಯಾಣ ಮಾಡುವಾಗ ತುಂಬಾನೇ ತುಂಬಾ ಹಿಂಸೆ ಅನುಭವಿಸುತ್ತಾರೆ ಕಾರಣ ಮೋಷನ್ ಸಿಕ್ನೆಸ್ . ಬಸ್ಸು ಕಾರು, ವಿಮಾನ, ಹಡಗು ಮತ್ತು ರೈಲುಗಳಲ್ಲಿ ಪ್ರಯಾಣಿಸುವಾಗ ವಾಂತಿ ತಲೆತಿರುಗುವಿಕೆ ಸುಸ್ತು ನಿಮ್ಮನ್ನು ಕಾಡಿ ಹೈರಾಣು ಮಾಡಿಬಿಡುತ್ತದೆ ಇದನ್ನೇ ಮೋಷನ್ ಸಿಕ್ನೆಸ್ ಎನ್ನುತ್ತಾರೆ.
ನಮ್ಮ ಪಂಚೇಂದ್ರಿಯಗಳು ಮತ್ತು ಮೆದುಳಿನ ನಡುವಿನ ಸಂವಹನದ ತೊಡಕು. ಕಣ್ಣು, ಕಿವಿ, ಮೂಗು ಗ್ರಹಿಸುವ ಪ್ರಚೋದನೆಗಳನ್ನು ಅದೇ ವೇಗದಲ್ಲಿ ಪರಿಷ್ಕರಿಸಲು ಮೆದುಳು ವಿಫಲವಾಗುವುದೇ ಮೋಷನ್ ಸಿಕ್ನೆಸ್ ಉಂಟಾಗುತ್ತದೆ.
ಯಾರಲ್ಲಿ ಹೆಚ್ಚು ಈ ಸಮಸ್ಯೆ ಕಾಣಿಸುತ್ತದೆ:
ಕುಟುಂಬ ಸದಸ್ಯರಲ್ಲಿ ಮೋಷನ್ ಸಿಕ್ನೆಸ್ ಉಳ್ಳವರು, ಒಳಕಿವಿಯ ಸಮಸ್ಯೆ ಹೊಂದಿರುವವರು, ಮೈಗ್ರೇನ್ ತಲೆನೋವು ಉಳ್ಳವರು, ಮುಟ್ಟಿನ ದಿನಗಳಲ್ಲಿರುವ ಮಹಿಳೆಯರು, ಗರ್ಭಿಣಿಯರು ಮತ್ತು ಅತಿಯಾಗಿ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವವರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ. ಈ ಸಮಸ್ಯೆ ಕೇವಲ ಪ್ರಯಾಣಕ್ಕೆ ಮಾತ್ರವೇ ಸೀಮಿತವಾಗಿರದೇ ಪುಸ್ತಕ ಓದುವಾಗ, ಚಲನಚಿತ್ರ ನೋಡುವಾಗ, ಎತ್ತರದ ಪ್ರದೇಶದಲ್ಲಿ ನಿಂತಾಗ, ನೀರಿನ ಮಧ್ಯದಲ್ಲಿ ನಿಂತಾಗ ಮುಂತಾದ ಸಂದರ್ಭಗಳಲ್ಲಿ ಸಹಾ ಕಾಣಿಸಿಕೊಳ್ಳಬಹುದಾಗಿದೆ.
ಮೋಷನ್ ಸಿಕ್ನೆಸ್ನ ಲಕ್ಷಣಗಳು:
*ತಲೆಸುತ್ತು
*ತಲೆನೋವು
*ವಾಕರಿಕೆ ಮತ್ತು ವಾಂತಿ
*ಸುಖಾಸುಮ್ಮನೆ ಬೆವರುವಿಕೆ
*ಮಾನಸಿಕ ಕಿರಿಕಿರಿ
*ಹೊಟ್ಟೆಯ ಸಮಸ್ಯೆ ಜೊತೆಗೆ ಹುಳಿತೇಗು
*ಉಸಿರಾಟದ ಏರಿಳಿತ ಮುಂತಾದವು.
ಮೋಷನ್ ಸಿಕ್ನೆಸ್ ಸಮಸ್ಯೆಗೆ ಪರಿಹಾರ:
ಮೋಷನ್ ಸಿಕ್ನೆಸ್ ಒಂದು ಖಾಯಿಲೆ ಅಲ್ಲ ಆದರೂ ಕೂಡ ಇದರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರಿನಂಶ ಇಲ್ಲದೇ ಇರುವಾಗಲೂ ಈ ಸಮಸ್ಯೆ ಕಾಡಬಹುದಾಗಿದ್ದು ಅದರ ಕಡೆಗೆ ಒತ್ತು ನೀಡುವುದು ಅತ್ಯಗತ್ಯ.
*ಪ್ರಯಾಣ ಸಮಯದಲ್ಲಿ ಲಿಂಬೆಹಣ್ಣು, ಪುದೀನಾ ಮತ್ತು ಶುಂಠಿಯನ್ನು ಬಳಸುವುದು.
*ಆಗಾಗ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು.
*ಪ್ರಯಾಣದ ಸಂದರ್ಭದಲ್ಲಿ ಮಿತವಾಗಿ ಆಹಾರ ಸೇವಿಸುವುದು.
*ಕೊಬ್ಬು ಮತ್ತು ಹುಳಿಯ ಅಂಶ ಹೆಚ್ಚಿರುವ ಆಹಾರಗಳನ್ನು ದೂರವಿರಿಸುವುದು.
*ಧ್ಯಾನ ಮತ್ತು ಪ್ರಾಣಾಯಾಮದಂತಹಾ ಅಭ್ಯಾಸಗಳನ್ನು ಇಟ್ಟುಕೊಳ್ಳುವುದು.
*ಪ್ರಯಾಣ ಸಮಯದಲ್ಲಿ ಸುಮಧುರ ಸಂಗೀತ ಆಲಿಸುವುದು.
*ಪ್ರಯಾಣದ ಸಂದರ್ಭದಲ್ಲಿ ಮೋಷನ್ ಸಿಕ್ನೆಸ್ ಲಕ್ಷಣಗಳು ಉಂಟಾದೊಡನೆ ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯುವುದು.
*ಪ್ರಯಾಣಕ್ಕೆ ಅತ್ಯಂತ ಯೋಗ್ಯ ವಾಹನವನ್ನು ಆಯ್ಕೆಮಾಡಿಕೊಳ್ಳಿ.
*ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ ಬಳಕೆ ತಪ್ಪಿಸುವುದು. ಪುಸ್ತಕ ಓದದೇ ಇರುವುದು ಕೂಡ ಉತ್ತಮ ಆಯ್ಕೆ.
*ಸಾಧ್ಯವಾದಷ್ಟು ಗಾಳಿಗೆ ಬರುವ ಸ್ಥಳದಲ್ಲಿ ಕುಳಿತು ಪ್ರಯಾಣ ಮಾಡಿ.
*ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸುವುದು.
*ಕಿಟಕಿ ಪಕ್ಕ ಇರುವ ಸೀಟಿನಲ್ಲಿ ಕುಳಿತುಕೊಳ್ಳುವುದು ಉತ್ತಮ.